Donald Trump: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವೆಸ್ಟ್ ಲಾನ್‌ನಲ್ಲಿರುವ ಬೃಹತ್ ತಾತ್ಕಾಲಿಕ ವೇದಿಕೆಯಲ್ಲಿ ನಡೆಯುವ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಬೇಕಿದ್ದರೂ ಹೆಚ್ಚಿನ ಶೀತದ ಮುನ್ಸೂಚನೆಯಿಂದ ಒಳಾಂಗಣಕ್ಕೆ ಸ್ಥಳಾಂತರಿಸಲಾಯಿತು. ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಗುಂಡಿನ ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದರು. ಇದು ಅಮೆರಿಕ ರಾಜಕೀಯದ ಚಿತ್ರಣವನ್ನೇ ಬದಲಾಯಿಸಿತು. ಕಮಲಾ ಹ್ಯಾರಿಸ್‌ರನ್ನು ಮಣಿಸಿದ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷಾರಿ ಆಯ್ಕೆಯಾದರು.

ಯುಎಸ್‌ನಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಗಡೀಪಾರು ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ರಾಜಕೀಯ ಶತ್ರುಗಳ ವಿರುದ್ಧ ಪ್ರತಿಕಾರ ತೀರಿಸುವ ಮತ್ತು ಜಗತ್ತಿನಲ್ಲಿ ಮತ್ತೆ ಅಮೆರಿಕದ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತೇನೆ ಎನ್ನುವ ಭರವಸೆಗಳನ್ನು ನೀಡಿದ್ದ ಟ್ರಂಪ್, ಸೋಮವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಇಡೀ ವಿಶ್ವವೇ ಅಮೆರಿಕದತ್ತ ನೋಡುತ್ತಿದೆ.
ನಾಲ್ಕು ವರ್ಷ ಟ್ರಂಪ್ ಸರ್ಕಾರ
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಂದಿನ ನಾಲ್ಕು ವರ್ಷಗಳು ಅಮೆರಿಕ ಅಭಿವೃದ್ಧಿಗಾಗಿ ತಾವು ರೂಪಿಸಿರುವ ಯೋಜನೆಗಳು, ಕನಸುಗಳ ಬಗ್ಗೆ ಭಾಷಣ ಮಾಡಿದರು. ಅಮೆರಿಕವನ್ನು ಮತ್ತೆ ಗ್ರೇಟ್ ಮಾಡುವುದಾಗಿ ಶಪಥ ಮಾಡಿದರು.
ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಲಸೆ, ಇಂಧನ ಮತ್ತು ಸುಂಕಗಳ ಕುರಿತು ಮಹತ್ವದ ಆದೇಶಗಳಿಗೆ ಸಹಿ ಹಾಕಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಅದರಲ್ಲೂ ಟ್ರಂಪ್ ವಲಸಿಗರ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಹಲವು ರಾಷ್ಟ್ರಗಳಿಗೆ ಆತಂಕ ಶುರುವಾಗಿದೆ.
ಪ್ರಮುಖ ನಾಯಕರು, ಉದ್ಯಮಿಗಳು ಭಾಗಿ
ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹಲವು ದೇಶಗಳ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಅಮೆರಿಕದ ಪ್ರಮುಖ ಉದ್ಯಮಿಗಳು ಕೂಡ ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಭಾರತ ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಜೈಶಂಕರ್ ಭಾಗವಹಿಸಿದ್ದರೆ. ಪ್ರಮುಖ ಉದ್ಯಮಿಗಳಾದ ಮುಖೇಶ್ ಅಂಬಾನಿ, ನೀತಾ ಅಂಬಾನಿ ಕೂಡ ಭಾಗವಹಿಸಿದ್ದರು. ಇದರ ಜೊತೆಗೆ ಪಂಕಜ್ ಬನ್ಸಾಲ್, ಕಲ್ಪೇಶ್ ಮೆಹ್ತಾ, ಆಶಿಶ್ ಜೈನ್ ಕೂಡ ಭಾಗವಹಿಸಿದ್ದರು.
ಗೂಗಲ್ ಸಿಇಒ ಸುಂದರ್ ಪಿಚೈ, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್, ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












Click it and Unblock the Notifications