White House: ಅಮೆರಿಕ ಅಧ್ಯಕ್ಷರ ಮುದ್ದಿನ ನಾಯಿ ಎಲ್ಲೋಯ್ತು?
ಶ್ರೀಮಂತರ ಮನೆ ಅಂದರೆ ನಾಯಿ ಇರುತ್ತೆ, ಅದರಲ್ಲೂ ಅಮೆರಿಕ ಅಧ್ಯಕ್ಷರ ಮನೆ ಅಂದ್ರೆ ಸುಮ್ಮನೇನಾ? ಆದ್ರೆ ಅಮೆರಿಕ ಅಧ್ಯಕ್ಷರ ಮನೆಯಲ್ಲಿ ನಾಯಿಯೇ ವಿಲನ್ ಆಗಿತ್ತು. ಕಂಡ ಕಂಡವರಿಗೆ ಕಚ್ಚುತ್ತ ಕಾಟ ಕೊಡುತ್ತಿತ್ತು ಜೋ ಬೈಡನ್ ಅವರ ಮುದ್ದಿನ ನಾಯಿ. ಒಂದು ದಿನ ಸರಿ, ಎರಡು ದಿನ ಸರಿ. 2 ವರ್ಷದಿಂದ ಇದೇ ನಾಟಕ ಆಗೋಗಿತ್ತು. ಹೀಗೆ ನಾಯಿ ಕಾಟದಿಂದ ರೊಚ್ಚಿಗೆದ್ದಿರುವ ಜೋ ಬೈಡನ್ ಕುಟುಂಬ ಕೊನೆಗೆ ಮಾಡಿದ್ದೇನು ಗೊತ್ತಾ?
ಅಮೆರಿಕ ಅಧ್ಯಕ್ಷರಿಗೆ ಯಾವ ಮಟ್ಟಿಗೆ ಭದ್ರತೆ ಇರುತ್ತೆ ಅಂದ್ರೆ ಭದ್ರತಾ ಅಧಿಕಾರಿಗಳ ಕಣ್ಣು ತಪ್ಪಿಸಿ ಒಂದು ಸೊಳ್ಳೆ ಕೂಡ ಜೋ ಬೈಡನ್ ಹತ್ತಿರ ಸುಳಿಯಲು ಆಗಲ್ಲ. ಇಂತಿಪ್ಪ ಜೋ ಬೈಡನ್ ಮನೆಯಲ್ಲಿ ಒಂದು ಮುದ್ದಿನ ನಾಯಿ ಕೂಡ ಇದೆ. ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ಒಳಗೆ, ಈ ನಾಯಿ ಕೂಡ ಆ ಕುಟುಂಬದ ಸದಸ್ಯನಾಗಿತ್ತು. ಆದರೆ ಸಿಕ್ಕ ಸಿಕ್ಕವರ ಮೇಲೆ ಈ ನಾಯಿ ದಾಳಿ ಮಾಡುತ್ತಿತ್ತು. ಅದರಲ್ಲೂ ಜೋ ಬೈಡನ್ ರಕ್ಷಣೆಗೆ ಅಂತಾ ನೇಮಕವಾಗಿದ್ದ ಅಧಿಕಾರಿಗಳ ಮೇಲೆಯೇ ಬೈಡನ್ ನಾಯಿ ಅಟ್ಯಾಕ್ ಮಾಡಿತ್ತು.

ನಾಯಿ ಕಾಟಕ್ಕೆ ಹೆದರಿದ್ದ ಅಮೆರಿಕ ಅಧಿಕಾರಿಗಳು!
ಜೋ ಬೈಡನ್ ಸರ್ಕಾರಿ ನಿವಾಸ ವೈಟ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು & ಕೆಲಸಗಾರರಿಗೆ ನಾಯಿ ಕಾಟವೇ ಜಾಸ್ತಿಯಾಗಿತ್ತು. ಕಮಾಂಡರ್ ನಾಯಿ ಕೊಡುತ್ತಿದ್ದ ಕಾಟ ಅಧಿಕಾರಿಗಳನ್ನ ಕೂಡ ರೊಚ್ಚಿಗೆಬ್ಬಿಸಿತ್ತು. ಅಮೆರಿಕದ ಅಧ್ಯಕ್ಷ ಬೈಡನ್‌ರ ಮನೆಯಲ್ಲಿ ಕೆಲಸ ಮಾಡುವ ನೂರಾರು ಭದ್ರತಾ ಅಧಿಕಾರಿಗಳಿಗೆ ಭಯ ಶುರುವಾಗಿತ್ತು. ಬೈಡನ್ ಅವರ ಮುದ್ದಿನ ನಾಯಿ 'ಕಮಾಂಡರ್'ಗೆ ಏನಾಗಿದೆಯೋ ಗೊತ್ತಿಲ್ಲ, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ ಎಂಬ ಸುದ್ದಿ ಸದ್ದು ಮಾಡುತ್ತಿತ್ತು. ಹೀಗೆ ಹೊರಗೆ ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ರೊಚ್ಚಿಗೆದ್ದ ಜೋ ಬೈಡನ್ ಫ್ಯಾಮಿಲಿ ಮನೆಯಿಂದಲೇ ನಾಯಿಯನ್ನು ಹೊರಗೆ ಹಾಕಿದೆ.
ಮುದ್ದಿನ ನಾಯಿ ಮನೆಯಿಂದ ಔಟ್!
ಬೈಡನ್ ಅಧ್ಯಕ್ಷರಾಗಿ ಬಂದಿದ್ದ ಸಮಯದಲ್ಲೇ ಇನ್ನೊಂದು ನಾಯಿ ಇತ್ತು. ಅದರ ಹೆಸರು 'ಮೇಜರ್' ಅಂತಾ. 'ಮೇಜರ್' ಕೂಡ ಈ ನಾಯಿ ರೀತಿ ಅಧಿಕಾರಿಗಳು ಹಾಗೂ ಮನೆಯ ಕೆಲಸದವರ ಮೇಲೆ ದಾಳಿ ಮಾಡುತ್ತಿತ್ತು. ಹೀಗಾಗಿ ಆ ನಾಯಿಯನ್ನೂ ಬೈಡನ್ ಕುಟುಂಬ ಹೊರಗೆ ಕಳುಹಿಸಿತ್ತು. ನಂತರ ಕಮಾಂಡರ್ ಹೆಸರಿನ ನಾಯಿ ಬೈಡನ್ ಮನೆಗೆ ಬಂದಿತ್ತು. ಇದು ಕೂಡ ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡುತ್ತಾ ಭಯ ಹುಟ್ಟಿಸಿತ್ತು. ಹೀಗೆ ಜೋ ಬೈಡನ್ ಅವರ ಪತ್ನಿ ಹಾಗೂ ಅಮೆರಿಕ ಪ್ರಥಮ ಮಹಿಳೆ 'ಕಮಾಂಡರ್' ನಾಯಿಯನ್ನು ವೈಟ್‌ಹೌಸ್‌ನಿಂದ ಹೊರ ಹಾಕಿಸಿದ್ದಾರೆ ಎನ್ನಲಾಗಿದೆ. 'ಮೇಜರ್' ರೀತಿ 'ಕಮಾಂಡರ್' ನಾಯಿಗೂ ಗೇಟ್ ಪಾಸ್ ಸಿಕ್ಕಂತಾಗಿದೆ.

ಸ್ವತಃ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರ ಆಪ್ತ ಸಹಾಯಕರು ಈ ಕುರಿತು ಮಾಹಿತಿ ನೀಡಿದ್ದಾರೆ. ಆದರೆ 'ಕಮಾಂಡರ್' ನಾಯಿ ಈಗ ಎಲ್ಲಿದೆ? ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದೇ ಸೆಪ್ಟೆಂಬರ್ 25ರಂದು ಕೂಡ ಒಬ್ಬ ಸೀಕ್ರೆಟ್ ಏಜೆಂಟ್ ಮೇಲೆ ಕಮಾಂಡರ್ ದಾಳಿ ಮಾಡಿತ್ತು. ಈ ಘಟನೆಯೂ ಸೇರಿದಂತೆ ಕಳೆದ 2 ವರ್ಷದಲ್ಲಿ ಬರೋಬ್ಬರಿ 11 ಬಾರಿ ಕಮಾಂಡರ್ ಅಧಿಕಾರಿಗಳು ಹಾಗೂ ಕೆಲಸಗಾರರ ಮೇಲೆ ಅಟ್ಯಾಕ್ ಮಾಡಿತ್ತು. ಇದೆಲ್ಲವೂ ಜೋ ಬೈಡನ್ ಅವರಿಗೆ ದೊಡ್ಡ ತಲೆನೋವಾಗಿತ್ತು. ಈಗ ನಾಯಿಯನ್ನ ಹೊರಗೆ ಕಳಿಸಿದೆ ಬೈಡನ್ ಕುಟುಂಬ.
ಮೊದಲೇ ಹೇಳಿದಂತೆ ಒಟ್ಟಾರೆ 11 ಅಧಿಕಾರಿಗಳ ಮೇಲೆ ಬೈಡನ್ ನಾಯಿ ಎರಗಿದ್ದು, 2022ರ ನವೆಂಬರ್‌ನಲ್ಲಿ ಈ ರೀತಿ ಸೀಕ್ರೆಟ್ ಏಜೆಂಟ್ ಒಬ್ಬರ ತೊಡೆ ಹಾಗೂ ತೋಳಿಗೆ ಕಚ್ಚಿತ್ತು. ತಕ್ಷಣ ಆ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗಿತ್ತು. ಈ ಘಟನೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದೆಲ್ಲವೂ ಹೊರಗೆ ದೊಡ್ಡ ಸದ್ದು ಮಾಡುತ್ತಿರುವ ವಿಚಾರ ತಿಳಿದ ಜೋ ಬೈಡನ್ ಕುಟುಂಬ ಕಠಿಣ ನಿರ್ಧಾರ ಕೈಗೊಂಡಿದೆ.












Click it and Unblock the Notifications