ಮಾಡರ್ನಾ ಲಸಿಕೆ ರದ್ದು: ಜಪಾನ್ ಸರ್ಕಾರದ ನಿರ್ಧಾರಕ್ಕೆ ಕಾರಣವೇನು?
ನವದೆಹಲಿ, ಆಗಸ್ಟ್ 29: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಜಪಾನಿನ ಒಕಿನಾವಾ ಪ್ರಾಂತ್ಯದಲ್ಲಿ ಲೋಷ ಕಂಡು ಬಂದಿರುವ ಮಾಡರ್ನಾ ಲಸಿಕೆ ಬಳಕೆ ರದ್ದುಗೊಳಿಸುವುದಕ್ಕೆ ಸರ್ಕಾರ ತೀರ್ಮಾನಿಸಿದೆ.
ಮಾಡರ್ನಾ ಲಸಿಕೆ ಪಡೆದುಕೊಂಡ ಇಬ್ಬರು ಪುರುಷರು ಮೃತಪಟ್ಟಿದ್ದು, ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಜಪಾನಿನ ಆರೋಗ್ಯ ಸಚಿವಾಲಯ ಹೇಳಿಕೆ ಪ್ರಕಟಿಸಿದ ಒಂದು ದಿನದಲ್ಲಿ ಲಸಿಕೆ ಬಳಕೆಯನ್ನು ರದ್ದುಗೊಳಿಸಲಾಗಿದೆ. ಇದರ ಮಧ್ಯೆ ಲಸಿಕೆ ಪಡೆದುಕೊಂಡ ನಂತರದಲ್ಲಿ ಪ್ರಾಣ ಬಿಟ್ಟಿರುವ ಇಬ್ಬರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ದಕ್ಷಿಣ ಜಪಾನ್‌ನ ಒಕಿನಾವಾ ಪ್ರಾಂತ್ಯವು ಭಾನುವಾರದ ಲಸಿಕೆ ಕಾರ್ಯಕ್ರಮವನ್ನು ಭಾಗಶಃ ಮುಂದೂಡಲಾಗಿದೆ ಎಂದು ಹೇಳಿದೆ. "ನಾವು ಮಾಡರ್ನಾದ ಕೋವಿಡ್ -19 ಲಸಿಕೆಗಳ ಬಳಕೆಯನ್ನು ಅಮಾನತುಗೊಳಿಸುತ್ತಿದ್ದೇವೆ ಏಕೆಂದರೆ ಅವುಗಳಲ್ಲಿ ಕೆಲವು ವಿದೇಶಿ ಪದಾರ್ಥಗಳು ಕಂಡುಬಂದಿವೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ. ಎರಡು ಸಾವಿನ ಪ್ರಕರಣಗಳು ವರದಿಯಾದ ಓಕಿನಾವಾ ಪ್ರಾಂತ್ಯದಲ್ಲಿ ಪತ್ತೆಯಾದ ಲಸಿಕೆಗಳು 1.63 ಲಕ್ಷ ಡೋಸ್‌ಗಳಿಗಿಂತ ಭಿನ್ನವಾಗಿವೆ," ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಮಾಡರ್ನಾ ಲಸಿಕೆಯನ್ನು ರದ್ದುಗೊಳಿಸುವುದಕ್ಕೆ ಜಪಾನ್ ನಿರ್ಧರಿಸಿದ್ದು ಏಕೆ, ಲಸಿಕೆಯಲ್ಲಿ ದೋಷ ಕಂಡು ಬರುವುದಕ್ಕೆ ಕಾರವೇನು?, ಲಸಿಕೆಯಲ್ಲಿ ಪತ್ತೆಯಾಗಿರುವ ದೋಷದ ಬಗ್ಗೆ ಮಾಡರ್ನಾ ಕಂಪನಿ ಹೇಳುವುದೇನು ಎಂಬುದರ ಬಗ್ಗೆ ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

ಮಾಡರ್ನಾ ಲಸಿಕೆ ಪಡೆದುಕೊಂಡ ಇಬ್ಬರು ವ್ಯಕ್ತಿಗಳು ಸಾವು
ಆಗಸ್ಟ್ ತಿಂಗಳಿನಲ್ಲಿ ಎರಡು ಡೋಸ್ ಮಾಡರ್ನಾ ಲಸಿಕೆ ಪಡೆದುಕೊಂಡ ಇಬ್ಬರು ಮೃತಪಟ್ಟಿರುವುದು ವರದಿಯಾಗಿತ್ತು. 30 ಮತ್ತು 38 ವರ್ಷದ ವ್ಯಕ್ತಿಗಳ ಸಾವಿನ ಬಗ್ಗೆ ವರದಿಯಾದ ಬೆನ್ನಲ್ಲೇ ಆರೋಗ್ಯ ಸಚಿವಾಲಯವು ಮಾಡರ್ನಾ ಲಸಿಕೆ ಬಳಕೆಯ ರದ್ದುಗೊಳಿಸಿತ್ತು. ಕಳೆದ ಗುರುವಾರ ರದ್ದುಗೊಳಿಸಿದ ಲಸಿಕೆಯ ಮೂರು ಬ್ಯಾಚ್ ಪೈಕಿ ಒಂದು ಬ್ಯಾಚ್ ನಿಂದ ಈ ಲಸಿಕೆಯ ಡೋಸ್ ಅನ್ನು ನೀಡಲಾಗಿದೆ ಎಂದು ಗೊತ್ತಾಗಿದೆ. ಸಾವಿನ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಲಸಿಕೆ ಮತ್ತು ಸಾವಿನ ನಡುವೆ ನಂಟಿದೆಯೇ ಎಂಬುದು ಸದ್ಯಕ್ಕೆ ತಿಳಿದಿಲ್ಲ ಎಂದು ಸಚಿವಾಲಯ ಹೇಳಿದೆ.

ಮಾಡರ್ನಾ ಕಂಪನಿ ಮತ್ತು ಟಕೆಡಾ ವಿತರಕರ ಸ್ಪಷ್ಟನೆ
"ಪ್ರಸ್ತುತ ಸಂದರ್ಭದಲ್ಲಿ ಇಬ್ಬರ ಸಾವು ಮಾಡರ್ನಾ ಕೋವಿಡ್ -19 ಲಸಿಕೆಯಿಂದ ಉಂಟಾಗಿವೆ ಎಂಬುದಕ್ಕೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ. ಅಲ್ಲದೇ ಎರಡರ ನಡುವೆ ಸಂಬಂಧವಿದೆಯೇ ಎಂದು ತಿಳಿಯಲು ತನಿಖೆ ನಡೆಸುವುದು ಮುಖ್ಯವಾಗಿರುತ್ತದೆ. ಹೀಗಾಗಿ ಬಾಟಲಿಗಳನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮುಂದಿನ ವಾರದ ವೇಳೆಗೆ ಸಂಶೋಧನೆ ವರದಿ ಸಿಗಲಿದೆ," ಎಂದು ಮಾಡರ್ನಾ ಮತ್ತು ಅದರ ಜಪಾನಿನ ವಿತರಕ ಟಕೆಡಾ ಕಂಪನಿ ಸ್ಪಷ್ಟನೆ ನೀಡಿದೆ.

16.30 ಲಕ್ಷ ಡೋಸ್ ಮಾಡರ್ನಾ ಲಸಿಕೆ ವಿತರಣೆ ರದ್ದು
ಕೊರೊನಾವೈರಸ್ ಲಸಿಕೆಯ ಕೆಲವು ಬಾಟಲಿಗಳು ಕಲುಷಿತಗೊಂಡಿರುವ ಬಗ್ಗೆ ವರದಿ ಪ್ರಕಟಗೊಂಡ ಒಂದೇ ವಾರದಲ್ಲಿ ಜಪಾನ್ ಸರ್ಕಾರವು 16.3 ಲಕ್ಷ ಡೋಸ್ ಮಾಡರ್ನಾ ಲಸಿಕೆ ಬಳಕೆಯನ್ನು ಗುರುವಾರ ಸ್ಥಗಿತಗೊಳಿಸಿದೆ. ಮಾಡರ್ನಾ ಲಸಿಕೆ ಪರಿಣಾಮಕಾರಿತ್ವ ಹಾಗೂ ಸುರಕ್ಷತೆ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಮುನ್ನಚ್ಚರಿಕೆ ಕ್ರಮವಾಗಿ ಲಸಿಕೆ ಬಳಕೆ ಸ್ಥಗಿತಗೊಳಿಸಲಾಗಿದೆ ಎಂದು ಜಪಾನ್ ಸರ್ಕಾರ ತಿಳಿಸಿದೆ.
"ಮಾಡರ್ನಾ ತನ್ನ ಕೋವಿಡ್ -19 ಲಸಿಕೆಯ ಔಷಧ ಉತ್ಪನ್ನ ಬಾಟಲಿಗಳಲ್ಲಿ ಕೆಲವು ಕಣದ ಅಂಶಗಳು ಪತ್ತೆಯಾಗಿರುವುದರ ಬಗ್ಗೆ ದೃಢಪಡಿಸುತ್ತದೆ," ಎಂದು ಮಾಡರ್ನಾ ಕಂಪನಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. "ಮಾಡರ್ನಾ ಕಂಪನಿಯು ವರದಿಗಳ ಬಗ್ಗೆ ತನಿಖೆ ನಡೆಸುತ್ತಿದೆ. ಈ ಸಮಸ್ಯೆ ಬಗೆಹರಿಸಲು ತನ್ನ ಪಾಲುದಾರ ಸಂಸ್ಥೆಯಾದ ಟಕೆಡಾ ಮತ್ತು ನಿಯಂತ್ರಕರೊಂದಿಗೆ ತ್ವರಿತವಾಗಿ ಕೆಲಸ ಮಾಡಲು ಬದ್ಧವಾಗಿದೆ" ಎಂದು ತಿಳಿಸಿದೆ. ಜಪಾನ್‌ನ ಟಕೆಡಾ ಫಾರ್ಮಾಸ್ಯುಟಿಕಲ್ (4502.T) ದೇಶದಲ್ಲಿ ಲಸಿಕೆ ವಿತರಿಸುವ ಹೊಣೆ ಹೊತ್ತುಕೊಂಡಿದೆ.

ಮಾಡರ್ನಾ ಲಸಿಕೆ ಮಾಲಿನ್ಯಗೊಂಡಿದ್ದು ಯಾವಾಗ?
ಆಗಸ್ಟ್ 16ರಂದು ಮೊದಲ ಬಾರಿಗೆ ಮಾಡರ್ನಾ ಕಂಪನಿಯ ಕೊವಿಡ್-19 ಲಸಿಕೆಯಲ್ಲಿ ಕಲುಷಿತ ಅಂಶ ಪತ್ತೆಯಾಗಿತ್ತು ಎಂದು ಜಪಾನ್ ಆರೋಗ್ಯ ಸಚಿವಾಲಯದ ಅಧಿಕಾರಿ ತಿಳಿಸಿದ್ದರು. ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು. ಆದರೆ ಯಾವ ಬಾಟಲಿಗಳಲ್ಲಿನ ಲಸಿಕೆಯಲ್ಲಿ ಕಲುಷಿತ ಅಂಶವಿದೆ, ಆ ಲಸಿಕೆಯ ಬಾಟಲಿಗಳನ್ನು ಯಾವ ಪ್ರದೇಶದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕೆ ಟಕೆಡಾ ಕಂಪನಿಯ ಸಮಯಾವಕಾಶ ಬೇಕಾಗಿತ್ತು.
ಸ್ಪೇನ್ ನಲ್ಲಿನಲ್ಲಿರುವ ಗುತ್ತಿಗೆ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಸಂದರ್ಭ ಅದರ ಒಂದು ಮಾರ್ಗದಲ್ಲಿ ಉತ್ಪಾದನಾ ಸಮಸ್ಯೆಯಾಗಿದೆ. ಇದರಿಂದಾಗಿ ಲಸಿಕೆ ಕಲುಷಿತಚಗೊಂಡಿರುವ ಸಾಧ್ಯತೆಯಿದೆ ಎಂದು ಮಾಡರ್ನಾ ಕಂಪನಿ ಹೇಳಿದೆ. ಸ್ಪಾನಿಷ್ ಫಾರ್ಮಾ ಕಂಪನಿ ರೋವಿ(Rovi.MC)ಯು ಲಸಿಕೆಯನ್ನು ಬಾಟಲಿಗಳಿಗೆ ತುಂಬಿಸುವ ಮತ್ತು ಅಂತಿಮಗೊಳಿಸುವ ಕಾರ್ಯವನ್ನು ಮಾಡುತ್ತದೆ. ಹೀಗೆ ತುಂಬಿಸಿದ ಮಾಡರ್ನಾ ಕಂಪನಿಯ ಲಸಿಕೆಯನ್ನು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ರವಾನಿಸಲಾಗುತ್ತದೆ. ಅದೇ ರೀತಿ ಇತ್ತೀಚಿಗೆ ಜಪಾನಿಗೆ ಕಳುಹಿಸಿದ ಲಸಿಕೆಯ ಬಾಟಲಿಯಲ್ಲಿ ದೋಷ ಕಂಡು ಬಂದಿದೆ.

ಜಪಾನಿನಲ್ಲಿ ಶೇ.44ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಪೈಕಿ ಡೆಲ್ಟಾ ವೈರಸ್ ರೂಪಾಂತರ ತಳಿಯು ಜಪಾನಿನಲ್ಲಿ ಅತಿಹೆಚ್ಚು ಅಪಾಯಕಾರಿ ಎನಿಸಿದೆ. ಡೆಲ್ಟಾ ರೂಪಾಂತರ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಾದ ಹಿನ್ನೆಲೆ ಆಗಸ್ಟ್ ತಿಂಗಳಿನಲ್ಲಿ ಒಂದೇ ದಿನ ಗರಿಷ್ಠ 25,000 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವರದಿಯಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ.54ರಷ್ಟು ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಶೇ.44ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳ 24,200 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 14,11,443ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 54 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಒಟ್ಟು ಸಾವಿನ ಸಂಖ್ಯೆ 17,940ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ದೇಶದಲ್ಲಿ 2,41,746 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ಗೊತ್ತಾಗಿದೆ.












Click it and Unblock the Notifications