Condom: ಬೆಡ್‌ರೂಮ್‌ವರೆಗೂ ತಟ್ಟಿದ ಯುದ್ಧದ ಬಿಸಿ; ವಿಶ್ವದ ಅತಿದೊಡ್ಡ ಕಾಂಡೋಮ್ ಉತ್ಪಾದನಾ ಕಂಪನಿಯಿಂದ ಬೆಲೆ ಏರಿಕೆ ಶಾಕ್
Condom Price: ವಿಶ್ವದ ಅತಿದೊಡ್ಡ ಕಾಂಡೋಮ್ ಉತ್ಪಾದನಾ ಕಂಪನಿಯಾದ ಮಲೇಷ್ಯಾ ಮೂಲದ ಕ್ಯಾರೆಕ್ಸ್ (Karex Berhad) ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ತನ್ನ ಉತ್ಪನ್ನಗಳ ಬೆಲೆಯನ್ನು ಶೇಕಡಾ 20ರಿಂದ 30ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯೇ ಇದಕ್ಕೆ ಮುಖ್ಯ ಕಾರಣ ಎಂದು ಸಂಸ್ಥೆ ತಿಳಿಸಿದೆ.
ಕಾಂಡೋಮ್ ತಯಾರಿಕೆಗೆ ಅಗತ್ಯವಿರುವ ಪೆಟ್ರೋಕೆಮಿಕಲ್ ಆಧಾರಿತ ವಸ್ತುಗಳಾದ ಸಿಂಥೆಟಿಕ್ ರಬ್ಬರ್, ನೈಟ್ರೈಲ್ ಮತ್ತು ಪ್ಯಾಕೇಜಿಂಗ್ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಯುದ್ಧದ ಕಾರಣದಿಂದಾಗಿ ಕೆಲವು ಕಚ್ಚಾ ವಸ್ತುಗಳ ಬೆಲೆ ಶೇಕಡ 100ರಷ್ಟು ಹೆಚ್ಚಾಗಿದೆ ಎಂದು ಕ್ಯಾರೆಕ್ಸ್ ಸಿಇಒ ಗೋ ಮಿಯಾ ಕಿಯಾಟ್ ತಿಳಿಸಿದ್ದಾರೆ.

ಸರಕು ಸಾಗಣೆ ವೆಚ್ಚ ಹೆಚ್ಚಳ
ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಹೋರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ಸ್ಥಗಿತಗೊಂಡಿರುವುದು ಜಾಗತಿಕ ಇಂಧನ ಮತ್ತು ಕಚ್ಚಾ ವಸ್ತುಗಳ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಾಗಿದೆ. ಈ ಮೊದಲು ಯುರೋಪ್ ಮತ್ತು ಅಮೆರಿಕಕ್ಕೆ ಸರಕು ತಲುಪಲು ಒಂದು ತಿಂಗಳು ಹಿಡಿಯುತ್ತಿತ್ತು. ಆದರೆ ಈಗ ಹಡಗುಗಳ ಸಂಚಾರ ವ್ಯತ್ಯಯದಿಂದಾಗಿ ಸುಮಾರು ಎರಡು ತಿಂಗಳು ಬೇಕಾಗುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದಾಸ್ತಾನು ಕೊರತೆ ಉಂಟಾಗಿದೆ.
ಕಾಂಡೋಮ್‌ಗಳಿಗೆ ಹೆಚ್ಚಿದ ಬೇಡಿಕೆ
ಒಂದೆಡೆ ಪೂರೈಕೆ ಕಡಿಮೆ ಆಗುತ್ತಿದ್ದರೆ, ಮತ್ತೊಂದೆಡೆ ಜಾಗತಿಕವಾಗಿ ಕಾಂಡೋಮ್‌ಗಳಿಗೆ ಇರುವ ಬೇಡಿಕೆ ಈ ವರ್ಷ ಶೇಕಡ 30ರಷ್ಟು ಹೆಚ್ಚಾಗಿದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬೇಡಿಕೆ ಹೆಚ್ಚಿದೆ. ಕ್ಯಾರೆಕ್ಸ್ ಸಂಸ್ಥೆಯು ವಿಶ್ವದ ಪ್ರತಿ ಐದು ಕಾಂಡೋಮ್‌ಗಳಲ್ಲಿ ಒಂದನ್ನು ಉತ್ಪಾದಿಸುತ್ತದೆ. ಇದು ಡ್ಯುರೆಕ್ಸ್ ಮತ್ತು ಟ್ರೋಜನ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳಿಗೆ ಸರಬರಾಜು ಮಾಡುವುದರಿಂದ, ಈ ಬೆಲೆ ಏರಿಕೆ ಜಾಗತಿಕ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಲಿದೆ.
ಕಾಂಡೋಮ್ ಬೆಲೆ ಏರಿಕೆಗೆ ಕಾರಣಗಳು
* ಪೂರೈಕೆ ಮೇಲೆ ಯುದ್ಧದ ಪ್ರಭಾವ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಜಾಗತಿಕ ಸಾಗಾಟದ ಮೇಲೆ ದೊಡ್ಡ ಹೊಡೆತ ನೀಡಿವೆ.
* ಪ್ರಮುಖ ನೌಕಾ ಮಾರ್ಗಗಳ ಬಂದ್: ಹೋರ್ಮುಜ್ ಜಲಸಂಧಿಯಂತಹ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಸಂಘರ್ಷ ಏರ್ಪಟ್ಟಿರುವುದರಿಂದ ಹಡಗುಗಳು ದೀರ್ಘ ಮಾರ್ಗಗಳನ್ನು ಬಳಸಬೇಕಾಗಿದೆ. ಇದು ಸಾಗಾಣಿಕೆ ವೆಚ್ಚವನ್ನು ವಿಪರೀತವಾಗಿ ಹೆಚ್ಚಿಸಿದೆ.
* ಇಂಧನ ಬೆಲೆ ಏರಿಕೆ: ತೈಲ ಉತ್ಪಾದನಾ ವಲಯದಲ್ಲಿನ ಅಸ್ಥಿರತೆಯಿಂದಾಗಿ ಪೆಟ್ರೋಕೆಮಿಕಲ್ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಇದು ಕಾಂಡೋಮ್ ತಯಾರಿಕೆಗೆ ಬಳಸುವ ಲೇಟೆಕ್ಸ್ ಮತ್ತು ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮೇಲೆ ಪರಿಣಾಮ ಬೀರಿದೆ.
* ಕಚ್ಚಾ ವಸ್ತುಗಳ ಕೊರತೆ: ಕಾಂಡೋಮ್ ತಯಾರಿಕೆಯಲ್ಲಿ ಪ್ರಮುಖವಾಗಿ ಎರಡು ವಿಧದ ವಸ್ತುಗಳನ್ನು ಬಳಸಲಾಗುತ್ತದೆ. ನೈಸರ್ಗಿಕ ಲೇಟೆಕ್ಸ್ ಹಾಗೂ ಸಿಂಥೆಟಿಕ್ ಮೆಟೀರಿಯಲ್ಸ್ ಆಗಿವೆ. ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರಬ್ಬರ್ ಉತ್ಪಾದನೆ ಕುಂಠಿತಗೊಂಡಿದೆ. ಅಲ್ಲದೆ, ಪೆಟ್ರೋಲಿಯಂನಿಂದ ತಯಾರಾಗುವ ಸಿಂಥೆಟಿಕ್ ರಬ್ಬರ್ ಬೆಲೆಯು ಯುದ್ಧದ ಕಾರಣದಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
* ಉತ್ಪಾದನಾ ಸಾಮರ್ಥ್ಯದ ಕುಸಿತ: ವಿಶ್ವದ ಅತಿದೊಡ್ಡ ಕಾಂಡೋಮ್ ಉತ್ಪಾದನಾ ಸಂಸ್ಥೆಗಳು ಕೆಲಸಗಾರರ ಕೊರತೆ ಮತ್ತು ಹೆಚ್ಚಿದ ವಿದ್ಯುತ್ ವೆಚ್ಚದಿಂದಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಹೆಣಗಾಡುತ್ತಿವೆ. ಬೇಡಿಕೆ ಹೆಚ್ಚಿದ್ದರೂ, ಮಾರುಕಟ್ಟೆಗೆ ತಲುಪಿಸುವ ವೇಗ ಕಡಿಮೆಯಾಗಿದೆ. ಒಟ್ಟಿನಲ್ಲಿ ಇಸ್ರೇಲ್-ಇರಾನ್ ಯುದ್ಧವು ಕೇವಲ ರಾಜಕೀಯ ಅಥವಾ ಆರ್ಥಿಕ ಕ್ಷೇತ್ರಕ್ಕೆ ಸೀಮಿತವಾಗದೆ, ಜನಸಾಮಾನ್ಯರ ದೈನಂದಿನ ಜೀವನ ಮತ್ತು ಕುಟುಂಬ ಯೋಜನೆಯ ವೆಚ್ಚದ ಮೇಲೆಯೂ ದೊಡ್ಡ ಪರಿಣಾಮ ಬೀರಿದೆ.












Click it and Unblock the Notifications