ತಾಲಿಬಾನ್ ಮುಖ್ಯಸ್ಥರನ್ನು ಭೇಟಿಯಾದ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ
ಕಾಬೂಲ್, ಆ. 18: ತಾಲಿಬಾನ್ ಕಮಾಂಡರ್ ಮತ್ತು ಹಕ್ಕಾನಿ ನೆಟ್ ವರ್ಕ್ ಭಯೋತ್ಪಾದಕ ಗುಂಪಿನ ಹಿರಿಯ ನಾಯಕ ಅನಸ್ ಹಕ್ಕಾನಿ, ಅಫ್ಘಾನ್‌ನ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ರನ್ನು ಮಾತುಕತೆಗಾಗಿ ಭೇಟಿ ಮಾಡಿದ್ದಾರೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
ತಾಲಿಬಾನ್ ಸರ್ಕಾರವನ್ನು ಸ್ಥಾಪಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಸಭೆಯಲ್ಲಿ ಹಳೆಯ ಸರ್ಕಾರದ ಮುಖ್ಯ ಶಾಂತಿ ಪ್ರತಿನಿಧಿ ಅಬ್ದುಲ್ಲಾ ಅಬ್ದುಲ್ಲಾ ಜೊತೆಗಿದ್ದರು ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಈ ತಾಲಿಬಾನ್ ಅಧಿಕಾರಿ ಸಭೆಯಲ್ಲಿ ಈ ಹಿಂದಿನ ಸರ್ಕಾರದ ಮುಖ್ಯ ಶಾಂತಿ ಪ್ರತಿನಿಧಿ ಅಬ್ದುಲ್ಲಾ ಅಬ್ದುಲ್ಲಾ ಇದ್ದರು ಎಂಬ ಮಾಹಿತಿ ಹೊರತುಪಡಿಸಿ ಬೇರೆ ಯಾವ ಮಾಹಿತಿಯನ್ನು ನೀಡಲಿಲ್ಲ ಎಂದು ಹೇಳಲಾಗಿದೆ.

ಹಕ್ಕಾನಿ ನೆಟ್ವರ್ಕ್ ರಾಜಧಾನಿ ಕಾಬೂಲ್ ಅನ್ನು ಭಾನುವಾರ ವಶಪಡಿಸಿಕೊಂಡ ತಾಲಿಬಾನ್‌ನ ಒಂದು ಪ್ರಮುಖ ಬಣವಾಗಿದೆ. ಪಾಕಿಸ್ತಾನದ ಗಡಿಯನ್ನು ಆಧರಿಸಿದ ಈ ಜಾಲವು ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಕೆಲವು ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳ ಆರೋಪವನ್ನು ಹೊರಿಸಿತ್ತು.
ಎರಡು ದಿನಗಳ ಹಿಂದೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ಸರ್ಕಾರಿ ಪಡೆಗಳು ಮತ್ತು ತಾಲಿಬಾನ್ ಎರಡೂ ಜನರನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ವಿಡಿಯೋ ಮೂಲಕ ಈ ಮನವಿ ಮಾಡಿಕೊಂಡಿದ್ದರು. ಈ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್‌ಯ ಮಕ್ಕಳು ಕೂಡಾ ಜೊತೆಗಿದ್ದರು.
"ನಾನು ನನ್ನ ಮಕ್ಕಳೊಂದಿಗೆ ಕಾಬೂಲ್‌ನಲ್ಲಿದ್ದೇನೆ ಮತ್ತು ಜನರಿಗೆ ಭದ್ರತೆ ಮತ್ತು ಸುರಕ್ಷತೆಯನ್ನು ಒದಗಿಸುವಂತೆ ನಾನು ತಾಲಿಬಾನ್‌ಗಳನ್ನು ಕೇಳುತ್ತೇನೆ," ಎಂದು ತಮ್ಮ ಮೂವರು ಹೆಣ್ಣುಮಕ್ಕಳನ್ನು ಕಾಣುವ ವೀಡಿಯೊ ಸಂದೇಶದಲ್ಲಿ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ಮನವಿ ಮಾಡಿದ್ದರು.
2001 ರಿಂದ 2014 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಮೀದ್ ಕರ್ಜಾಯ್, ''ಜನರು ತಮ್ಮ ಮನೆಗಳಲ್ಲಿ ಉಳಿಯಲು ಮತ್ತು ಶಾಂತವಾಗಿರಲು'' ವಿನಂತಿ ಮಾಡಿಕೊಂಡರು. ಅವರು ಮತ್ತು ಇತರ ರಾಜಕೀಯ ನಾಯಕರು ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲು ತಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಾರೆ ಎಂದು ಕೂಡಾ ಹೇಳಿದ್ದರು. ಈ ನಡುವೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ತನ್ನ ಪ್ರಮುಖ ತಂಡದೊಂದಿಗೆ ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿತ್ತು.
ಯುಎಸ್ ಬೆಂಬಲಿತ ಅಫ್ಘಾನ್ ಸರ್ಕಾರ ಪತನಗೊಂಡ ನಂತರ ಮತ್ತು ಅಧ್ಯಕ್ಷ ಘನಿ ದೇಶದಿಂದ ಪಲಾಯನ ಮಾಡಿದ ನಂತರ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿದೆ. ಕಾಬೂಲ್‌ನಲ್ಲಿ ನಡೆದ ತಮ್ಮ ಮೊದಲ ಅಧಿಕೃತ ಸುದ್ದಿಗೋಷ್ಠಿಯಲ್ಲಿ, ತಾಲಿಬಾನ್ ಮಹಿಳೆಯರ ಹಕ್ಕುಗಳನ್ನು ಗೌರವಿಸುವುದಾಗಿ, ಇತರ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲಾಗುವುದು ಮತ್ತು ಅಫ್ಘಾನ್ ಸೇನೆಯ ಮಾಜಿ ಸದಸ್ಯರಿಗೆ ಪ್ರತೀಕಾರವನ್ನು ಪಡೆಯುವುದಿಲ್ಲ ಎಂದು ಭರವಸೆ ನೀಡಿದೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋ ತುಣುಕುಗಳು ಜಲಾಲಾಬಾದ್‌ನ ಸ್ಥಳೀಯರು ಬೀದಿಗಿಳಿಯುತ್ತಿರುವುದನ್ನು ತೋರಿಸಿದೆ. ಜನರು ಅಫ್ಘಾನಿಸ್ತಾನದ ರಾಷ್ಟ್ರೀಯ ಧ್ವಜವನ್ನು ಬದಲಾಯಿಸದಂತೆ ತಾಲಿಬಾನ್‌ಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಯುನೈಟೆಡ್ ಸ್ಟೇಟ್ಸ್ ದೇಶದ ಕೇಂದ್ರ ಬ್ಯಾಂಕ್ ಆಗಿರುವ ಡಾ ಅಫ್ಘಾನ್ ಬ್ಯಾಂಕ್ ಗೆ ಸೇರಿದ 9.5 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಸ್ಥಗಿತಗೊಳಿಸಿದೆ ಮತ್ತು ನಗದು ಸಾಗಣೆಯನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್ ಘನಿ ಮತ್ತು ಆತನ ಸಹಾಯಕರಾದ ಹಮ್ದಲ್ಲಾ ಮೊಹೇಬ್ ಮತ್ತು ಫಝಲ್ ಮಹಮೂದ್ ಫಝಲಿಯನ್ನು ಬಂಧಿಸುವಂತೆ ತಜಕಿಸ್ತಾನದ ಅಫ್ಘಾನ್ ರಾಯಭಾರ ಕಚೇರಿ ಇಂಟರ್ ಪೋಲ್ ಪೊಲೀಸರಿಗೆ ಮನವಿ ಮಾಡಿದೆ ಎಂದು ಟೊಲೊ ನ್ಯೂಸ್ ವರದಿ ಮಾಡಿದೆ. ಸಾರ್ವಜನಿಕ ಹಣವನ್ನು ಕದಿಯುವ ಆರೋಪವನ್ನು ಅಶ್ರಫ್ ಘನಿ ಮತ್ತು ಆತನ ಸಹಾಯಕರ ಮೇಲೆ ಹೊರಿಸಲಾಗಿದೆ ಮತ್ತು ಜನರ ಸಂಪತ್ತನ್ನು ಹಿಂಪಡೆಯಲು ಅವರ ಬಂಧನಕ್ಕೆ ವಿನಂತಿಸಲಾಗಿದೆ ಎಂದು ವರದಿಯಲ್ಲಿ ಸೇರಿಸಲಾಗಿದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications