ಇಮ್ರಾನ್ ಖಾನ್ ಜೈಲು ಶಿಕ್ಷೆ ಬಗ್ಗೆ ಮಹತ್ವದ ಆದೇಶ ಪ್ರಕಟ!
ಪಾಕಿಸ್ತಾನದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ವೇಳೆಗೆ, ಇಮ್ರಾನ್ ಖಾನ್ ಬೆಂಬಲಿಗರಿಗೂ ಸಂತಸ ಹೆಚ್ಚಾಗಿತ್ತು. ಹೇಗಾದರೂ ಇಮ್ರಾನ್ ಖಾನ್ ಬಿಡುಗಡೆ ಆಗೋದ್ರೆ, ಈ ಬಾರಿಯು ಕೂಡ ಇಮ್ರಾನ್ ಖಾನ್ ಗೆಲ್ಲುವುದು ಗ್ಯಾರಂಟಿ ಅಂತ ಅಂದುಕೊಂಡಿದ್ದರು. ಆದ್ರೆ ಅವರ ಕನಸು ಕನಸಾಗಿಯೇ ಉಳಿದಿದೆ. ಇಮ್ರಾನ್ ಹೊರಗೆ ಬರುವುದು ಬಿಡಿ ಜೈಲಿನಲ್ಲೂ ಇದೀಗ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತಿಲ್ಲ.
ಹೌದು, ಇಮ್ರಾನ್ ಖಾನ್ ವಿರುದ್ಧ ಒಂದಲ್ಲ ಒಂದು ಬಲೆ ಹೆಣೆಯಲಾಗುತ್ತಿದೆ ಎಂಬ ಬಗ್ಗೆ ಪದೇ ಪದೆ ಆರೋಪ ಕೇಳಿಬರುತ್ತಿದೆ. ಅದರಲ್ಲೂ ಪಾಕಿಸ್ತಾನ ರಾಜಕೀಯ ಚಕ್ರವ್ಯೂಹದಲ್ಲಿ ಸಿಲುಕಿರುವ ಇಮ್ರಾನ್‌ಗೆ ಏನು ಮಾಡಬೇಕು? ಅನ್ನೋದೆ ತೋಚುತ್ತಿಲ್ಲ. ಹೀಗಿದ್ದಾಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಇಮ್ರಾನ್ ಖಾನ್. ಅರೆರೆ ಈಗಾಗಲೇ ಜೈಲಿನಲ್ಲಿ ಒದ್ದಾಡುತ್ತಿರುವ ಇಮ್ರಾನ್‌ಗೆ ಮತ್ತೆ ಏನು ಸಂಕಷ್ಟ ಬರೋದಕ್ಕೆ ಸಾಧ್ಯ ಗುರೂ? ಅಂದ್ರಾ, ಇಲ್ಲೇ ಇರೋದು ಅಸಲಿ ವಿಷಯ.

14 ದಿನಗಳ ಕಾಲ ಮತ್ತೆ ಲಾಕ್!
ಹೌದು, ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ಗೆ ಪಾಕಿಸ್ತಾನದ ಕೋರ್ಟ್ ಮತ್ತೆ ಶಾಕ್ ನೀಡಿದೆ. ಇದೀಗ ಮತ್ತೊಮ್ಮೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಇಮ್ರಾನ್ ಖಾನ್ ಕಂಬಿ ಎಣಿಸುವ ದಿನಗಳನ್ನು ಹೆಚ್ಚಿಸಿದೆ. ಇಂದು ಈ ಬಗ್ಗೆ ವಿಚಾರಣೆ ನಡೆಸಿರುವ ಕೋರ್ಟ್ ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಖಾನ್ ಅವರನ್ನ ವಶಕ್ಕೆ ಪಡೆಯುವ ಅರ್ಜಿ ಪರಿಶೀಲನೆ ನಡೆಸಿತು. ಪಾಕಿಸ್ತಾನ ಭ್ರಷ್ಟಾಚಾರ ನಿಗ್ರಹ ದಳವು ಇಮ್ರಾನ್ ಖಾನ್ ಅವರನ್ನು ತಮ್ಮ ವಶಕ್ಕೆ ನೀಡಲು ಕೋರಿ ಅರ್ಜಿ ಸಲ್ಲಿಸಿತ್ತು.
ಪ್ರಕರಣಗಳಲ್ಲಿ ಶತಕ ಬಾರಿಸಿದ ಇಮ್ರಾನ್!
ಸುಮಾರು 100ಕ್ಕೂ ಹೆಚ್ಚು ಕೇಸ್‌ಗಳಲ್ಲಿ ನರಳುತ್ತಿರುವ ಇಮ್ರಾನ್ ಖಾನ್‌ಗೆ ಮುಕ್ತಿ ಸಿಗ್ತಿಲ್ಲ. ಹಲವು ಪ್ರಕರಣಗಳಲ್ಲಿ ಬಂಧಿತರಾಗಿರುವ ಇಮ್ರಾನ್ ಖಾನ್ ಸೆಪ್ಟೆಂಬರ್ 26ರಿಂದ ಭಾರಿ ಭದ್ರತಾ ವ್ಯವಸ್ಥೆ ಇರುವ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ. ಜೈಲಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ತಂಡ ಇಮ್ರಾನ್ ಖಾನ್ ಅವರನ್ನ 2 ಗಂಟೆ ಕಾಲ ವಿಚಾರಣೆ ನಡೆಸಿದೆ ಎನ್ನಲಾಗಿದ್ದು, ಈ ಮೂಲಕ ಪಾಕಿಸ್ತಾನ ಚುನಾವಣೆಗೆ ಮುನ್ನ ಅವರ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.

ಇನ್ನು 2024ರ ಫೆಬ್ರವರಿ 8 ಕ್ಕೆ ಅಂದರೆ ಮುಂದಿನ ವರ್ಷಕ್ಕೆ ಪಾಕಿಸ್ತಾನದ ಸಂಸತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ ಸಕಲ ಸಿದ್ಧತೆ ನಡೆಯುತ್ತಿರುವ ಸಮಯದಲ್ಲೇ ಇಮ್ರಾನ್ ಹೊರಗಡೆ ಬರ್ತಾರಾ? ಅನ್ನೋ ಕುತೂಹಲ ಮೂಡಿತ್ತು. ಆದರೆ ಇಂದಿನ ತೀರ್ಪು ನೋಡಿದರೆ ಇನ್ನೂ ಹಲವು ವರ್ಷ ಇಮ್ರಾನ್ ಹೊರಗೆ ಬರುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಇಮ್ರಾನ್ ಖಾನ್ ಅವರ ಅಭಿಮಾನಿಗಳು ರೊಚ್ಚಿಗೆದ್ದು ಹಿಂಸಾಚಾರ ನಡೆಸುವ ಭಯ ಆವರಿಸಿದೆ. ಪಾಕಿಸ್ತಾನ ಪರಿಸ್ಥಿತಿ ಮತ್ತೆ ಬೂದಿ ಮುಚ್ಚಿದ ಕೆಂಡವಾಗಿದೆ.












Click it and Unblock the Notifications