Israel War: ತಾಲಿಬಾನ್ ಉಗ್ರರಿಗೆ ಹಿಂಸೆ ಬೇಡ, ಶಾಂತಿ ಬೇಕಂತೆ!
ತಾಲಿಬಾನ್ ಉಗ್ರರು ಅದೆಷ್ಟು ಭೀಕರ ಅನ್ನೋದು ಇಡೀ ಜಗತ್ತಿಗೇ ಗೊತ್ತು. ಅದರಲ್ಲೂ ಹಿಂಸೆ ಮಾಡುವಾಗ ಹಿಂದೆಮುಂದೆ ಯೋಚಿಸದೆ ಜೀವ ತೆಗೆಯುತ್ತಾರೆ ತಾಲಿಬಾನ್ ಭಯೋತ್ಪಾದಕರು. ಇಂತಹ ಉಗ್ರರ ಬಾಯಲ್ಲಿ ಈಗ ಶಾಂತಿ ಪಾಠ ಕೇಳಿಬಂದಿದೆ. ಅದರಲ್ಲೂ ಯುದ್ಧದ ಸಹವಾಸ ಬೇಡ, ನಮಗೆ ಶಾಂತಿ ಮಂತ್ರ ಸಾಕು ಅಂತಿದ್ದಾರೆ! ದಿಢೀರ್ ತಾಲಿಬಾನ್ ಉಗ್ರರಿಗೆ ಏನಾಯ್ತು? ಯಾಕ್ ಹಿಂಗ್ ಆಡ್ತಿದ್ದಾರೆ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದೀಗ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಭೀಕರ ಯುದ್ಧ ಆರಂಭವಾಗಿದೆ. ಆದರೆ ಈ ಸಮಯದಲ್ಲೇ ತಾಲಿಬಾನ್ ಕೂಡ ಇಸ್ರೇಲ್ ವಿರುದ್ಧ ಯುದ್ಧಕ್ಕೆ ಎಂಟ್ರಿ ಕೊಡುತ್ತೆ. ಅಫ್ಘಾನ್‌ನ ತಾಲಿಬಾನ್ ಉಗ್ರರು ಹಮಾಸ್ ಜೊತೆಗೆ ಸೇರಿ ಇಸ್ರೇಲ್ ವಿರುದ್ಧ ಬಾಂಬ್ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ತಾಲಿಬಾನ್ ಯುದ್ಧ ಬೇಡ ಅನ್ನೋ ನೀತಿ ಪಾಠ ಹೇಳಿದೆ. ಇದರ ಜೊತೆಗೆ ಇನ್ನೂ ಒಂದು ಸಲಹೆಯನ್ನ ತಾಲಿಬಾನ್ ಈಗ ನೀಡಿದ್ದು, ಅದರ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಯುದ್ಧದ ಸಹವಾಸ ಬೇಡ ಅಂತಿದೆ ತಾಲಿಬಾನ್!
ಹೌದು, ಒಂದು ಕಾಲದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದ ತಾಲಿಬಾನ್ ಉಗ್ರರು ಈಗ ಯುದ್ಧ ಮತ್ತು ಹಿಂಸೆ ಅಂದರೆ ಬೇಡ ಅಂತಿದ್ದಾರೆ. ಯಾಕಂದ್ರೆ ಅವರಿಗೆ ಅಫ್ಘಾನಿಸ್ತಾನದ ಭವಿಷ್ಯದ ಚಿಂತೆ ಶುರುವಾದಂತೆ ಕಾಣುತ್ತಿದೆ. 20 ವರ್ಷಗಳ ಹಿಂದೆ ಇದ್ದ ತಾಲಿಬಾನ್ ಆಡಳಿತ ಬೇರೆ, ಈಗ ಇರುವ ತಾಲಿಬಾನ್ ಬೇರೆ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ಮಾತು ಎತ್ತಿದರೆ ಸಾಕು ಹಿಂಸೆ ನಡೆಸುತ್ತಿದ್ದ ತಾಲಿಬಾನ್, ಇದೀಗ ಇಸ್ರೇಲ್ ಸೇನೆ & ಹಮಾಸ್‌ನ ಉಗ್ರರಿಗೆ ಮಾತುಕತೆ ಮೂಲಕ ಸಮಸ್ಯೆ ಸರಿಪಡಿಸಿಕೊಳ್ಳಿ ಎಂಬ ಸಲಹೆಯನ್ನು ನೀಡಿದೆ. ಹೀಗೆ ತಾಲಿಬಾನ್ ಉಗ್ರರು ಹಮಾಸ್ ಜೊತೆಗೆ ಕೈಜೋಡಿಸಲ್ಲ ಎಂಬ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.












Click it and Unblock the Notifications