ಗಾಲ್ವಾನ್ ಕಣಿವೆ ಸಂಘರ್ಷ: ತನ್ನ 40 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನುವುದು 'ಸುಳ್ಳು ಸುದ್ದಿ' ಎಂದ ಚೀನಾ
ನವದೆಹಲಿ ಜೂನ್ 23: ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗಿನ ಸಂಘರ್ಷದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕನಿಷ್ಠ 40 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಚೀನಾ ಹೇಳಿದೆ.
ಪಿಎಲ್‌ಎ ಸಾವು-ನೋವುಗಳ ಕುರಿತ ವರದಿಗಳನ್ನು ನಿರಾಕರಿಸಿದ ಚೀನಾ ವಿದೇಶಾಂಗ ಸಚಿವಾಲಯ ಜೂನ್ 22 ರಂದು ಮಾತುಕತೆಗಳ ಮೂಲಕ ಉದ್ವಿಗ್ನತೆಯನ್ನು ಪರಿಹರಿಸಲು ಸಭೆ ನಡೆಸಿದೆ ಎಂದು ಹೇಳಿದೆ.
"ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಚೀನಾ ಮತ್ತು ಭಾರತ ಪರಸ್ಪರ ಮಾತುಕತೆ ನಡೆಸುತ್ತಿವೆ" ಎಂದು ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಹೇಳಿದ್ದಾರೆ.

"ನೀವು ಮಾಧ್ಯಮ ವರದಿಯಲ್ಲಿ, ಚೀನಾದ ಕಡೆಯಿಂದ ಸಂಭವಿಸಿದ ಸಾವುನೋವುಗಳು 40 ಎಂದು ಕೆಲವರು ಆರೋಪಿಸಿದ್ದಾರೆ, ಇದು ನಕಲಿ ಸುದ್ದಿ ಎಂದು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ" ಎಂದು ಜಾವೋ ಹೇಳಿದರು.
ಈ ವಾರದ ಆರಂಭದಲ್ಲಿ, ಚೀನಾದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಕರೆಗೆ ಪ್ರತಿಕ್ರಿಯೆಯಾಗಿ ಹೇಳಿಕೆ ನೀಡಿತ್ತು. "ಗಡಿ ಘರ್ಷಣೆಯ ಜವಾಬ್ದಾರಿ ಸಂಪೂರ್ಣವಾಗಿ ಭಾರತದ ಮೇಲಿದೆ. ಚೀನಾ-ಭಾರತ ಸಂಬಂಧಗಳಿಗೆ ಚೀನಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ದ್ವಿಪಕ್ಷೀಯ ಸಂಬಂಧಗಳ ದೀರ್ಘಕಾಲೀನ ಅಭಿವೃದ್ಧಿಯನ್ನು ಕಾಪಾಡಲು ಇಬ್ಬರೂ ಕೆಲಸ ಮಾಡಬಹುದೆಂದು ಭಾವಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಜೂನ್ 15 ರ ರಾತ್ರಿ ನಡೆದ ಹಿಂಸಾತ್ಮಕ ಘರ್ಷಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯು 20 ಸೈನಿಕರನ್ನು ಕಳೆದುಕೊಂಡಿದ್ದರೆ, ಪಿಎಲ್‌ಎ ಅನುಭವಿಸಿದ ಸಾವುನೋವುಗಳ ವಿವರಗಳನ್ನು ಬಹಿರಂಗಪಡಿಸಲು ಚೀನಾ ಇದುವರೆಗೆ ನಿರಾಕರಿಸಿದೆ. ಆದರೆ ಅಮೆರಿಕಾ ಗುಪ್ತಚರ ಇಲಾಖೆ ಚೀನಾದ 40 ಸೈನಿಕರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಿತ್ತು.












Click it and Unblock the Notifications