Donald Trump: 3ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಲು ಡೊನಾಲ್ಡ್ ಟ್ರಂಪ್ ತಂತ್ರ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದಾದ ನಂತರ ಒಂದು ಕಿರಿಕ್ ಮಾಡಿಕೊಳ್ಳುತ್ತಾ, ಇಡೀ ಜಗತ್ತಿನ ಗಮನ ಸೆಳೆಯುತ್ತಾ ವಿವಾದ ಎಬ್ಬಿಸುತ್ತಿದ್ದಾರೆ. ಸ್ವತಃ ತಮ್ಮ ಸ್ವಂತ ದೇಶದಲ್ಲೂ ಡೊನಾಲ್ಡ್ ಟ್ರಂಪ್ ವಿವಾದದ ಬಿರುಗಾಳಿ ಎಬ್ಬಿಸಿದ್ದು, ಅಮೆರಿಕದ ಸಂವಿಧಾನ ಬದಲಾವಣೆ ಮಾಡುವ ಮಾತು ಹೇಳಿದ್ದಾರೆ. ಈ ಮೂಲಕ, 3ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಲು ಟ್ರಂಪ್ ತಂತ್ರ ಹೂಡಿದ್ದಾರಾ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಕಿರಿಕ್ ಜಾಗತಿಕವಾಗಿ ಸಂಚಲನವೇ ಸೃಷ್ಟಿ ಮಾಡಿದೆ. ಟ್ರಂಪ್ ಈಗಾಗಲೇ ಗ್ರೀನ್‌ಲ್ಯಾಂಡ್ & ಪನಾಮ ವಿಚಾರದ ಬಗ್ಗೆ ಮಾತನಾಡಿ, ಭಾರಿ ಹಲ್‌ಚಲ್ ಎಬ್ಬಿಸಿದ್ದರು. ಗ್ರೀನ್‌ಲ್ಯಾಂಡ್ ಖರೀದಿ ಮಾಡ್ತೀನಿ ಅಂತಾ ಹೇಳಿದ್ದ ಟ್ರಂಪ್ ಪನಾಮ ಕಾಲುವೆ ಮೇಲೆ ಕೂಡ ಕಣ್ಣಿಟ್ಟಿದ್ದರು. ಇಷ್ಟೆಲ್ಲದರ ಮಧ್ಯೆ ಕೆನಡಾ ದೇಶವನ್ನೇ ಅಮೆರಿಕ ಜೊತೆ ವಿಲೀನ ಮಾಡಲು ಟ್ರಂಪ್ ಮುಂದಾಗಿದ್ದರು. ಈ ವಿವಾದಗಳ ನಡುವೆ ಇದೀಗ 3ನೇ ಬಾರಿಗೆ ಅಮೆರಿಕ ಅಧ್ಯಕ್ಷನಾಗಿ ಆಯ್ಕೆ ಆಗುವ ಬಗ್ಗೆಯೂ ಮಾತನಾಡಿದ್ದಾರೆ ಟ್ರಂಪ್.

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ...
2016 ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಡೊನಾಲ್ಡ್ ಟ್ರಂಪ್, 2020 ರಲ್ಲಿ ಸೋತು ಹೋಗಿದ್ದರು. ಇದೀಗ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದಾರೆ. ಹೀಗಿದ್ದಾಗ 3ನೇ ಬಾರಿಗೆ ಅಮೆರಿಕ ಅಧ್ಯಕ್ಷ ಸ್ಥಾನ ಪಡೆಯುವ ಆಸೆಯ ಹೊಂದಿರುವ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಟ್ರಂಪ್ ಹೇಳಿದ್ದು ಏನು? ಮುಂದೆ ಓದಿ.
ಟ್ರಂಪ್ 3ನೇ ಅವಧಿಗೂ ಅಧ್ಯಕ್ಷ?
ಡೊನಾಲ್ಡ್ ಟ್ರಂಪ್ ಈಗ ಅಮೆರಿಕ ಸಂವಿಧಾನದ 22ನೇ ತಿದ್ದುಪಡಿ ಬಗ್ಗೆ ಮಾತನಾಡಿದ್ದಾರೆ. ಅಮೆರಿಕ ಸಂವಿಧಾನದ 22ನೇ ತಿದ್ದುಪಡಿ ಒಬ್ಬ ವ್ಯಕ್ತಿಗೆ ಎರಡು ಅವಧಿಗೆ ಮಾತ್ರ ಅಧ್ಯಕ್ಷನಾಗುವ ಅವಕಾಶ ನೀಡಿದೆ. ಹೀಗಿದ್ದಾಗ, 3ನೇ ಅವಧಿಗೂ ನಾನೇ ಅಧ್ಯಕ್ಷನಾಗಿ ಆಯ್ಕೆ ಆಗಬೇಕೆಂದು ಬಹಳಷ್ಟು ಜನ ಬಯಸುತ್ತಿದ್ದಾರೆ ಎಂದಿದ್ದಾರೆ ಟ್ರಂಪ್. ಅಲ್ಲದೇ, ಅದಕ್ಕಾಗಿ ನಾವು ಬಹಳ ದೂರ ಕ್ರಮಿಸಬೇಕಿದೆ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಈಗಾಗಲೇ ಈ ಬಗ್ಗೆ ತಯಾರಿ ಆರಂಭಿಸಿರುವ ಮುನ್ಸೂಚನೆ ನೀಡಿದ್ದಾರೆ ಡೊನಾಲ್ಡ್ ಟ್ರಂಪ್.
ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಮಾತುಗಳು ಇದೀಗ ಭಾರಿ ಸಂಚಲನ ಸೃಷ್ಟಿಸುತ್ತಿದ್ದು, ಒಂದು ಕಡೆ ತೆರಿಗೆ ಯುದ್ಧದ ಮೂಲಕ ಭಯ ಹುಟ್ಟಿಸಿದ್ದಾರೆ. ಇನ್ನೊಂದು ಕಡೆ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ 3ನೇ ಬಾರಿಗೆ ಆಯ್ಕೆಯಾಗುವ ಮಾತು ಆಡಿದ್ದಾರೆ. ಇದು ಈಗ ಸ್ವತಃ ಅಮೆರಿಕದಲ್ಲಿ ಬಿರುಗಾಳಿ ಎಬ್ಬಿಸಿದೆ.












Click it and Unblock the Notifications