ಭಾರತದ ಜೊತೆಗೆ ಗಲ್ವಾನ್ ಘರ್ಷಣೆ ನಂತರ ಪಮಾಣು ಪರೀಕ್ಷೆ ನಡೆಸಿದ್ದ ಚೀನಾ: ಟ್ರಂಪ್ ತಂಡದ ಆರೋಪ | Donald Trump
ಭಾರತ ಮತ್ತು ಚೀನಾ ನಡುವೆ 2020 ಕೊರೊನಾ ಕಂಟಕದ ಸಮಯದಲ್ಲಿ ಭೀಕರ ಯುದ್ಧ ನಡೆದು ಹೋಗುವ ಆತಂಕ ಆವರಿಸಿತ್ತು. ಗಾಲ್ವಾನ್ ಕಣಿವೆಯ ಘರ್ಷಣೆ ನಂತರ, ಎರಡೂ ದೇಶಗಳು ಯುದ್ಧಕ್ಕೆ ಸಿದ್ಧತೆ ನಡೆಸಿರುವ ಭಯ ಆವರಿಸಿತ್ತು. ಇದೇ ವಿಚಾರವಾಗಿ ಈಗ ಮತ್ತೊಂದು ಸ್ಫೋಟಕ ಆರೋಪವನ್ನ ಮಾಡಿದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡ. ಗಾಲ್ವಾನ್ ಕಣಿವೆ ಘರ್ಷಣೆ ನಡೆದು, ಕೇವಲ ಒಂದು ದಿನದ ನಂತರ ಚೀನಾ ರಹಸ್ಯ ಪರಮಾಣು ಬಾಂಬ್ ಪರೀಕ್ಷೆ ನಡೆಸಿತ್ತು ಎಂದು ಟ್ರಂಪ್ ಅವರ ತಂಡ ಆರೋಪ ಮಾಡಿದೆ.
ಗಾಲ್ವಾನ್ ಕಣಿವೆ ಭಾಗದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ದೊಡ್ಡ ಘರ್ಷಣೆ ಸಂಭವಿಸಿ, ಎರಡೂ ಕಡೆ ಭಾರಿ ದೊಡ್ಡ ಮಟ್ಟದಲ್ಲಿ ಸಾವು & ನೋವು ಸಂಭವಿಸಿತ್ತು. ಈ ಘಟನೆ ನಡೆದು ಇನ್ನೇನು 6 ವರ್ಷ ಪೂರ್ಣಗೊಳ್ಳಲಿದೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಅವರ ತಂಡ ಮಾಡಿರುವ ಈ ಆರೋಪ ತಲ್ಲಣ ಸೃಷ್ಟಿಸಿದೆ. ಗಾಲ್ವಾನ್ ಕಣಿವೆ ಭಾರತ ಮತ್ತು ಚೀನಾ ಗಡಿಯಲ್ಲಿ ಬರುತ್ತದೆ, ಇದು ಭಾರತದ ಪ್ರದೇಶವಾಗಿದ್ದು ಇಲ್ಲಿ ಚೀನಾ ಸೈನಿಕರು ಬರುವಂತೆ ಇಲ್ಲ ಎಂಬುದನ್ನ ಭಾರತದ ವೀರ ಯೋಧರು ತಿಳಿಸಿದ್ದರು. ಆದರೆ ಅದೇ ಸಮಯದಲ್ಲಿ ಕಿರಿಕ್ ತೆಗೆದಿದ್ದ ಚೀನಾ ಸೇನೆಗೆ ತಕ್ಕ ಪಾಠವನ್ನ ಕೂಡ ಕಲಿಸಿದ್ದರು ಭಾರತದ ಸೈನಿಕರು. ಈ ಘಟನೆ ನಂತರ ಚೀನಾ ಮತ್ತು ಭಾರತದ ಸಂಬಂಧವು ತೀವ್ರವಾಗಿ ಹಾಳಾಗಿ ಹೋಗಿತ್ತು.

ಪರಮಾಣು ಬಾಂಬ್ ಪರೀಕ್ಷೆ ನಡೆಸಿದ್ದ ಚೀನಾ?
ಚೀನಾ ಸೈನಿಕರು ಭಾರತದ ಜೊತೆಗೆ ಘರ್ಷಣೆ ನಡೆಸಿದ ನಂತರ, 2020 ಜೂನ್ 15 ಬಳಿಕ ಚೀನಾದ ಸೇನೆ ಭಯಾನಕ ಪರಮಾಣು ಪರೀಕ್ಷೆ ನಡೆಸಿತ್ತು. ಆದರೆ ಈ ಪರಮಾಣು ಪರೀಕ್ಷೆ ಪರೀಕ್ಷಾ ನಿಷೇಧ ಬದ್ಧತೆ ಉಲ್ಲಂಘಿಸುತ್ತದೆ ಎಂಬ ಕಾರಣಕ್ಕೆ, ಪರೀಕ್ಷೆ ನಡೆಸಿದ್ದಕ್ಕೆ ಇದ್ದ ಪುರಾವೆಗಳನ್ನೂ ನಾಶ ಮಾಡಿ ಹಾಕಲಾಗಿದೆ ಎಂದು ಕೂಡ ಅಮೆರಿಕ ಆರೋಪ ಮಾಡಿದೆ. ಚೀನಾ ವಿರುದ್ಧ ಕೇಳಿಬಂದ ಈ ಆರೋಪ ಗಲ್ವಾನ್ ಗಡಿ ಘರ್ಷಣೆಯ ನಂತರ ಪರಮಾಣು ಯುದ್ಧದ ಸಾಧ್ಯತೆ ಇತ್ತಾ? ಎಂಬ ಚರ್ಚೆಗೂ ನಾಂದಿ ಹಾಡಿದೆ.
ಚೀನಾ ಸೇನೆ ಪರಮಾಣು ಬಾಂಬ್ ಪರೀಕ್ಷೆಯನ್ನ ನಡೆಸಿದ್ದ ಬಗ್ಗೆ, ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರಣ & ಅಂತಾರಾಷ್ಟ್ರೀಯ ಭದ್ರತೆ ಅಧೀನ ಕಾರ್ಯದರ್ಶಿ ಆಗಿರುವ ಥಾಮಸ್ ದಿನನ್ನೊ ಗಂಭೀರ ಆರೋಪವನ್ನ ಮಾಡಿದ್ದಾರೆ. ಹಾಗೇ ಈ ಆರೋಪ ಈಗ ಜಗತ್ತಿನ ಮೂಲೆ ಮೂಲೆಯಲ್ಲಿ ಹೊಸ ಸಂಚಲನಕ್ಕೆ ಕೂಡ ಕಾರಣವಾಗಿದೆ. ಹಾಗೇ ಅಂತಾರಾಷ್ಟೀಯ ಮಟ್ಟದಲ್ಲಿ ಈ ವಿಚಾರವನ್ನ ಮುನ್ನೆಲೆಗೆ ತಂದು ಆ ಮೂಲಕ ಚೀನಾ ವಿರುದ್ಧ ಹೊಸ ಅಸ್ತ್ರ ಬಳಸಲು ಅಮೆರಿಕ ಸಜ್ಜಾದಂತೆ ಕಾಣುತ್ತಿದೆ.
ಗಲ್ವಾನ್ ಗಡಿಯಲ್ಲಿ ಭೀಕರ ಘರ್ಷಣೆ
ಚೀನಾ ಪದೇ ಪದೇ ಭಾರತದ ಗಡಿ ಭಾಗಕ್ಕೆ ಬಂದು ಕಿರಿಕ್ ಮಾಡುವುದು, ಭಾರತದ ಗಡಿಯ ಒಳಗೆ ಬಂದು ಟೆಂಟ್ ಹಾಕುವುದು ಪದೇ ಪದೇ ನಡೆಯುತ್ತಿತ್ತು. ಇದೇ ರೀತಿಯಾಗಿ 2020 ಜೂನ್ ತಿಂಗಳಲ್ಲಿ ಕೂಡ ಭಾರತದ ಗಡಿಯ ಒಳಗಡೆ ಬಂದಿದ್ದ ಚೀನಾ ಸೈನಿಕರು ಕ್ಯಾತೆ ತೆಗೆದಿದ್ದರು. ಈ ವೇಳೆ ಗಲಾಟೆ ಶುರುವಾಗಿ ಚೀನಾ ಸೈನಿಕರಿಗೆ ಭಾರತದ ಯೋಧರು ಸರಿಯಾಗಿ ಪಾಠ ಕಲಿಸಿದ್ದರು. ಭಾರತ & ಚೀನಾ ಗಡಿ ಭಾಗದಲ್ಲಿ ನಡೆದಿದ್ದ ಈ ಘಟನೆ ಜಾಗತಿಕ ಮಟ್ಟದಲ್ಲೂ ಯುದ್ಧ ಭಯ ಆವರಿಸುವಂತೆ ಮಾಡಿತ್ತು.
ಗಡಿ ಪ್ರದೇಶದಲ್ಲಿ ಬಂದೂಕು & ಸ್ಫೋಟಕ ಬಳಕೆ ನಿಷೇಧಿಸುವ 1996ರ ಒಪ್ಪಂದಕ್ಕೆ ಬದ್ಧರಾಗಿ ಯಾವುದೇ ಅಸ್ತ್ರಗಳನ್ನ ಬಳಕೆ ಮಾಡದೆ ತಿಕ್ಕಾಟ ನಡೆಸಲಾಗಿತ್ತು. ಈ ಗಲಾಟೆಯಲ್ಲಿ ಎರಡೂ ಕಡೆಯೂ ಜೀವಹಾನಿ ಆಗಿದ್ದು, ದೊಡ್ಡ ಮಟ್ಟದಲ್ಲಿ ಆತಂಕ ಹುಟ್ಟುಹಾಕಿತ್ತು. ಆದರೆ ಇದೀಗ ಚೀನಾ ವಿರುದ್ಧ ಡೊನಾಲ್ಡ್ ಟ್ರಂಪ್ ಅವರ ತಂಡ ಮಾಡಿರುವ ಆರೋಪ ಬಿರುಗಾಳಿ ಎಬ್ಬಿಸಿದೆ. ಭಾರತ ಈ ಬಗ್ಗೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ, ಹೀಗಾಗಿ ಭಾರತದ ನಡೆಯು ಕೂಡ ತೀವ್ರ ಕುತೂಹಲ ಕೆರಳಿಸುತ್ತಿದೆ.












Click it and Unblock the Notifications