ನಿರಾಶ್ರಿತ ಶಿಬಿರದ ಮೇಲೂ ಇಸ್ರೇಲ್ ದಾಳಿ? ಸಾವಿನ ಸಂಖ್ಯೆಯಲ್ಲಿ ಏರಿಕೆ!
ಇಸ್ರೇಲ್ & ಹಮಾಸ್ ಉಗ್ರರ ಯುದ್ಧವು ಈಗಾಗಲೇ ಒಂದೂವರೆ ತಿಂಗಳ ಪ್ರಯಾಣವನ್ನು ಮುಗಿಸಿದ್ದು, ಇನ್ನೇನು ಕೆಲ ದಿನಗಳಲ್ಲಿ ಈ ರಣಕಾಳಗಕ್ಕೆ 2 ತಿಂಗಳು ತುಂಬಲಿದೆ. ಇಬ್ಬರ ಮಧ್ಯೆ ಹೀಗೆ ಹೊತ್ತಿಕೊಂಡಿರುವ ಬೆಂಕಿ ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿದೆ. ಅದ್ರಲ್ಲಿ ಪ್ರಮುಖವಾಗಿ ಗಾಜಾಪಟ್ಟಿ ಸಾಮಾನ್ಯ ಜನರ ಬದುಕು ಬೀದಿಗೆ ಬಿದ್ದಂತಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಇಸ್ರೇಲ್ ಹಾಗೂ ಹಮಾಸ್ ನಡುವೆ ತಿಕ್ಕಾಟ ಇಂದು ನಿನ್ನೆಯದಲ್ಲ, ಹಲವು ದಶಕಗಳಿಂದ ಈ ಫೈಟಿಂಗ್ ನಡೆಯುತ್ತಲೇ ಇದೆ. ಆದರೆ ಕಳೆದ ತಿಂಗಳು ಇಬ್ಬರ ಮಧ್ಯೆ ಸ್ಫೋಟಗೊಂಡ ಕಿಚ್ಚು ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಅಲ್ಲದೆ ಜಾಗತಿಕವಾಗಿ ಮತ್ತೊಂದು ಮಹಾಯುದ್ಧ ಕೂಡ ಆರಂಭವಾಗುವ ಮುನ್ಸೂಚನೆ ಸಿಗುತ್ತಿದೆ. ಹೀಗಿದ್ದಾಗಲೇ ಇಸ್ರೇಲ್ ಸೇನೆ ವಿರುದ್ಧವೇ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ. ಇದೀಗ ಮತ್ತೊಮ್ಮೆ ಇಸ್ರೇಲ್ ಸೇನೆ ಉದ್ದೇಶ ಪೂರ್ವಕವಾಗಿ ನಿರಾಶ್ರಿತರ ಶಿಬಿರದ ಮೇಲೆ ಅಟ್ಯಾಕ್ ಮಾಡಿದ ಆರೋಪ ಕೇಳಿಬಂದಿದೆ.

ನಿರಾಶ್ರಿತರ ಮೇಲೂ ಇಸ್ರೇಲ್ ದಾಳಿ?
ಇದೀಗ ಕೇಳಿಬಂದ ಆರೋಪ ಏನೆಂದರೆ ವೆಸ್ಟ್ ಬ್ಯಾಂಕ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿ ಪರಿಣಾಮ, ಐವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ಯಾಲೆಸ್ತೀನ್‌ನ ನಾಗರಿಕರು ಈ ದಾಳಿಯಿಂದ ಬೆಚ್ಚಿಬಿದ್ದಿದ್ದು ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ದಾಳಿಗೆ 19 ರಿಂದ 25 ವರ್ಷ ಒಳಗಿನ ಯುವಕರೇ ಬಲಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆದ್ರೆ ನಬ್ಲುಸ್ ನಗರದ ಬಲಾಟ ಶಿಬಿರದ ಮೇಲೆ ನಡೆದ ದಾಳಿ ಬಗ್ಗೆ, ಇಸ್ರೇಲ್ ಸೇನೆ ಸದ್ಯ ಯಾವುದೇ ರೀತಿ ರಿಯಾಕ್ಷನ್ ಕೊಟ್ಟಿಲ್ಲ. ಇನ್ನು 1967ರ ಮಧ್ಯಪ್ರಾಚ್ಯ ಕದನದಲ್ಲಿ ವೆಸ್ಟ್ ಬ್ಯಾಂಕ್‌ಗೆ ನುಗ್ಗಿತ್ತು ಇಸ್ರೇಲ್ ಸೇನೆ.
ಗಾಜಾಪಟ್ಟಿ ಜೊತೆ ವೆಸ್ಟ್ ಬ್ಯಾಂಕ್‌ನಲ್ಲಿ ಭಯ
ಅಂದಹಾಗೆ ಉತ್ತರ ಗಾಜಾಪಟ್ಟಿ ಭಾಗದಲ್ಲಿ ಈಗಾಗಲೆ ಹಮಾಸ್ ಉಗ್ರರು & ಇಸ್ರೇಲ್ ಸೇನೆ ಮಧ್ಯೆ ತಿಕ್ಕಾಟ ಜೋರಾಗಿದೆ. ಪರಿಸ್ಥಿತಿ ಹೀಗಿದ್ದಾಗಲೇ ವೆಸ್ಟ್ ಬ್ಯಾಂಕ್ ಮೇಲೆ ಕೂಡ ದಾಳಿ ಆರಂಭವಾಗಿದೆ. ಹೀಗಾಗಿ ಪರಿಸ್ಥಿತಿ ವ್ಯತಿರಿಕ್ತವಾಗುತ್ತಿದ್ದು ಯುದ್ಧ ಇನ್ನೆಷ್ಟು ಜನರನ್ನ ಬಲಿ ಪಡೆಯುತ್ತೋ ಎಂಬ ಆತಂಕದ ಕಾರ್ಮೋಡ ಆವರಿಸಿದೆ. ಮತ್ತೊಂದು ಕಡೆ ಯುದ್ಧವನ್ನು ನಿಲ್ಲಿಸಲು ವಿಶ್ವಸಂಸ್ಥೆ ಸೇರಿ ಜಗತ್ತಿನ ಹಲವು ದೇಶಗಳು ತಮ್ಮ ಪ್ರಯತ್ನ ಮುಂದುವರಿಸಿವೆ ಅಂತಾ ಹೇಳಲಾಗ್ತಿದೆ.

13,000 ಜನರು ಯುದ್ಧಕ್ಕೆ ಬಲಿ
ಅಕ್ಟೋಬರ್ 7ಕ್ಕೆ ಶುರುವಾಗಿದ್ದ ಇಸ್ರೇಲ್ ಮತ್ತು ಹಮಾಸ್ ರಣಕಾಳಗ ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 13,000 ಜನರನ್ನು ಬಲಿಪಡೆದಿದೆ. ಅದರಲ್ಲೂ ಪ್ರಮುಖವಾಗಿ ಇದು ಗಾಜಾಪಟ್ಟಿ ಭಾಗದಲ್ಲೇ ಅತಿಹೆಚ್ಚು ಜನರ ಉಸಿರು ನಿಲ್ಲಿಸಿದ್ದು, ಈವರೆಗೂ ಗಾಜಾಪಟ್ಟಿಯ ಭಾಗ ಸೇರಿ ಸುಮಾರು 12,000 ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಇಸ್ರೇಲ್ ಕಡೆ ಕೂಡ ಸುಮಾರು 1,200 ಜನ ಹಮಾಸ್ ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದಾರೆ.
ಇಸ್ರೇಲ್ & ಅಮೆರಿಕ ನಡುವೆ ಕಿರಿಕ್?
ಒಂದು ಕಡೆ ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ಧ ಭೀಕರ ಕಾಳಗ ನಡೆಸುತ್ತಾ, ಗಾಜಾ ನಗರದ ಮೇಲೆ ತನ್ನ ಹಕ್ಕು ಸಾಧಿಸುತ್ತಿದೆ. ಆದರೆ ಇನ್ನೊಂದೆಡೆ ಇಸ್ರೇಲ್ ಪರ ನಿಂತಿರುವ ಜಗತ್ತಿನ ದೊಡ್ಡಣ್ಣ ಎಂಬ ಖ್ಯಾತಿ ಪಡೆದ ಅಮೆರಿಕ ಮಾತ್ರ ಈ ಬಗ್ಗೆ ಸ್ಪಷ್ಟ ನಿಲುವನ್ನೂ ತೋರಿಸುತ್ತಿಲ್ಲ. ಒಂದು ಕಡೆ ಇಸ್ರೇಲ್ ಸೇನೆಗೆ ಸಹಾಯ ಮಾಡುತ್ತಿದ್ದರೂ, ಮತ್ತೊಂದ್ಕಡೆ ಇಸ್ರೇಲ್ ಸೇನೆಯ ಯುದ್ಧದ ನಿರ್ಧಾರವನ್ನು ವಿರೋಧಿಸುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯವೂ ಗೊಂದಲದ ಗೂಡಾಗಿದೆ. ರಷ್ಯಾ & ಉಕ್ರೇನ್ ಮಧ್ಯೆ ಯುದ್ಧ ನಡೆಯುವಾಗ ಮಧ್ಯಪ್ರಾಚ್ಯ ಕೂಡ ಧಗಧಗಿಸುತ್ತಿದೆ. ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಇಸ್ರೇಲ್ & ಹಮಾಸ್ ಯುದ್ಧ ಈ ಸೂಕ್ಷ್ಮ ವಾತಾವರಣಕ್ಕೆ ಕಿಚ್ಚು ಹಚ್ಚುವುದು ಗ್ಯಾರಂಟಿ.












Click it and Unblock the Notifications