ಇಸ್ರೇಲ್ ಸೇನೆ - ಹಮಾಸ್ ಉಗ್ರರ ಯುದ್ಧದಲ್ಲಿ ಅಸಲಿ ಆಟ ಈಗ ಶುರು?
ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರ ನಡುವೆ 1 ತಿಂಗಳಿಂದ ಭೀಕರವಾಗಿ ನಡೆಯುತ್ತಿದ್ದ ಯುದ್ಧ ಈಗ ಬಹುತೇಕ ಅಂತಿಮ ಹಂತ ತಲುಪಿದೆ. ತನ್ನ ಮೇಲೆ ದಾಳಿ ಮಾಡಿದ್ದರೆಂದು, ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ಧ ಕಳೆದ ತಿಂಗಳ 7 ರಂದು ಅಂದ್ರೆ ಅಕ್ಟೋಬರ್ 7 ರಂದು ಯುದ್ಧ ಸಾರಿತ್ತು. ಹೀಗೆ ಯುದ್ಧವು ಶುರುವಾಗಿ 1 ತಿಂಗಳು ಕಳೆಯುವ ಒಳಗಾಗಿ ಆ ಜಾಗ ನರಕವಾಗಿ ಬದಲಾಗಿದ್ದು, ಇದೇ ವೇಳೆ ಯುದ್ಧದಲ್ಲಿ ಅಸಲಿ ಆಟ ಈಗ ಶುರುವಾಗಿದೆ ಅಂತಿದ್ದಾರೆ ತಜ್ಞರು!
ಹಮಾಸ್ ಉಗ್ರರು ಮತ್ತು ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ರಣಭೀಕರ ಕಾಳಗದಲ್ಲಿ ಈವರೆಗೂ ಸುಮಾರು 10,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಬಲಿಯಾಗಿದ್ದಾರೆ. ಈ ನಡುವೆ ಇಸ್ರೇಲ್ ಕಡೆ ಕೂಡ ಸುಮಾರು 1400ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಲ್ಲದೆ ಇನ್ನೂ 200ಕ್ಕೂ ಹೆಚ್ಚು ಒತ್ತೆಯಾಳುಗಳು ಹಮಾಸ್ ಉಗ್ರರ ವಶದಲ್ಲಿ ಇದ್ದಾರೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಇಷ್ಟೆಲ್ಲದರ ನಡುವೆ ಸಾವಿನ ಸಂಖ್ಯೆ 11,000 ಗಡಿಯನ್ನ ದಾಟಿದೆ. ಹೀಗಿದ್ದಾಗ ಇಡೀ ಗಾಜಾ ನಗರವನ್ನ ಇಸ್ರೇಲ್ ಸೇನೆ ಸಂಪೂರ್ಣ ಸುತ್ತುವರಿದಿದೆ.

ಗಾಜಾಪಟ್ಟಿ ಸಂಪೂರ್ಣ ಇಸ್ರೇಲ್ ವಶಕ್ಕೆ?
ಈಗ ಸಿಗುತ್ತಿರುವ ಮಾಹಿತಿ ಪ್ರಕಾರ, ಇಸ್ರೇಲ್ ಸೇನೆಯು ಗಾಜಾ ನಗರವನ್ನ ಸುತ್ತುವರಿದಿದ್ದು ಇನ್ನೇನು ಹಮಾಸ್ ಉಗ್ರರ ನೆಲೆಗಳನ್ನು ಸಂಪೂರ್ಣ ನಾಶ ಮಾಡಲಿದೆಯಂತೆ. ಈವರೆಗೂ ಹಮಾಸ್ ಉಗ್ರರ ಹಿಡಿತದಲ್ಲಿ ಇದ್ದ ಬಹುತೇಕ ನೆಲೆಗಳನ್ನು ಇಸ್ರೇಲ್ ಸೇನೆ ಇದೀಗ ವಶಕ್ಕೆ ಪಡೆದಿದೆ ಎನ್ನಲಾಗಿದೆ. ನಾಳೆ ಒಳಗೆ, ಅಂದ್ರೆ ಮಂಗಳವಾರ ಇಸ್ರೇಲ್ ಪಡೆಗಳು ಗಾಜಾಪಟ್ಟಿ ನಗರ ಪ್ರವೇಶಿಸುವ ಸಾಧ್ಯತೆ ಇದೆಯಂತೆ. ಆದರೆ ಅಸಲಿ ಆಟ ಈಗಿನಿಂದಲೇ ಶುರು ಎಂದು ತಜ್ಞರು ಹೇಳುತ್ತಿದ್ದಾರೆ. ಅದು ಯಾಕೆ ಗೊತ್ತಾ?
ಸುರಂಗದ ಮೂಲಕ ಉಗ್ರರ ದಾಳಿ?
ಹೌದು, ಇದೀಗ ಗಾಜಾಪಟ್ಟಿ ನಗರವನ್ನು ಸುತ್ತುವರಿದಿರುವ ಇಸ್ರೇಲ್ ಸೇನೆ ಇನ್ನೇನು ಅಲ್ಲಿ ಒಳಗೆ ನುಗ್ಗಲಿದೆ. ಆದ್ರೆ ಈಗಾಗಲೇ ಅಲ್ಲಿ ಸುರಂಗ ಮಾರ್ಗ ರಚನೆ ಮಾಡಿಕೊಂಡಿರುವ ಈ ಉಗ್ರ ಪಡೆ, ಇಸ್ರೇಲ್ ಸೇನೆ ಒಳಗೆ ಬಂದ ತಕ್ಷಣ ಹೊಂಚು ಹಾಕಿ ದಾಳಿ ಮಾಡಲು ಸಿದ್ಧತೆ ನಡೆಸಿದೆ ಎನ್ನುವ ಆರೋಪ ಕೇಳಿಬಂದಿದೆ. ಹಮಾಸ್ ಉಗ್ರರು ಗಾಜಾಪಟ್ಟಿ ನಗರದ ಒಳಗಡೆ ಅಡಗುತಾಣವಾಗಿ ಸುರಂಗ ನಿರ್ಮಿಸಿಕೊಂಡಿದ್ದು, ಹಲವು ವರ್ಷಗಳಿಂದ ಯುದ್ಧ ನಡೆಸಲು ಸನ್ನದ್ಧರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಅಂತಾ ಕೂಡ ಹೇಳಲಾಗುತ್ತಿದೆ.

ಗಾಜಾಪಟ್ಟಿ ತೊರೆದ 15 ಲಕ್ಷ ಜನ
ಇದಿಷ್ಟೂ ಒಂದು ಕಡೆಯಾದರೆ, ಮತ್ತೊಂದು ಕಡೆ ಸುಮಾರು 15 ಲಕ್ಷ ಪ್ಯಾಲೆಸ್ತೀನಿಯರು ಗಾಜಾಪಟ್ಟಿ ನಗರವನ್ನು ಬಿಟ್ಟು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಅಂದ್ರೆ ಗಾಜಾಪಟ್ಟಿಯ ಭಾಗದಲ್ಲಿ ವಾಸ ಇದ್ದ ಸುಮಾರು ಶೇಕಡಾ 70ರಷ್ಟು ಜನರು ಈ ಮೂಲಕ ಗಾಜಾ ನಗರವ ತೊರೆದು ಹೋದಂತೆ ಆಗಿದೆ. ಊರು ಬಿಟ್ಟು ಹೋದವರ ಪರಿಸ್ಥಿತಿ ನರಕವಾಗಿದ್ದರೆ, ಇನ್ನು ಜೀವದ ಭಯ ಬಿಟ್ಟು ತಾವು ಇದ್ದಲ್ಲೇ ಇದ್ದ ಉತ್ತರ ಗಾಜಾಪಟ್ಟಿ ನಗರದ ನಿವಾಸಿಗಳಿಗೂ ಸಾವಿರಾರು ಸಮಸ್ಯೆ ಕಾಡುತ್ತಿವೆ. ಅನ್ನ, ನೀರು, ಔಷಧ, ಇಂಧನ ಸಮಸ್ಯೆಯಿಂದ ಇವರು ನರಳಾಡುತ್ತಿದ್ದಾರೆ.
ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧವೇ 5000ಕ್ಕೂ ಹೆಚ್ಚು ರಾಕೆಟ್ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಆದರೆ ಅಷ್ಟೊತ್ತಿಗೆ ಪರಿಸ್ಥಿತಿ ಕೈಮೀರಿತ್ತು. ನೂರಾರು ಜನರ ಅಪಹರಣ ಮಾಡಿದ್ದ ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇಷ್ಟೆಲ್ಲ ಘಟನೆ ನಡುವೆ ಈಗ ಗಾಜಾಪಟ್ಟಿ ನಗರವನ್ನು ಇಸ್ರೇಲ್ ಸೇನೆ ಸುತ್ತುವರಿದಿದೆ ಎನ್ನಲಾಗಿದೆ.












Click it and Unblock the Notifications