ದುಬೈನಲ್ಲಿ ದೊಡ್ಡ ಸಂಬಳದ ಭ್ರಮೆ ಬೇಡ! ₹70-80 ಸಾವಿರ ಸಂಬಳದ ಬಗ್ಗೆ ಭಾರತೀಯ ಮಹಿಳೆಯ ಸಲಹೆ
ದುಬೈ: ದುಬೈ ಎಂದಾಕ್ಷಣ ಹೆಚ್ಚಿನ ಸಂಬಳ, ಐಷಾರಾಮಿ ಜೀವನ ಹಾಗೂ ಭರ್ಜರಿ ಅವಕಾಶಗಳು ಎಂಬ ಕಲ್ಪನೆ ಹಲವರಲ್ಲಿದೆ. ಅದರಲ್ಲೂ ಭಾರತದಿಂದ ಉದ್ಯೋಗಕ್ಕಾಗಿ ದುಬೈಗೆ ತೆರಳುವವರು ಅಲ್ಲಿ ಸಿಗುವ ಸಂಬಳವನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ, 'ಇಷ್ಟು ಹಣ ಬಂದರೆ ಸಾಕು' ಎಂದು ಲೆಕ್ಕ ಹಾಕುವುದು ಸಾಮಾನ್ಯ. ಆದರೆ ದುಬೈನಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯೊಬ್ಬರು ಈ ರೀತಿಯ ಲೆಕ್ಕಾಚಾರ ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಶ್ರೀ ಶುಕ್ಲಾ, ದುಬೈಗೆ ಉದ್ಯೋಗಕ್ಕಾಗಿ ತೆರಳುವ ಮುನ್ನ ಸಂಬಳಕ್ಕಿಂತ ಮುಖ್ಯವಾಗಿ ಅಲ್ಲಿನ ಜೀವನ ವೆಚ್ಚವನ್ನು ಗಮನಿಸಬೇಕು ಎಂದು ಸಲಹೆ ನೀಡಿದ್ದಾರೆ.

5-6 ಸಾವಿರ ದಿರ್ಹಂ ಇಲ್ಲದಿದ್ದರೆ ಯೋಚಿಸಿ
"ನೀವು ಭಾರತದಿಂದ ಬರುತ್ತಿದ್ದರೆ, ನಿಮ್ಮ ಕಂಪನಿ ತಿಂಗಳಿಗೆ ಕನಿಷ್ಠ 5,000ರಿಂದ 6,000 ದಿರ್ಹಂ ಸಂಬಳ ನೀಡುವವರೆಗೆ ದುಬೈಗೆ ಬರಬೇಡಿ. ದುಬೈ ತುಂಬಾ ದುಬಾರಿ ನಗರ, ಎಂದು ಅವರು ಹೇಳಿದ್ದಾರೆ.
ಕೆಲವರು 3,000 ದಿರ್ಹಂ ಸಂಬಳವನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ, ಸುಮಾರು ₹70-80 ಸಾವಿರ ಬರುತ್ತದೆ. ಹಾಗಾಗಿ ಈ ಹಣ ಸಾಕಷ್ಟು ಎಂದು ಭಾವಿಸುತ್ತಾರೆ. ಆದರೆ ಇದು ಸರಿಯಾದ ಲೆಕ್ಕಾಚಾರವಲ್ಲ ಎಂದು ಅವರು ಹೇಳಿದ್ದಾರೆ.
ನೀವು ದುಬೈನಲ್ಲಿ ವಾಸಿಸಬೇಕು, ದುಬೈನಲ್ಲೇ ಕೆಲಸ ಮಾಡಬೇಕು ಮತ್ತು ದುಬೈನಲ್ಲೇ ದಿರ್ಹಂನಲ್ಲಿ ಹಣ ಖರ್ಚು ಮಾಡಬೇಕು. ಹೀಗಾಗಿ ದಿರ್ಹಂ ಅನ್ನು ರೂಪಾಯಿಗೆ ಪರಿವರ್ತಿಸಿ ನೋಡುವುದರಿಂದ ವಾಸ್ತವ ಪರಿಸ್ಥಿತಿ ಅರ್ಥವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
2-3 ಸಾವಿರ ದಿರ್ಹಂ ಸಂಬಳ ಪಡೆದವರಿಗೆ ಉಳಿತಾಯ ಕಷ್ಟ
ತಿಂಗಳಿಗೆ 2,000-3,000 ದಿರ್ಹಂ ಸಂಬಳ ಪಡೆಯುವವರು ತಿಂಗಳ ಕೊನೆಯಲ್ಲಿ ಕೈಯಲ್ಲಿ ಯಾವುದೇ ಹಣ ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಬಹುದು ಎಂದು ಶ್ರೀ ಶುಕ್ಲಾ ಹೇಳಿದ್ದಾರೆ.
ದುಬೈನಲ್ಲಿ ಬಾಡಿಗೆ, ಆಹಾರ, ಸಾರಿಗೆ ಸೇರಿದಂತೆ ದಿನನಿತ್ಯದ ಖರ್ಚುಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಸಂಬಳದ ಮೊತ್ತವನ್ನು ಮಾತ್ರ ನೋಡಿ ಉದ್ಯೋಗ ಒಪ್ಪಿಕೊಳ್ಳುವುದು ಅಪಾಯಕಾರಿಯಾಗಬಹುದು ಎಂಬುದು ಅವರ ಎಚ್ಚರಿಕೆಯಾಗಿದೆ.
Dubai salary:ಸಂಬಳ ಮಾತ್ರವಲ್ಲ, ಸಂಪೂರ್ಣ ಪ್ಯಾಕೇಜ್ ನೋಡಿ
ದುಬೈಗೆ ತೆರಳುವ ಮುನ್ನ ಉದ್ಯೋಗದ ಆಫರ್ ಲೆಟರ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ವಿಶೇಷವಾಗಿ ಕಂಪನಿ ವಸತಿ ನೀಡುತ್ತದೆಯೇ, ಸಾರಿಗೆ ವ್ಯವಸ್ಥೆ ಇದೆಯೇ, ಆಹಾರ ಅಥವಾ ಇತರ ಸೌಲಭ್ಯಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು.
ತಿಂಗಳಿಗೆ 3,000ರಿಂದ 4,000 ದಿರ್ಹಂ ಸಂಬಳದ ಉದ್ಯೋಗದ ಆಫರ್ ಬಂದರೆ, ದುಬೈಗೆ ತೆರಳುವ ಮೊದಲು ಅಂದಾಜು ಮಾಸಿಕ ಖರ್ಚಿನ ಸಂಪೂರ್ಣ ಲೆಕ್ಕ ಹಾಕಬೇಕು. ಕೇವಲ 'ದುಬೈನಲ್ಲಿ ಉದ್ಯೋಗ' ಎಂಬ ಕಾರಣಕ್ಕೆ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.
Dubai salary:ಸಾಮಾಜಿಕ ಜಾಲತಾಣದಲ್ಲೂ ಭಾರೀ ಚರ್ಚೆ
ಶ್ರೀ ಶುಕ್ಲಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಕೆಲವರು ದುಬೈನಲ್ಲಿ ಜೀವನ ವೆಚ್ಚ ನಿಜಕ್ಕೂ ಹೆಚ್ಚಾಗಿದೆ ಎಂದು ಒಪ್ಪಿಕೊಂಡಿದ್ದರೆ, ಮತ್ತಷ್ಟು ಮಂದಿ ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳುವ ಮುನ್ನ ಆದಾಯ ಮತ್ತು ಖರ್ಚಿನ ಲೆಕ್ಕಾಚಾರ ಮಾಡುವುದು ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ.
"ದುಬೈ ನಿಜಕ್ಕೂ ದುಬಾರಿ," ಇದು ಉಪಯುಕ್ತ ಸಲಹೆ, ಮುಂಚಿತವಾಗಿ ಸರಿಯಾದ ಯೋಜನೆ ಮಾಡಬೇಕು, ವಿದೇಶಕ್ಕೆ ತೆರಳುವ ಮುನ್ನ ಖರ್ಚು ಲೆಕ್ಕ ಹಾಕಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ದುಬೈನಲ್ಲಿ ಸಿಗುವ ಸಂಬಳವನ್ನು ಭಾರತೀಯ ರೂಪಾಯಿಯಲ್ಲಿ ಪರಿವರ್ತಿಸಿ ನೋಡುವ ಬದಲು, ಆ ಸಂಬಳದಲ್ಲಿ ದುಬೈನಲ್ಲಿ ಜೀವನ ನಡೆಸಲು ಸಾಧ್ಯವೇ ಎಂಬುದನ್ನು ಲೆಕ್ಕ ಹಾಕಬೇಕು ಎಂಬುದು ಅವರ ಪ್ರಮುಖ ಸಲಹೆಯಾಗಿದೆ.


Click it and Unblock the Notifications
