ಪುಟಿನ್ ಜೊತೆ ಟ್ರಂಪ್ ಮಾತುಕತೆ, ನಾಳೆಯೇ ಮುಗಿಯುತ್ತಾ ಯುದ್ಧ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇದೀಗ ದೊಡ್ಡ ತಲೆನೋವು ಶುರುವಾಗಿದೆ, ಪ್ರತಿದಿನ ಮಾಡುವ ಕೆಲಸ ಬಿಟ್ಟು ರಷ್ಯಾ & ಉಕ್ರೇನ್ ಯುದ್ಧದ ಬಗ್ಗೆ ತಲೆಕೆಡಿಸಿಕೊಂಡು ಕೂರುವ ಸ್ಥಿತಿ ಉಂಟಾಗಿದೆ. ಈಗಾಗಲೇ 3 ವರ್ಷ ಮುಗಿಸಿರುವ ರಷ್ಯಾ & ಉಕ್ರೇನ್ ಯುದ್ಧವನ್ನು ಹೀಗೆಯೇ ಬಿಟ್ಟರೆ ಪರಿಸ್ಥಿತಿ ಕೈಮೀರಿ ಹೋಗಲಿದ್ದು, ಇಡೀ ಜಗತ್ತಿಗೇ ಇದು ಗ್ಯಾಂಗ್ರಿನ್ ರೀತಿ ಹರಡುವ ಆತಂಕ ಕಾಡುತ್ತಿದೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಇದೀಗ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಪದೇ ಪದೇ ಫೋನ್ ಮೂಲಕ ಮಾತನಾಡಿ, ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಲು ಡೊನಾಲ್ಡ್ ಟ್ರಂಪ್ ಪ್ರಯತ್ನ ಮಾಡುತ್ತಲೇ ಇದ್ದಾರೆ. ಹೀಗಾಗಿ ವ್ಲಾದಿಮಿರ್ ಪುಟಿನ್ & ಡೊನಾಲ್ಡ್ ಟ್ರಂಪ್ ನಡುವಿನ ಮಾತುಕತೆ ಮಹತ್ವ ಪಡೆದಿದೆ. ಮತ್ತೊಂದು ಕಡೆ ಈ ಯುದ್ಧ ನಿಲ್ಲಿಸದೇ ಹೋದರೆ ಭವಿಷ್ಯದಲ್ಲಿ ಭಾರಿ ದೊಡ್ಡ ಕಂಟಕವೇ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮಾರ್ಚ್ 18ರ ಮಂಗಳವಾರ ಮತ್ತೊಮ್ಮೆ ರಷ್ಯಾದ ಅಧ್ಯಕ್ಷ ಪುಟಿನ್‌ಗೆ ಫೋನ್ ಹಾಕಲಿದ್ದಾರೆ ಟ್ರಂಪ್!

ಯುದ್ಧ ನಿಲ್ಲಿಸುವಂತೆ ಟ್ರಂಪ್ ಒತ್ತಡ?
ಈಗಾಗಲೇ ಹಲವು ಬಾರಿ ವ್ಲಾದಿಮಿರ್ ಪುಟಿನ್ & ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ್ದು, ಉಕ್ರೇನ್ ವಿರುದ್ಧ ಕದನ ವಿರಾಮಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಒಂದು ಕಡೆ ರಷ್ಯಾ ಈ ವಿಚಾರಕ್ಕೆ ಕಿರಿಕ್ ಮಾಡುತ್ತಿದ್ದರೆ ಇನ್ನೊಂದು ಕಡೆ ಉಕ್ರೇನ್ ಕೂಡ ಹಠ ಬಿಡುತ್ತಿಲ್ಲ. ಹೀಗಾಗಿ ಮಂಗಳವಾರ ಈ ಬಗ್ಗೆ ಮಹತ್ವದ ಮಾತುಕತೆ ನಡೆಸಿ, ಆ ಮೂಲಕ ಯುದ್ಧಕ್ಕೆ ಕೊನೆಯ ಮೊಳೆ ಹೊಡೆಯಲು ಸಜ್ಜಾಗಿದ್ದಾರಂತೆ ಅಮೆರಿಕ ಅಧ್ಯಕ್ಷ ಟ್ರಂಪ್.
ವೈಟ್‌ಹೌಸ್ ಅಧಿಕಾರಿಗಳಿಂದ ಸಕಲ ಸಿದ್ಧತೆ!
ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ ವ್ಲಾದಿಮಿರ್ ಪುಟಿನ್ & ಡೊನಾಲ್ಡ್ ಟ್ರಂಪ್ ದೂರವಾಣಿ ಮಾತುಕತೆಗೆ ವೇದಿಕೆ ಸಿದ್ಧವಾಗಿದ್ದು, ಎರಡೂ ದೇಶಗಳ ಅಧಿಕಾರಿಗಳು ಇದಕ್ಕೆ ಬೇಕಾಗಿರುವ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಖುದ್ದು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಆಗಿರುವ ವೈಟ್‌ಹೌಸ್ ಇಬ್ಬರೂ ನಾಯಕರ ಮಾತುಕತೆಗೆ ಸಕಲ ವ್ಯವಸ್ಥೆ ಮಾಡಿದೆ.
ಅದರಂತೆಯೇ ಹಲವು ಪ್ರಮುಖ ವಿಚಾರಗಳು ಚರ್ಚೆಗೆ ಬರಲಿದ್ದು, ಡೊನಾಲ್ಡ್ ಟ್ರಂಪ್ ಇದೇ ವೇಳೆ ಯುದ್ಧವನ್ನ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಬಳಿ ಕೇಳಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇದೀಗ ಇಡೀ ಜಗತ್ತಿನ ಗಮನ ವ್ಲಾದಿಮಿರ್ ಪುಟಿನ್ & ಡೊನಾಲ್ಡ್ ಟ್ರಂಪ್ ಮಾತುಕತೆ ಕಡೆಗೆ ನೆಟ್ಟಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಮಾತುಕತೆಯ ಅಧಿಕೃತ ವಿವರಗಳು ಸಿಗಲಿವೆ.












Click it and Unblock the Notifications