US-Election 2024: ಭಾಷಣವನ್ನು ರದ್ದುಗೊಳಿಸಿದ ಕಮಲಾ ಹ್ಯಾರಿಸ್
ವಾಷಿಂಗ್ಟನ್, ನವೆಂಬರ್ 06: ಅಮೆರಿಕದ ಅಧ್ಯಕೀಯ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ವಿಶ್ವದಾದ್ಯಂತ ಜನರು ಅಮೆರಿಕದ ಮುಂದಿನ ಅಧ್ಯಕ್ಷರು ಯಾರು? ಎಂದು ಕಾದು ನೋಡುತ್ತಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು. ಡೊನಾಲ್ಡ್ ಟ್ರಂಪ್ ಮುನ್ನಡೆ ಕಾಯ್ದುಕೊಂಡಿದ್ದು, ಜಯಭೇರಿ ಬಾರಿಸುವುದು ಖಚಿತವಾಗುತ್ತಿದೆ.
ಒಟ್ಟು 50 ರಾಜ್ಯಗಳಲ್ಲಿ ನಡೆದ ಮತದಾನದ ಮತ ಎಣಿಕೆ ನಡೆಯುತ್ತಿದ್ದು, ಸದ್ಯದ ಮಾಹಿತಿಯಂತೆ ಕಮಲಾ ಹ್ಯಾರೀಸ್ 188, ಡೊನಾಲ್ಡ್ ಟ್ರಂಪ್ 266 ಮತಗಳನ್ನು ಪಡೆದಿದ್ದಾರೆ. ಮತದಾನ ಮುಕ್ತಾಯವಾಗುತ್ತ ಸಾಗಿದ್ದು, ಮತ ಎಣಿಕೆಯೂ ನಡೆಯುತ್ತಿದೆ. ಅಧ್ಯಕ್ಷ ಹುದ್ದೆಗೇರಲು ಬೇಕಾದ ಮ್ಯಾಜಿಕ್ ನಂಬರ್ 270 ಆಗಿದೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಮುನ್ನಡೆ ಪಡೆಯುತ್ತಿದ್ದಂತೆಯೇ ಕಮಲಾ ಹ್ಯಾರಿಸ್ ತಮ್ಮ ಚುನಾವಣಾ ಭಾಷಣವನ್ನು ರದ್ದುಗೊಳಿಸಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಡೊನಾಲ್ಡ್ ಟ್ರಂಪ್ ಫ್ಲೋರಿಡಾದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಮಲಾ ಹ್ಯಾರಿಸ್ ಹಾರ್ವರ್ಡ್ ವಿಶ್ವವಿದ್ಯಾಲಯದ ಅಲ್ಮಾ ಮಥರ್‌ನಲ್ಲಿ ಭಾಷಣವನ್ನು ಮಾಡಲಿದ್ದಾರೆ ಎಂದು ಸಮಯ ನಿಗದಿ ಮಾಡಲಾಗಿತ್ತು. ಆದರೆ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವುದು ಖಚಿತವಾಗುತ್ತಿದ್ದಂತೆಯೇ ಕಮಲಾ ತಮ್ಮ ಭಾಷಣವನ್ನು ರದ್ದುಗೊಳಿಸಿದ್ದಾರೆ.
ಸಂಪೂರ್ಣ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಗುರುವಾರ ಕಮಲಾ ಹ್ಯಾರಿಸ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ. ಈ ಬಾರಿಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆಲುವು ಸಾಧಿಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಕಮಲಾ ಹ್ಯಾರಿಸ್ ಪರವಾಗಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಮಾ ಸಹ ಬಿರುಸಿನ ಪ್ರಚಾರವನ್ನು ನಡೆಸಿದ್ದರು.
ಡೊನಾಲ್ಡ್ ಟ್ರಂಪ್ ಫ್ಲೋರಿಡಾದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇದಿಕೆಯಲ್ಲಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಚುನಾವಣೆಯಲ್ಲಿ ಎಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ ಪರವಾಗಿ ಪ್ರಚಾರ ನಡೆಸಿದ್ದರು. ಆದ್ದರಿಂದ ಅವರು ಗೆಲುವಿನ ಭಾಷಣದಲ್ಲಿ ಟ್ರಂಪ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವು ಸಾಧಿಸಿ 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗುವುದು ಖಾತ್ರಿಯಾಗಿದೆ. ಆದ್ದರಿಂದ ಚುನಾವಣೆಯಲ್ಲಿ ಸೋಲುವ ಮಾಹಿತಿ ಸಿಕ್ಕಿರುವ ಕಮಲಾ ಹ್ಯಾರಿಸ್ ತಮ್ಮ ಭಾಷಣ ರದ್ದು ಮಾಡಿದ್ದಾರೆ.
ಟ್ರಂಪ್ ಮುನ್ನಡೆ ಕಾಯ್ದುಕೊಂಡು ಅಧ್ಯಕ್ಷರಾಗುವುದು ಖಚಿತವಾಗುತ್ತಿದ್ದಂತೆಯೇ ಎಲಾನ್ ಮಸ್ಕ್ 'ಗೇಮ್, ಸೆಟ್ ಅಂಡ್ ಮ್ಯಾಚ್' ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರನ್ನು ಜುಲೈನಲ್ಲಿ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಬಳಿಕ ಎಲಾನ್ ಮಸ್ಕ್ ಚುನಾವಣಾ ಪ್ರಚಾರವನ್ನು ಬಹಿರಂಗವಾಗಿ ಅವರ ಪರವಾಗಿ ಮಾಡಿದ್ದಾರೆ. ಟ್ರಂಪ್ ಚುನಾವಣಾ ಪ್ರಚಾರಕ್ಕೆ ದೇಣಿಗೆಯನ್ನು ಸಹ ನೀಡಿದ್ದಾರೆ.
ಕಮಲಾ ಹ್ಯಾರಿಸ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ವೊಂದರನ್ನು ಬುಧವಾರ, 'ಈ ಅಭಿಯಾನದ ಸಮಯದಲ್ಲಿ ಶ್ರಮಿಸಿದ ಹಾಗೂ ಸಂತಸವನ್ನು ಮರಳಿ ತಂದ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಹೇಳಿದ್ದಾರೆ.












Click it and Unblock the Notifications