ಟ್ರಂಪ್ ಮುಂದೆ ತೊಡೆ ತಟ್ಟಿ; ಅಮೆರಿಕ ಸೆನೆಟ್‌ನಲ್ಲಿ ಗೆದ್ದ ಎಲ್-ಸಯೀದ್: ಕರ್ನಾಟಕದ ಅಳಿಯ, ಯುಎಸ್‌ನ ಮೊದಲ ಮುಸ್ಲಿಂ ಎಂಪಿ
ಅಮೆರಿಕದ ರಾಜಕೀಯ ಅಖಾಡದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಮುಖಭಂಗ ಅನುಭವಿಸುತ್ತಿದ್ದಾರೆ. ಇಸ್ರೇಲ್ - ಇರಾನ್ ನಡುವಿನ ಯುದ್ಧದ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ನಿರ್ಧಾರ, ಹಣದುಬ್ಬರ, ವಲಸೆ ನಿಯಂತ್ರಣದಲ್ಲಿ ಸೋಲು ಹಾಗೂ ನಿರುದ್ಯೋಗ ಸೇರಿದಂತೆ ಟ್ರಂಪ್‌ನ ಹುಚ್ಚಾಟಕ್ಕೆ ಅಲ್ಲಿಯ ಜನ ಪಾಠ ಕಲಿಸುವ ಕ್ಷಣಗಳು ಬಂದಿವೆ.
ಅಮೆರಿಕದ ರಾಜಕೀಯ ಅಖಾಡದಲ್ಲಿ ಇಸ್ರೇಲ್ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ತೀವ್ರ ಮುಖಾಮುಖಿಗೆ ಇಳಿದಿದ್ದ ಡೆಮಾಕ್ರಾಟ್ ಪಕ್ಷದ ಅಬ್ದುಲ್ ಎಲ್-ಸಯೀದ್ ಈಗ ಮಿಚಿಗನ್ ಸೆನೆಟ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಗೆಲುವು ಅಮೆರಿಕದ ರಾಜಕೀಯದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದೆ. ಈ ಗೆಲುವು ಕರ್ನಾಟಕದೊಂದಿಗೆ ಬೆಸೆದುಕೊಂಡಿರುವುದು ಮತ್ತೊಂದು ವಿಶೇಷ.

ಈ ರಾಜಕೀಯ ನಾಯಕನಿಗೆ ಕರ್ನಾಟಕದ ಕರಾವಳಿಯೊಂದಿಗೆ ಇರುವ ನಂಟು ಕುತೂಹಲ ಮೂಡಿಸಿದೆ. ಎಲ್-ಸಯೀದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರ ಕುಟುಂಬಸ್ಥರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿವೆ. ಇಸ್ರೇಲ್‌ಗೆ ಅಮೆರಿಕದ ಮಿಲಿಟರಿ ಬೆಂಬಲವನ್ನು ಪ್ರಶ್ನಿಸಿ ಟ್ರಂಪ್ ಅವರ ವೈಯಕ್ತಿಕ ಟೀಕೆಗೆ ಗುರಿಯಾಗಿದ್ದ ಎಲ್-ಸಯೀದ್, ಇದೀಗ ಅಮೆರಿಕದ ಸೆನೆಟ್‌ನಲ್ಲಿ ಮೊದಲ ಮುಸ್ಲಿಂ ಸೆನೆಟರ್ ಎಂಬ ಐತಿಹಾಸಿಕ ಸ್ಥಾನ ಪಡೆದಿದ್ದಾರೆ ಎಂಬುದು ಈ ಗೆಲುವಿನ ಮತ್ತೊಂದು ವಿಶೇಷವಾಗಿದೆ.
ಇಸ್ರೇಲ್‌ಗೆ ಅಮೆರಿಕದ ಮಿಲಿಟರಿ ಬೆಂಬಲವನ್ನು ಟೀಕಿಸಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರಿಂದ ವೈಯಕ್ತಿಕ ಟೀಕೆಗೆ ಅಬ್ದುಲ್ ಎಲ್-ಸಯೀದ್ ಗುರಿಯಾಗಿದ್ದರು. ಕರ್ನಾಟಕದ ಕರಾವಳಿಯ ಭಟ್ಕಳದ ಜನ ಹಾಗೂ ಅಮೆರಿಕದ ಮತದಾರರು ಈ ಚುನಾವಣೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಡೆಮಾಕ್ರಟಿಕ್ ಸೆನೆಟ್ ಅಭ್ಯರ್ಥಿ ಅಬ್ದುಲ್ ಎಲ್-ಸಯೀದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರ ಕುಟುಂಬದವರು ಕರ್ನಾಟಕದಲ್ಲಿದ್ದಾರೆ. ಇದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಮನ ಸೆಳೆದಿರುವ ಮಿಚಿಗನ್ ಸೆನೆಟ್ ಸ್ಪರ್ಧೆಯಲ್ಲಿ ಭಾರತೀಯರು, ಕನ್ನಡಿಗರು ಸುದ್ದಿಯಲ್ಲಿದ್ದಾರೆ. ಆದರೆ, ಇಸ್ರೇಲ್ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎಲ್-ಸಯೀದ್ ನೇರವಾಗಿ ಎದುರಿಸಿದ್ದು, ಈ ಚುನಾವಣಾ ಸ್ಪರ್ಧೆಯನ್ನು ಅಮೆರಿಕದ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಅಮೆರಿಕನ್ ಇತಿಹಾಸದಲ್ಲಿ ಮೊದಲ ಮುಸ್ಲಿಂ ಸಂಸದ
42 ವರ್ಷದ ಎಲ್-ಸಯೀದ್ ಅವರು ಮಿಚಿಗನ್‌ನಲ್ಲಿ ನಡೆದ ಅಮೆರಿಕದ ಸೆನೆಟ್ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಸೋಲಿಸಿದ್ದಾರೆ. ಈ ಗೆಲುವಿನೊಂದಿಗೆ ಅವರು ಅಮೆರಿಕದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸಂಸದರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಪತ್ನಿ ಸಾರಾ ಮನೋವೈದ್ಯರು, ಅವರ ಅಜ್ಜ ಜುಕಾಕು ಶಂಶುದ್ದೀನ್ ಅವರು ಮೈಸೂರು ರಾಜ್ಯದಲ್ಲಿ ಆಗಿನ ಮುಖ್ಯಮಂತ್ರಿ ಬಿ.ಡಿ. ಜಟ್ಟಿ ಅವರ ಮಂತ್ರಿಮಂಡಲದಲ್ಲಿ ಸೇವೆ ಸಲ್ಲಿಸಿದ್ದರು. ಸಾರಾ ಅಮೆರಿಕಕ್ಕೆ ತೆರಳುವ ಮೊದಲು ಬೆಂಗಳೂರಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದರು.
ರೋಡ್ಸ್ ವಿದ್ಯಾರ್ಥಿವೇತನ ಪಡೆದಿರುವ ಎಲ್-ಸಯೀದ್, ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಸಾರಾ ಅವರನ್ನು ಭೇಟಿಯಾದರು. ತಮ್ಮ ಪತ್ನಿಯ ದಕ್ಷಿಣ ಭಾರತೀಯ ಕುಟುಂಬದೊಂದಿಗೆ ತಮಗಿರುವ ಆತ್ಮೀಯ ಸಂಬಂಧದ ಬಗ್ಗೆ ಅವರು ಆಗಾಗ್ಗೆ ಮಾತನಾಡಿರುವುದು ಸಹ ಇದೆ.
ನಾನು ಅರಬ್ ಗಿಂತ ಹೆಚ್ಚು ಭಾರತೀಯ: ಎಲ್-ಸಯೀದ್
ನಾನು 20 ವರ್ಷಗಳಿಂದ ದಕ್ಷಿಣ ಭಾರತೀಯ ಕುಟುಂಬದೊಂದಿಗೆ ಒಡನಾಟ ಹೊಂದಿದ್ದೇನೆ. ನಾನು ಈಗ ಅರಬ್ ಗಿಂತ ಹೆಚ್ಚು ಭಾರತೀಯ ಎಂದು ಅವರು ಒಮ್ಮೆ ಸಂದರ್ಶನದಲ್ಲಿ ಹೇಳಿದ್ದರು.
ಇಸ್ರೇಲ್ ಬಗ್ಗೆ ಟ್ರಂಪ್ ಅವರ ವೈಯಕ್ತಿಕ ದಾಳಿ
ಇಸ್ರೇಲ್‌ಗೆ ಅಮೆರಿಕದ ಬೆಂಬಲದ ಕುರಿತಾದ ಚರ್ಚೆಯಲ್ಲಿ, ವಿಶೇಷವಾಗಿ ಗಾಜಾದಲ್ಲಿ ಅದರ ಮಿಲಿಟರಿ ಕಾರ್ಯಾಚರಣೆಯ ಕುರಿತಾದ ಚರ್ಚೆಯಲ್ಲಿ ಎಲ್-ಸಯೀದ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದರು. ಇಸ್ರೇಲ್‌ಗೆ ಬೇಷರತ್ತಾದ US ಮಿಲಿಟರಿ ಸಹಾಯವನ್ನು ವಿರೋಧಿಸಿದ್ದು, ಗಾಜಾದಲ್ಲಿ ಇಸ್ರೇಲ್ ಸರ್ಕಾರದ ಕ್ರಮಗಳನ್ನು ಟೀಕಿಸಿದ್ದಾರೆ.


Click it and Unblock the Notifications
