ಅಕ್ರಮ ವಲಸಿಗರನ್ನು ಹೊರ ಕಳಿಸಲು ಆರಂಭಿಸಿದ ಡೊನಾಲ್ಡ್ ಟ್ರಂಪ್ ಸರ್ಕಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೆಲಸ ಮಾಡುತ್ತಿದ್ದಾರೆ. ವಲಸಿಗರ ವಿಚಾರದಲ್ಲಿ ತುಸು ಹೆಚ್ಚೇ ಕಠಿಣವಾಗಿರುವ ಅವರು, ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ವಲಸಿಗರನ್ನು ನಿಯಂತ್ರಿಸುವ ಹಲವು ಆದೇಶಗಳಿಗೆ ಸಹಿ ಹಾಕಿದ್ದರು.
ಇದೀಗ ಟ್ರಂಪ್ ಸರ್ಕಾರ ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಅವರನ್ನು ವಾಪಸ್ ಕಳಿಸುವ ಕೆಲಸ ಆರಂಭಿಸಿದೆ. ಟ್ರಂಪ್ ಅಧಿಕಾರಕ್ಕೆ ಬಂದ ಕೆಲವು ದಿನಗಳಲ್ಲೇ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 500 ಜನರನ್ನು ವಾಪಸ್ ಕಳಿಸಲಾಗಿದೆ.

ಶುಕ್ರವಾರ ಅಕ್ರಮ ವಲಸಿಗರು ಮಿಲಿಟರಿ ವಿಮಾನವನ್ನು ಹತ್ತುತ್ತಿರುವ ಫೋಟೊಗಳನ್ನು ಹಂಚಿಕೊಂಡಿರುವ ಶ್ವೇತ ಭವನ ಅಮೆಕರಿಕದಲ್ಲಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಕೆಲಸ ಆರಂಭವಾಗಿದೆ ಎಂದು ಹೇಳಿದೆ.
ಡೊನಾಲ್ಡ್ ಟ್ರಂಪ್ ಸಂದೇಶ
ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ಫೋಟೊಗಳನ್ನು ಹಂಚಿಕೊಂಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಡೀ ಜಗತ್ತಿಗೆ ಬಲವಾದ ಮತ್ತು ಸ್ಪಷ್ಟ ಸಂದೇಶವನ್ನು ಕಳಿಸಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
"ವಲಸಿಗರನ್ನು ಗಡೀಪಾರು ಮಾಡಲು ವಿಮಾನಗಳು ಸಿದ್ಧವಾಗಿವೆ, ಅಧ್ಯಕ್ಷ ಟ್ರಂಪ್ ಇಡೀ ಜಗತ್ತಿಗೆ ಬಲವಾದ ಮತ್ತು ಸ್ಪಷ್ಟವಾದ ಸಂದೇಶವನ್ನು ಕಳಿಸುತ್ತಿದ್ದಾರೆ. ಅಕ್ರಮವಾಗಿ ಯಾರಾದರೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವನ್ನು ಪ್ರವೇಶಿಸಿದರೆ, ಅದಕ್ಕೆ ಸರಿಯಾಗಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.
ಗುರುವಾರ ನೂರಾರು ಅಕ್ರಮ ವಲಸಿಗರನ್ನು ಬಂಧಿಸಲಾಗಿದ್ದು ಅದರಲ್ಲಿ ಹಲವು ಮಂದಿಯನ್ನು ಮಿಲಿಟರಿ ವಿಮಾನಗಳಲ್ಲಿ ದೇಶದಿಂದ ಹೊರಗೆ ಕಳಿಸಲಾಗಿದೆ. ಶಂಕಿತ ಭಯೋತ್ಪಾದಕ ಸೇರಿದಂತೆ 538 ಅಕ್ರಮ ವಲಸೆಗಾರರು ಮತ್ತು ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ಅಪರಾಧ ಎಸಗಿ ಶಿಕ್ಷೆಗೊಳಗಾದ ಹಲವರನ್ನು ಬಂಧಿಸಲಾಗಿದೆ ಎಂದು ಶ್ವೇತಭವನ ಮಾಹಿತಿ ನೀಡಿದೆ.
ಯುಎಸ್ ಇತಿಹಾಸದಲ್ಲಿಯೇ ಅತಿ ದೊಡ್ಡ ಗಡೀಪಾರು ಕಾರ್ಯಾಚರಣೆ ಭರ್ಜರಿಯಾಗಿ ನಡೆಯುತ್ತಿದೆ. ಚುನಾವಣೆ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕನ್ನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದಾರೆ ಎಂದು ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಚುನಾವಣೆ ಸಮಯದಲ್ಲಿ ಡೊನಾಲ್ಡ್ ಟ್ರಂಪ್, ಅಕ್ರಮ ವಲಸೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಯುಎಸ್‌ಗೆ ಬರುವ ದಾರಿಯನ್ನು ಮುಚ್ಚುವುದಾಗಿ ತಿಳಿಸಿದ್ದರು. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತುಸ್ಥಿತಿಯನ್ನು ಘೋಷಿಸುವ ಆದೇಶಗಳಿಗೆ ಸಹಿ ಹಾಕಿದರು. ಹೆಚ್ಚಿನ ಮಿಲಿಟರಿಯನ್ನು ಅಲ್ಲಿ ನಿಯೋಜಿಸುವುದಾಗಿ ತಿಳಿಸಿದರು.
ನಿರಾಶ್ರಿತರ ಪುನರ್ವಸತಿಯನ್ನು ರದ್ದು ಮಾಡಿದ್ದು, ಹೊಸ ವಲಸೆ ನೀತಿಯನ್ನು ಜಾರಿಗೆ ತರದ ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ತಾಕೀತು ಮಾಡಿದ್ದಾರೆ. ಹೋಮ್‌ಲ್ಯಾಂಡ್ ಸೆಕ್ಯುರಿಟಿ ಅಂಕಿಅಂಶಗಳ ಕಚೇರಿಯ ಪ್ರಕಾರ, ಅಮೆರಿಕದಲ್ಲಿ ಸುಮಾರು 11 ಮಿಲಿಯನ್ ದಾಖಲೆರಹಿತ ವಲಸಿಗರಿದ್ದು ಡೊನಾಲ್ಡ್ ಟ್ರಂಪ್ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ನೋಡಬೇಕಿದೆ.












Click it and Unblock the Notifications