ಕೈಯಲ್ಲಿ ಕಾರ್ಪೊರೇಟ್ ಕೆಲಸಯಿದ್ರು ಗರ್ಲ್‌ಪ್ರೈಂಡ್‌ಗೆ ಡೈಮಂಡ್ ರಿಂಗ್ ಕೊಡಿಸಲು ಫುಡ್ ಡೆಲಿವರಿ ಬಾಯ್ ಆದ ಉದ್ಯೋಗಿ
ಪ್ರೀತಿ ಕುರುಡು, ಪ್ರೇಮ ಕುರುಡು ಹಾಗೆ ಪ್ರೀತಿಸಿದ ಹುಡುಗಿಗಾಗಿ ಹುಡುಗ ಏನೇನೋ ಸಾಹಸ ಮಾಡುವುದನ್ನು ನಾವು ಕೇಳಿರುತ್ತೇವೆ. ಆದರೆ, ಅಮೆರಿಕದ ಕಾರ್ಪೊರೇಟ್ ಉದ್ಯೋಗಿಯೊಬ್ಬ ತನ್ನ ಪ್ರೇಯಸಿಗೆ 6 ಲಕ್ಷ ರೂಪಾಯಿ ಮೌಲ್ಯದ ಡೈಮಂಡ್ ರಿಂಗ್ ಕೊಡಿಸಲು ಮಾಡಿರುವ ಕಠಿಣ ಪರಿಶ್ರಮದ ಕಥೆ ಈಗ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದೆ.
ಹಗಲಿನಲ್ಲಿ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ರಾತ್ರಿಯಾಗುತ್ತಿದ್ದಂತೆ ಫುಡ್ ಡೆಲಿವರಿ ಬಾಯ್ ಆಗಿ ಬದಲಾಗಿ ಹಣ ಕೂಡಿಟ್ಟ ವಿರಳ ಪ್ರೇಮಕಥೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಡೈಮಂಡ್ ಉಂಗುರಕ್ಕಾಗಿ ಡೆಲಿವರಿ ಬಾಯ್ ಕೆಲಸ
ಬ್ರಾಡ್ಲಿ ಚೋ ಎಂಬ ಈ ಯುವಕ ತನ್ನ ಪ್ರೇಯಸಿ ಜೂಲಿಯಾಗೆ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಲು ನಿರ್ಧರಿಸಿದ್ದ. ಆಕೆಗೆ ಇಷ್ಟವಾದ ಮತ್ತು ಆಕೆಯ ಅರ್ಹತೆಗೆ ತಕ್ಕಂತೆ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಕಸ್ಟಮೈಸ್ಡ್ ಡೈಮಂಡ್ ಉಂಗುರವನ್ನ ಉಡುಗೊರೆಯಾಗಿ ನೀಡಬೇಕೆಂಬುದು ಆತನ ಕನಸಾಗಿತ್ತು. ಆದರೆ, ಕಾರ್ಪೊರೇಟ್ ಉದ್ಯೋಗದಿಂದ ಬರುವ ಸಂಬಳದಿಂದ ಇಷ್ಟು ದೊಡ್ಡ ಮೊತ್ತವನ್ನ ತಕ್ಷಣ ಹೊಂದಿಸುವುದು ಆತನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆತ ಸತತ 8 ತಿಂಗಳುಗಳ ಕಾಲ ಹಗಲು-ರಾತ್ರಿ ಎನ್ನದೆ ಎರಡೂ ಕೆಲಸಗಳನ್ನು ಮಾಡಲು ನಿರ್ಧರಿಸಿದ.
ದಿನಕ್ಕೆ ಕೇವಲ 4 ಗಂಟೆ ನಿದ್ರೆ
ಬ್ರಾಡ್ಲಿ ಪ್ರತಿದಿನ ಕಾರ್ಪೊರೇಟ್ ಕಚೇರಿಯಲ್ಲಿ ಬೆಳಿಗ್ಗೆ ಕೆಲಸ ಮುಗಿಸಿದ ನಂತರ, ರಾತ್ರಿ ತಡರಾತ್ರಿಯವರೆಗೆ ಫುಡ್ ಡೆಲಿವರಿ ರೈಡರ್ ಆಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ರಾತ್ರಿ 2 ಗಂಟೆಗೆ ಮಲಗಿ, ಮತ್ತೆ ಬೆಳಿಗ್ಗೆ 6 ಗಂಟೆಗೆ ಎದ್ದು ಆಫೀಸ್‌ಗೆ ಹಾಜರಾಗುತ್ತಿದ್ದ. ಈ 8 ತಿಂಗಳ ಸುದೀರ್ಘ ಪ್ರಯಾಣದಲ್ಲಿ ಆತನಿಗೆ ಸಾಲು ಸಾಲು ಸವಾಲುಗಳು ಎದುರಾದವು. ಆಯಾಸದಿಂದಾಗಿ ಆತ ಎರಡು ವಾರಗಳ ಕಾಲ ಅನಾರೋಗ್ಯಕ್ಕೆ ತುತ್ತಾಗಿದ್ದ. ಅಷ್ಟೇ ಅಲ್ಲದೆ, ಆತನ ಫುಡ್ ಡೆಲಿವರಿ ವಿಡಿಯೋ ಒಂದನ್ನು ಆತನ ಕಾರ್ಪೊರೇಟ್ ಬಾಸ್ ನೋಡಿದ್ದರಿಂದ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿಯೂ ಬಂದಿತ್ತು. ಆದಾಗ್ಯೂ, ಆತ ತನ್ನ ಗುರಿಯಿಂದ ಹಿಂದೆ ಸರಿಯಲಿಲ್ಲ.
ಬರ್ತ್‌ಸ್ಟೋನ್ ಹೊಂದಿರುವ ಕಸ್ಟಮೈಸ್ಡ್ ವಜ್ರದ ಉಂಗುರ ಖರೀದಿ
ತನ್ನ ಪ್ರತಿ ದಿನದ ಪರಿಶ್ರಮವನ್ನ ಬ್ರಾಡ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸರಣಿಯ ಮೂಲಕ ದಾಖಲಿಸುತ್ತಿದ್ದ. ಕೊನೆಗೂ 89ನೇ ದಿನದ ವೇಳೆಗೆ ಆತ ತನಗೆ ಬೇಕಿದ್ದ $6,500 ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾದ. 'ವೆಡ್ಡಿಂಗ್ ಬ್ಯಾಂಡ್ಸ್ & ಕೋ' ಮಳಿಗೆಗೆ ತೆರಳಿ, ಬರ್ತ್‌ಸ್ಟೋನ್ ಒಳಗೊಂಡ ವಿಶೇಷ ಲ್ಯಾಬ್-ಗ್ರೋನ್ ಡೈಮಂಡ್ ಉಂಗುರವನ್ನು ಆತ ತೆಗೆದುಕೊಂಡಿದ್ದಾನೆ. "ನನ್ನ ಪ್ರೇಯಸಿ ನಿಜಕ್ಕೂ ಈ ಉಂಗುರಕ್ಕೆ ಅರ್ಹಳು, ಅದಕ್ಕಾಗಿಯೇ ನಾನು ಪಟ್ಟ ಶ್ರಮ ಸಾರ್ಥಕವಾಯಿತು" ಎಂದು ಬ್ರಾಡ್ಲಿ ಭಾವುಕನಾಗಿ ಹೇಳಿಕೊಂಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವ್ಯಾಪಕ ಮೆಚ್ಚುಗೆ
ಬ್ರಾಡ್ಲಿ ಚೋ ಅವರ ಈ ನಿಸ್ವಾರ್ಥ ಪ್ರೀತಿ ಮತ್ತು ಕಠಿಣ ಪರಿಶ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಾಗೂ ರಿಂಗ್ ಡಿಸೈನರ್ ಕುರೂಶ್ ಸೇರಿದಂತೆ ಲಕ್ಷಾಂತರ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. "ಪ್ರೀತಿಯಲ್ಲಿ ನಿಜವಾದ ಬದ್ಧತೆ ಮತ್ತು ಕಠಿಣ ಪರಿಶ್ರಮಕ್ಕೆ ಸಿಕ್ಕ ಜಯ ಇದು" ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಪ್ರೇಯಸಿಯ ಮುಖದಲ್ಲಿ ಮುಗುಳ್ನಗು ತರಲು ಆತ ಪಟ್ಟ ಕಷ್ಟವನ್ನು ಪ್ರತಿಯೊಬ್ಬರೂ ಕೊಂಡಾಡುತ್ತಿದ್ದು, ಶೀಘ್ರದಲ್ಲೇ ಪ್ರಪೋಸಲ್ ವಿಡಿಯೋ ಹಂಚಿಕೊಳ್ಳುವಂತೆ ಕೋರುತ್ತಿದ್ದಾರೆ.


Click it and Unblock the Notifications
