Pakistan: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್...
ಪಾಕಿಸ್ತಾನ ಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ಯಾವ ಸಮಯದಲ್ಲಿ ಕಿಡಿ ಬಿದ್ದು ಹೊತ್ತಿ ಉರಿಯುತ್ತೋ ಗೊತ್ತಿಲ್ಲ. ಅದ್ರಲ್ಲೂ ಅಲ್ಲಿನ ರಾಜಕೀಯ ವ್ಯವಸ್ಥೆ ಹದಗೆಟ್ಟು, ಕೊಳ್ಳೆಹೊಡೆದ ವ್ಯಕ್ತಿ ಜನನಾಯಕನ ಸ್ಥಾನ ಪಡೆಯುತ್ತಾನೆ. ಭ್ರಷ್ಟಾಚಾರ ಆರೋಪ ಸಾಬೀತಾದರೂ ಅಂತಹ ರಾಜಕಾರಣಿಗಳೇ ಮೆರೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈಗ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ರಾಜಕಾರಣಿಗಳು ಅಂದ್ರೆ ಭ್ರಷ್ಟಾಚಾರ ಆರೋಪ ಬಂದೇ ಬರುತ್ತೆ. ಆದರೆ ಪಾಕ್ ಮಾತ್ರ ಭ್ರಷ್ಟರ ಕೂಪದಲ್ಲಿ ಮುಳುಗಿ ಹೋಗಿದೆ. ಇಂಥ ದೇಶದಲ್ಲಿ ಭ್ರಷ್ಟಾಚಾರ ಆರೋಪವನ್ನ ಹೊತ್ತು ಮಾಜಿ ಪ್ರಧಾನಿ ಜೈಲಿಗೆ ಹೋಗೋದು, ದೇಶ ಬಿಟ್ಟು ಓಡಿ ಹೋಗೋದೆಲ್ಲ ಮಾಮೂಲಾಗಿದೆ. ಹೀಗೆ ಭ್ರಷ್ಟಾಚಾರದ ಆರೋಪದಡಿ ಶಿಕ್ಷೆಗೆ ಗುರಿಯಾಗಿ, ದೇಶವನ್ನೂ ಬಿಟ್ಟು ಎಸ್ಕೇಪ್ ಆಗಿದ್ದ ಮಾಜಿ ಪ್ರಧಾನಿ ಈಗ ರಾಜಾರೋಷವಾಗಿ ಮತ್ತೆ ಪಾಕಿಸ್ತಾನಕ್ಕೆ ವಾಪಸ್ ಬರ್ತಿದ್ದಾರೆ. ಇದು ಮಾತ್ರ ಅಲ್ಲ, ಭ್ರಷ್ಟಾಚಾರ ಆರೋಪ ಹೊತ್ತ ವ್ಯಕ್ತಿಗೆ ರಾಜಮರ್ಯಾದೆ ನೀಡಲು ಲಕ್ಷಾಂತರ ಜನ ಕಾಯುತ್ತಿದ್ದಾರೆ.

ಅರೆರೆ.. ನೀನಾ ಪಾಕಿಸ್ತಾನ?
ಪನಾಮಾ ಪೇಪರ್ಸ್ ಹಗರಣ ಹಿನ್ನೆಲೆ ದೇಶ ಬಿಟ್ಟು ಹೋಗಿದ್ದ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಕಂಬ್ಯಾಕ್ ಮಾಡ್ತಿದ್ದು, ನಾಳೆ ಅಂದ್ರೆ ಶನಿವಾರ ಪಾಕಿಸ್ತಾನಕ್ಕೆ ಹೆಜ್ಜೆ ಇಡಲಿದ್ದಾರೆ. ಈ ಮೂಲಕ ನಾಲ್ಕು ವರ್ಷಗಳಿಂದ ಲಂಡನ್ ಅಜ್ಞಾತವಾಸದಲ್ಲಿ ಇರುವ ನವಾಜ್‌ಗೆ ಪಾಕ್‌ಗೆ ಬರಲು ಅನುಮತಿ ಸಿಕ್ಕಿದೆ. ಇದೇ ಕಾರಣಕ್ಕೆ ಅಕ್ಟೋಬರ್ 21ರಂದು ವಿಶೇಷ ವಿಮಾನ ಮೂಲಕ ನವಾಜ್ ಷರೀಫ್ ತಮ್ಮ ತವರು ದೇಶ ಪಾಕ್‌ಗೆ ಬಂದು ಇಳಿಯಲಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ನಾಯಕ ಕೂಡ ಆಗಿರುವ ನವಾಜ್ ಷರೀಫ್, ಇದೀಗ ಪಾಕ್ ಮುಂದಿನ ಚುನಾವಣೆಗೆ ಪಕ್ಷವನ್ನೂ ಮುನ್ನಡೆಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ನವಾಜ್ ಜೈಲಿಗೆ ಹೋಗಿದ್ದು ಏಕೆ?
ಇಮ್ರಾನ್ ಅಧಿಕಾರಕ್ಕೆ ಬರುತ್ತಿದ್ದಂತೆ, ನವಾಜ್ ಷರೀಫ್‌ಗೆ ಜೈಲೂಟ ಫಿಕ್ಸ್ ಆಗಿತ್ತು. 71 ವರ್ಷ ವಯಸ್ಸಿನ ನವಾಜ್ ಷರೀಫ್ 2018ರಲ್ಲಿ ಪಾಕಿಸ್ತಾನದಲ್ಲಿ 2 ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಜೈಲು ಸೇರುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಾ ಹೇಳಿದ್ದರು. ಲಾಹೋರ್ ಹೈಕೋರ್ಟ್ ಅನುಮತಿ ಪಡೆದು, 2019ರಿಂದ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ವಾಸ ಮಾಡ್ತಿದ್ದೀನಿ ಅಂತಾ ನವಾಜ್ ಷರೀಫ್ ಹೇಳಿದ್ದರು. ಆದರೆ ಈಗ ದಿಢೀರ್ ಅವರ ಆರೋಗ್ಯ ಸುಧಾರಿಸಿದೆ. ಹೀಗಾಗಿ ಪಾಕಿಸ್ತಾನಕ್ಕೆ ವಾಪಸ್ ಬರಲು ಸಿದ್ಧರಾಗಿದ್ದಾರೆ.
ಸದ್ಯಕ್ಕೆ ಎಲ್ಲಿದ್ದಾರೆ ನವಾಜ್?
ನವಾಜ್ ಷರೀಫ್ ಈಗ ದುಬೈನಲ್ಲಿ ಇದ್ದು, ಖಾಸಗಿ ವಿಮಾನದಲ್ಲಿ ಪಾಕ್‌ಗೆ ಬರುವ ಸಾಧ್ಯತೆ ಇದೆ. ಹೀಗೆ ಪಾಕಿಸ್ತಾನಕ್ಕೆ ಬಂದ ನಂತರ, ಲಾಹೋರ್‌ನಲ್ಲಿ ನಡೆಯುವ ಪಕ್ಷದ ರ‍್ಯಾಲಿಯಲ್ಲಿ ನವಾಜ್ ಷರೀಫ್ ಭಾಗವಹಿಸುತ್ತಾರೆ ಅಂತಾ ಹೇಳಲಾಗಿದೆ. 4 ವರ್ಷಗಳ ಹಿಂದೆ ದೇಶವನ್ನ ಬಿಟ್ಟು ಹೋಗಿ, ಇದೀಗ ಪಾಕಿಸ್ತಾನಕ್ಕೆ ವಾಪಸ್ ಆಗುತ್ತಿರುವ ನವಾಜ್‌ಗೆ ಸ್ವಾಗತ ಕೋರಲು ಬೆಂಬಲಿಗರು ಭಾರಿ ಸಿದ್ಧತೆ ನಡೆಸಿದ್ದಾರೆ. ಇದೇ ಕಾರಣಕ್ಕೆ ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲೂ ಅಲರ್ಟ್ ಘೋಷಿಸಿದೆ ಪಾಕಿಸ್ತಾನ ಸರ್ಕಾರ. ಯಾಕಂದ್ರೆ ಪಾಕಿಸ್ತಾನದಲ್ಲಿ ಬಾಂಬ್ ಬ್ಲಾಸ್ಟ್ ಅನ್ನೋದು ಪಟಾಕಿ ಹಚ್ಚಿದಂತೆ ಆಗೋಗಿದೆ.

ಸಂಸತ್ ಚುನಾವಣೆಗೆ ಮುಹೂರ್ತ ಫಿಕ್ಸ್
ಪಾಕಿಸ್ತಾನ ಲೋಕಸಭೆ ಒಟ್ಟು ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲೂ 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಆದರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ ಆಗಸ್ಟ್ 9ಕ್ಕೆ ಪಾಕಿಸ್ತಾನದ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್ ಪ್ರಧಾನಿ. ಹೀಗಾಗಿ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ತನ್ನು ವಿಸರ್ಜನೆ ಮಾಡಲಾಗಿತ್ತು. ಕೆಲತಿಂಗಳ ಹಿಂದೆ ಚುನಾವಣೆಗೂ ಡೇಟ್ ಫೈನಲ್ ಮಾಡಿದ್ದು, 2024ರ ಜನವರಿ ಕೊನೆಯ ವಾರದಲ್ಲಿ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇನ್ನು ಈಗ ನವಾಜ್ ರಿಟರ್ನ್ಸ್ ಮೂಲಕ ಕುತೂಹಲ ದುಪ್ಪಟ್ಟಾಗಿದೆ.












Click it and Unblock the Notifications