3rd World War: ಶುರುವಾಯಿತಾ 3ನೇ ಮಹಾಯುದ್ಧ? ಜಗತ್ತಿಗೆ ಕಂಟಕ!
ಆಧುನಿಕ ಜಗತ್ತಿನಲ್ಲಿ ಮಾನವ 2 ಭೀಕರ ಯುದ್ಧಗಳನ್ನು ನೋಡಿದ್ದಾನೆ. ಹೀಗಾಗಿಯೇ ಈ ಯುದ್ಧಗಳಿಗೆ 'ಮಹಾಯುದ್ಧ' ಎಂಬ ಹೆಸರನ್ನು ಇಟ್ಟಿದ್ದ. ಮೊದಲ 2 ಮಹಾಯುದ್ಧಗಳ ನಂತರ ಇನ್ನೆಂದಿಗೂ ಜಗತ್ತು 3ನೇ ಮಹಾಯುದ್ಧ ನೋಡುವುದಿಲ್ಲ ಎಂದೇ ಇಡೀ ಜಗತ್ತು ಭಾವಿಸಿತ್ತು. ಆದರೆ ಆ ನಂಬಿಕೆ ರಷ್ಯಾ & ಉಕ್ರೇನ್ ಯುದ್ಧದ ಮೂಲಕ ಸುಳ್ಳಾಗುತ್ತಿದೆ. ಹಾಗಾದ್ರೆ ಮುಂದೆ ಏನಾಗುತ್ತಿದೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ? ತಿಳಿಯೋಣ ಬನ್ನಿ.
ಏನೇ ಹೇಳಿ, ಕೋಳಿ ಜಗಳದಂತೆ ಶುರುವಾಗುವ ಅದೆಷ್ಟೋ ಕಿತ್ತಾಟಗಳೇ ಮುಂದೆ ವಿನಾಶ ತಂದುಬಿಡುತ್ತವೆ. 1ನೇ ಮಹಾಯುದ್ಧ & 2ನೇ ಮಹಾಯುದ್ಧಗಳು ಶುರುವಾಗಿದ್ದು ಕೂಡ ಹೀಗೆ. ಆದರೆ ಈ ಎರಡೂ ಯುದ್ಧಗಳಲ್ಲಿ ಕೋಟಿ ಕೋಟಿ ಜನ ಪ್ರಾಣಬಿಟ್ಟರು. ಅದ್ರಲ್ಲೂ 2ನೇ ಮಹಾಯುದ್ಧ ವಿನಾಶದಲ್ಲೇ ಅತಿ ವಿನಾಶಕ ಎನಿಸಿಕೊಂಡಿತು. ಹೀಗಾಗಿಯೇ ಮುಂದೆ ಮತ್ತೊಂದು ಮಹಾಯುದ್ಧ ನಡೆಯಲ್ಲ ಎಂಬ ನಂಬಿಕೆ ಇರುವಾಗಲೇ ಸಣ್ಣ ಜಗಳವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಭೀಕರವಾಗುತ್ತಿದೆ. ಅದರಲ್ಲೂ ಒಂದು ಕಡೆ ಪಾಶ್ಚಿಮಾತ್ಯರು, ಇನ್ನೊಂದು ಕಡೆ ರಷ್ಯಾ ನಡುವೆ ಘನಘೋರ ಕಾಳಗ ಸದ್ದೇ ಇಲ್ಲದೆ ಶುರುವಾಗಿಬಿಟ್ಟಿದೆ.

ಉಕ್ರೇನ್‌ಗೆ ಚಳಿ ಬಿಡಿಸಿದ ರಷ್ಯಾ ಕ್ಷಿಪಣಿಗಳು!
2014ರ ಬಳಿಕ ರಷ್ಯಾ ವಶದಲ್ಲಿರುವ ಕ್ರಿಮಿಯಾ ಸೇರಿದಂತೆ ರಷ್ಯಾ ಗಡಿ ಭಾಗದ ರಾಜ್ಯಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ರಷ್ಯಾ ರೊಚ್ಚಿಗೆದ್ದಿದೆ. ರಷ್ಯಾ ತನ್ನಲ್ಲಿರುವ ಅತಿ ಭಯಾನಕ ಮಿಸೈಲ್‌ಗಳ ಮೂಲಕ ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿದೆ. ಅದರಲ್ಲೂ ಈ ದಾಳಿ ಪ್ರಮುಖವಾಗಿ ಉಕ್ರೇನ್‌ನ ಬಂದರು ಪ್ರದೇಶಗಳನ್ನೇ ಗುರಿಯಾಗಿಸಿಕೊಂಡಿದೆ. ರಷ್ಯಾ ಹೀಗೆ ದಿಢೀರ್ ಕ್ಷಿಪಣಿಗಳ ಮಳೆ ಸುರಿಸಿದ್ದನ್ನ ನೋಡಿ ಉಕ್ರೇನ್ ಸೇನೆ ಬೆಚ್ಚಿಬಿದ್ದಿದೆ. ಕಪ್ಪು ಸಮುದ್ರದ ಮೂಲಕ ಉಕ್ರೇನ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಂದರು ಒಡೆಸಾ ಮೇಲೆ ರಣಭೀಕರ ದಾಳಿ ನಡೆಸಲಾಗಿದೆ. ಆದರೆ ಅಧಿಕೃತವಾಗಿ ಸಾವು, ನೋವಿನ ಸಂಖ್ಯೆ ಹೊರ ಬಿದ್ದಿಲ್ಲ.
ಖಾಸಗಿ ಸೇನೆ ದಂಗೆ ಬಳಿಕ ರಷ್ಯಾ ಕೆಂಡ
ರಷ್ಯಾದಲ್ಲಿ ಕಳೆದ ತಿಂಗಳು ಖಾಸಗಿ ಸೇನೆ ದಿಢೀರ್ ದಂಗೆ ಎದ್ದು ಹೋರಾಟಕ್ಕೆ ನುಗ್ಗಿತ್ತು. ತನ್ನದೇ ದೇಶದ ವಿರುದ್ಧ ಹೀಗೆ ರಷ್ಯಾ ವ್ಯಾಗ್ನರ್ ಗ್ರೂಪ್ ಅಥವಾ ಖಾಸಗಿ ಸೇನೆ ಫೈಟ್ ಶುರು ಮಾಡಿತ್ತು. ಈ ಘಟನೆ ಬಳಿಕ ರಷ್ಯಾ ಕೆಂಡವಾಗಿದೆ. ಅದರಲ್ಲೂ ಅಮೆರಿಕ ಮತ್ತು ಉಕ್ರೇನ್ ಮಿತ್ರ ಪಡೆಗಳ ವಿರುದ್ಧ ರೊಚ್ಚಿಗೆದ್ದು ದಾಳಿ ನಡೆಸುತ್ತಿದೆ. ತನ್ನ ಬಳಿ ಇರುವ ಎಲ್ಲಾ ಭಯಾನಕ ಅಸ್ತ್ರಗಳನ್ನು ಒಂದೊಂದಾಗಿ ಪ್ರಯೋಗ ಮಾಡುತ್ತಿದೆ. ಇದೀಗ ಒಡೆಸಾ ನಗರ ರಷ್ಯಾದ ಕೆಂಡದಂತಹ ಕೋಪಕ್ಕೆ ಕರಗಿ ಹೋಗುತ್ತಿದೆ. ಜೀವ ಉಳಿಸಿಕೊಳ್ಳಲು ಜನ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಏನೇ ಮಾಡಿದರೂ ಮಿಸೈಲ್‌ಗಳ ಅಬ್ಬರಕ್ಕೆ ಜೀವ ಮಾತ್ರ ಉಳಿಯುತ್ತಿ.
ರಷ್ಯಾ ಕೋಪಕ್ಕೆ ತುಪ್ಪ ಸುರಿಯುತ್ತಿದ್ದಾರಾ?
ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳು ದೊಡ್ಡ ನೆರವು ನೀಡುತ್ತಿವೆ. ಅದೇ ರೀತಿ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆಗೆ ಗುರುತಿಸಿಕೊಂಡಿರುವ ದಕ್ಷಿಣ ಕೊರಿಯಾ ಕೂಡ ಉಕ್ರೇನ್ ಸೇನೆ ನೆರವಿಗೆ ನಿಂತಿದೆ. ಹೊಸದಾಗಿ ಮೊನ್ನೆಯಷ್ಟೇ ಸುಮಾರು 150 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ದಕ್ಷಿಣ ಕೊರಿಯಾ ಘೋಷಿಸಿದ್ದು, ಇದರಲ್ಲಿ ಲ್ಯಾಂಡ್ ಮೈನ್ ಕಂಡುಹಿಡಿಯುವ ಉಪಕರಣಗಳು ಕೂಡ ಸೇರಲಿವೆ. ಹಾಗೇ ಇದರ ಜೊತೆಯಲ್ಲೇ ಉಕ್ರೇನ್ ಜನರಿಗೆ ಅಗತ್ಯವಿರುವ ವಸ್ತುಗಳನ್ನ ಕೂಡ ಪೂರೈಸಲಾಗುವುದು ಎಂದಿದೆ ದಕ್ಷಿಣ ಕೊರಿಯಾ. ಇದು ಮೊದಲೇ ಕೋಪಗೊಂಡಿರುವ ರಷ್ಯಾಗೆ ಇನ್ನಷ್ಟು ಕೋಪ ತರಿಸುತ್ತಿದೆ.

ಲಕ್ಷ ಲಕ್ಷ ಕೋಟಿ ನೆರವು!
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್‌ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡ್ತಿದೆ. ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್‌ರ ಆಪ್ತರೇ ಈ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕಗೆ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಕಾರಣಕ್ಕೆ ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ. ಇದೇ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಕೂಡ ನೆರವು ನೀಡ್ತಿದೆ. ಆ ಲೆಕ್ಕಾಚಾರ ನೋಡಿದರೆ ಈವರೆಗೆ ಅಮೆರಿಕ ಸುಮಾರು 3ರಿಂದ 4 ಲಕ್ಷ ಕೋಟಿ ರೂಪಾಯಿ ನೆರವನ್ನು ಉಕ್ರೇನ್‌ಗೆ ಕಲ್ಪಿಸಿದೆ.
ಇಬ್ಬರ ಜಗಳದಲ್ಲಿ ಸಾಮಾನ್ಯ ಜನ ಬಲಿ
ಅತ್ತ ರಷ್ಯಾ ದಾಳಿ ಮಾಡಿದೆ ಅಂತಾ ಉಕ್ರೇನ್ ದಾಳಿ ಮಾಡುತ್ತಿದೆ. ಇತ್ತ ಉಕ್ರೇನ್ ನಮ್ಮ ಮೇಲೆ ದಾಳಿ ಮಾಡಿದೆ ಅಂತಾ ರಷ್ಯಾ ದಾಳಿ ನಡೆಸುತ್ತಿದೆ. ಹೀಗೆ ಎರಡೂ ದೇಶಗಳು ಹೊಡೆದಾಟ ಮುಂದುವರಿಸಿವೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಸ್ಥಿತಿ ನೋಡುತ್ತಿದ್ದರೆ ಸೇಡಿಗೆ ಸೇಡು ತೀರಿಕೊಳ್ಳುತ್ತಾ ಎರಡೂ ಬಣಗಳು ಮತ್ತಷ್ಟು ದಿನ ಕಚ್ಚಾಡುವುದು ಪಕ್ಕಾ. ಹೀಗಾಗಿ ಯುದ್ಧ ನಿಲ್ಲಿಸೋಕೆ ಜಗತ್ತು ಒಂದಾಗಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಆದರೆ ಆ ಒತ್ತಾಸೆ ಈಡೇರುತ್ತಿಲ್ಲ, ಅತ್ತ ಉಕ್ರೇನ್ ಕೂಡ ಮಾತುಕತೆಗೆ ಸಿದ್ಧವಿಲ್ಲ. ಇತ್ತ ರಷ್ಯಾ ಕೂಡ ತನ್ನ ಹಠ ಬಿಡ್ತಿಲ್ಲ. ಈ ಮೂಲಕ ಇಬ್ಬರ ಜಗಳದಲ್ಲಿ ಜನರ ಬಲಿಯಾಗುತ್ತಿದ್ದಾರೆ.

ಒಟ್ಟಾರೆ ಹೇಳುವುದಾರೆ ಈ ಯುದ್ಧ ಸಂಪೂರ್ಣವಾಗಿ ಮಹಾಯುದ್ಧದ ರೂಪವನ್ನೇ ಈಗ ಪಡೆಯುತ್ತಿದೆ. ಹೀಗಾಗಿ ಜಗತ್ತು ಕೂಡ ಈ ಕಿತ್ತಾಟ ನೋಡುತ್ತಾ, ಆತಂಕದಲ್ಲಿ ಕೂತಿದೆ. ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ಎರಡೂ ದೇಶಗಳಲ್ಲಿ ಏನೂ ತಪ್ಪು ಮಾಡದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೈನಿಕರು ಸೇರಿ ಲಕ್ಷಾಂತರ ಅಮಾಯಕರು ಪ್ರಾಣ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಒಟ್ನಲ್ಲಿ ಇದನ್ನೆಲ್ಲಾ ನೋಡುತ್ತಿದ್ದರೆ ಯುದ್ಧ ಇನ್ನಷ್ಟು ವರ್ಷಗಳ ಕಾಲ ಮುಂದುವರಿಯುವುದು ಗ್ಯಾರಂಟಿ ಎಂಬಂತಾಗಿದೆ. ಹೀಗಾಗಿ ಜಗತ್ತು ಕೂಡ ಮೂರನೇ ಮಹಾಯುದ್ಧದ ಬಗ್ಗೆ ಭಾರಿ ಭಯಗೊಂಡಿದೆ. ಇದೆಲ್ಲಾ ಎಲ್ಲಿಗೆ ಬಂದು ನಿಲ್ಲಲಿದೆ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications