ರಷ್ಯಾದ ರಾಜತಾಂತ್ರಿಕ ಅಧಿಕಾರಿಗಳಿಗೆ ಹೊರಹೋಗಲು ತಿಳಿಸಿದ ಅಮೆರಿಕ!
ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿದ ನಂತರ ರಷ್ಯಾ ಮೇಲೆ ಅಮೆರಿಕ ಮುನಿಸು ಕಮ್ಮಿ ಆಗುತ್ತಿಲ್ಲ. ಅದರಲ್ಲೂ ಇತ್ತೀಚೆಗೆ ರಷ್ಯಾ ಇಬ್ಬರು ಅಮೆರಿಕ ಮೂಲದ ಅಧಿಕಾರಿಗಳನ್ನು ತನ್ನ ದೇಶ ತೊರೆಯಲು ಆದೇಶಿಸಿದ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಇನ್ನು ಇದರ ಮುಂದುವರಿದ ಭಾಗವಾಗಿ ಇದೀಗ ಅಮೆರಿಕ ಕೂಡ ಇಬ್ಬರು ರಷ್ಯಾ ರಾಜತಾಂತ್ರಿಕ ಅಧಿಕಾರಿಗಳನ್ನು ಹೊರಹಾಕಲು ಮುಂದಾಗಿದೆ.
ರಷ್ಯಾಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನ ರಷ್ಯಾದ ಮಾಜಿ ಉದ್ಯೋಗಿಯ ಕಡೆಯಿಂದ ಸಂಗ್ರಹಿಸುತ್ತಿದ್ದ ಆರೋಪ ಅಮೆರಿಕದ ಅಧಿಕಾರಿಗಳ ವಿರುದ್ಧ ಕೇಳಿಬಂದಿತ್ತು. ಈ ಕಾರಣ ರಷ್ಯಾ ಇಬ್ಬರು ಅಧಿಕಾರಿಗಳಿಗೆ ಹೊರಗೆ ಹೋಗುವಂತೆ ಆದೇಶಿಸಿತ್ತು. ಆದ್ರೆ ಈ ಬೆಳವಣಿಗೆ ಈಗ ಅಮೆರಿಕ ಮತ್ತು ರಷ್ಯಾ ದೇಶಗಳ ಮಧ್ಯೆ ಮುನಿಸು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಈಗ ಕಣ್ಣಿಗೆ ಕಣ್ಣು, ಸೇಡಿಗೆ ಸೇಡು ಎಂಬಂತೆ ಅಮೆರಿಕ ಸರ್ಕಾರ ಕೂಡ ಇಬ್ಬರು ರಷ್ಯಾ ರಾಜತಾಂತ್ರಿಕರಿಗೆ ದೇಶ ಬಿಟ್ಟು ಹೋಗುವಂತೆ ಹೇಳಿದೆ.

ಅಮೆರಿಕ ಅಧಿಕಾರಿಗಳು ಹೇಳಿದ್ದೇನು?
ಇನ್ನು ರಷ್ಯಾ ಸರ್ಕಾರ ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳನ್ನು ಹೊರಗೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಅಮೆರಿಕ ವಾಗ್ದಾಳಿ ನಡೆಸಿದೆ. ಹಾಗೇ ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗೆ ರಷ್ಯಾ ಆಡಳಿತ ಕಿರುಕುಳ ನೀಡಿದೆ ಎಂಬ ಆರೋಪ ಮಾಡಿದೆ. ಹೀಗಾಗಿ ಮೊದಲೇ ಹಳಸಿದ ಹಪ್ಪಳ ಆಗೋಗಿದ್ದ ರಷ್ಯಾ ಹಾಗೂ ಅಮೆರಿಕ ಸಂಬಂಧ ಈ ಮೂಲಕ ಸೀದೋಗಿದೆ ಎನ್ನಬಹುದು. ಉಕ್ರೇನ್ ವಿರುದ್ಧ ರಷ್ಯಾ ಭೀಕರ ಯುದ್ಧ ನಡೆಸುವಾಗಲೇ ಈ ಬೆಳವಣಿಗೆ ಗಮನ ಸೆಳೆದಿದೆ. ಮುಂದೆ ಇಬ್ಬರ ಈ ತಿಕ್ಕಾಟ ಇನ್ನಷ್ಟು ಜೋರಾಗುವ ಸಾಧ್ಯತೆ ಕೂಡ ದಟ್ಟವಾಗಿದೆ.
ಸಹಾಯ ನಿಲ್ಲಿಸುತ್ತಾ ದೊಡ್ಡಣ್ಣ ಅಮೆರಿಕ?
ರಷ್ಯಾ & ಉಕ್ರೇನ್ ಯುದ್ಧ ಜ್ವಾಲೆ ಧಗಧಗಿಸುವ ಸಮಯದಲ್ಲಿ ಅಮೆರಿಕದಿಂದ ಉಕ್ರೇನ್‌ಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಅದೇನಂದ್ರೆ ಅಮೆರಿಕ ಈಗಾಗಲೇ ಉಕ್ರೇನ್ ಸೇನೆಗೆ ಮತ್ತು ಉಕ್ರೇನ್ ಸರ್ಕಾರಕ್ಕೆ ಸಾಕಷ್ಟು ಸಹಾಯ ಮಾಡಿದೆ. ಈ ಮೂಲಕ ರಷ್ಯಾ ವಿರುದ್ಧ ಹೋರಾಡಲು ಬಲ ತುಂಬಿದೆ. ಆದರೆ ಈಗಿನ ಸ್ಥಿತಿಯಲ್ಲಿ ಅಮೆರಿಕ ಸಹಾಯ ಮಾಡುವುದನ್ನು ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಅಮೆರಿಕದ ಆಡಳಿತ ಪಕ್ಷ & ವಿರೋಧ ಪಕ್ಷದ ನಡುವೆ ಎದ್ದಿರುವ ದೊಡ್ಡ ಗೊಂದಲ ಉಕ್ರೇನ್‌ಗೆ ನೀಡುತ್ತಿರುವ ಸಹಾಯಕ್ಕೆ ಅಡ್ಡಿಯಾಗುತ್ತಿದೆ. ಈ ಸಮಯಕ್ಕೆ ರಷ್ಯಾ ಕೂಡ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿದೆ. ಮತ್ತೊಂದು ಕಡೆ ರಷ್ಯಾ ಹಾಗೂ ಅಮೆರಿಕ ನಡುವೆ ರಾಜತಾಂತ್ರಿಕರ ವಿಚಾರದಲ್ಲೂ ಕಿರಿಕಿರಿ ಶುರುವಾಗಿದೆ.

ನ್ಯಾಟೋ ಜೊತೆ ಸೇರಿ ರಷ್ಯಾಗೆ ಸ್ಕೆಚ್?
ಹಾಗೇ ಇನ್ನೊಂದು ಆರೋಪದ ಅಡಿಯಲ್ಲಿ ನ್ಯಾಟೋ ಪಡೆಗಳ ಜೊತೆಗೆ ಸೇರಿ ರಷ್ಯಾದ ವಿರುದ್ಧವೇ ಅಮೆರಿಕ ಸ್ಕೆಚ್ ಹಾಕಿದೆ ಎಂಬ ಆರೋಪ ಇದೆ. ಹೀಗಾಗಿಯೇ ಉಕ್ರೇನ್ ಪರ ನಿಂತಿರುವ ಆರೋಪ ಕೂಡ ಕೇಳಿಬಂದಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ರಷ್ಯಾ ಮತ್ತು ಅಮೆರಿಕ ಪರಸ್ಪರ ರಾಜತಾಂತ್ರಿಕರನ್ನು ಉಚ್ಚಾಟನೆ ಮಾಡುತ್ತಾ ಕಿತ್ತಾಡುತ್ತಿವೆ. ಈಗಾಗಲೇ ಯುದ್ಧದ ಭೀತಿ ಆವರಿಸಿರುವ ಸಮಯದಲ್ಲಿ ಎರಡೂ ದೇಶಗಳ ಈ ರೀತಿಯ ವರ್ತನೆ ಪರಿಸ್ಥಿತಿಯನ್ನ ಮತ್ತಷ್ಟು ಕಗ್ಗಂಟಾಗಿಸಿದೆ.












Click it and Unblock the Notifications