ಚೀನಾದಲ್ಲಿ ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ
ಬೀಜಿಂಗ್, ಜನವರಿ 17: ಚೀನಾದಲ್ಲಿ ಸತತ ಐದನೇ ವರ್ಷವೂ ಜನನ ಪ್ರಮಾಣದಲ್ಲಿ ಭಾರಿ ಕುಸಿತ ಕಂಡುಬಂದಿದೆ. ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ ಆರೋಪ ಹೊತ್ತಿರುವ ಚೀನಾದಲ್ಲಿ ಜನಸಂಖ್ಯೆ ಪ್ರಮಾಣ ತೀವ್ರತರದಲ್ಲಿ ಕುಸಿತ ಕಂಡಿದೆ.
2021ರಲ್ಲಿ ಕೇವಲ 4.80 ಲಕ್ಷ ಜನಸಂಖ್ಯೆ ಹೆಚ್ಚಳವಾಗಿ 141.26 ಕೋಟಿಗೆ ತಲುಪಿದೆ. ಈ ಮೂಲಕ ಸತತ ಐದನೇ ವರ್ಷವೂ ಜನನ ಪ್ರಮಾಣದಲ್ಲಿ ಭಾರೀ ಕುಂಠಿತವಾಗಿದೆ. ಇದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚೀನಾದ ಮೂರನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ಪ್ರದೇಶವಾದ ಹೆನಾನ್ ಪ್ರಾಂತ್ಯದಲ್ಲಿ ನವಜಾತ ಶಿಶುಗಳ ಸಂಖ್ಯೆ 2020 ರಲ್ಲಿ 9.20 ಲಕ್ಷದಷ್ಟು ಇಳಿಕೆ ಕಂಡಿದೆ. 2019 ಕ್ಕೆ ಹೋಲಿಕೆ ಮಾಡಿದಲ್ಲಿ ಅದು 23.3 ರಷ್ಟು ಕಡಿಮೆ ಆಗಿದೆ. ಅಂದರೆ, 1 ಸಾವಿರ ಜನರಿಗೆ 9 ಮಕ್ಕಳು ಮಾತ್ರ ಜನನವಾಗಿದೆ.

ಜನನ ಪ್ರಮಾಣದಲ್ಲಿ ಗುರುತರ ಕುಸಿತ ತಡೆಗಟ್ಟಲು ಚೀನಾದ ಹಲವು ಪ್ರಾಂತ್ಯಗಳಲ್ಲಿ ಒಂದು ಕುಟುಂಬ 3 ಮಕ್ಕಳನ್ನು ಹೊಂದಲು ಪ್ರೇರೇಪಿಸುತ್ತಿದೆ. ಅಲ್ಲದೇ, ಇದಕ್ಕೆ ಬೆಂಬಲ ನೀಡಲು ಪೋಷಕರ ರಜೆ, ಹೆರಿಗೆ ರಜೆ, ಮದುವೆ ರಜೆ ಮತ್ತು ಪಿತೃತ್ವ ರಜೆಗಳಂತಹ ಕ್ರಮಗಳನ್ನು ಜಾರಿ ಮಾಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಈ ಹಿಂದೆ ಜಾರಿಯಿದ್ದ 'ಒಂದು ಕುಟುಂಬ ಒಂದು ಮಗು' ನೀತಿಯನ್ನು 2016 ರಲ್ಲಿ ರದ್ದು ಮಾಡಿ ಎರಡು ಮಗು ಹೊಂದಲು ಚೀನಾ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಇದೀಗ ಮೂರು ಮಗು ಹೊಂದಲೂ ಅವಕಾಶ ನೀಡಲಾಗಿದೆ.
2020 ರಲ್ಲಿ ಚೀನಾದ ಜನಸಂಖ್ಯೆ 141.20 ಕೋಟಿಯಷ್ಟಿತ್ತು. ಇದು 2021 ರಲ್ಲಿ ಆ ಸಂಖ್ಯೆ 141.26 ಕೋಟಿಯಷ್ಟು ಮಾತ್ರ ಆಗಿದೆ. ಹೀಗಾಗಿ ಇಡೀ ವರ್ಷದಲ್ಲಿ 4.80 ಲಕ್ಷ ಜನಸಂಖ್ಯೆ ಮಾತ್ರ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಬ್ಯೂರೋ(ಎನ್ಬಿಎಸ್) ತಿಳಿಸಿದೆ.
2021ರಲ್ಲಿ ಆಗಿರುವ ಜನನ ಪ್ರಮಾಣ 1.06 ಕೋಟಿ. 2020ರಲ್ಲಿ ಅದು 1.20 ಕೋಟಿಯಾಗಿತ್ತು ಎಂದು ಹಾಂಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ದೇಶದಲ್ಲಿ ಜನನ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಕುಸಿತ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ದೇಶದ ಆರ್ಥಿಕ ಪ್ರಗತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಚೀನಾದ ನ್ಯಾಷನಲ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್ ಸಂಸ್ಥೆ ಜನಸಂಖ್ಯೆ ಮಾಹಿತಿಯನ್ನು ಬಹಿರಂಗಪಡಿಸಿದೆ.
ನಿಧಾನಗತಿಯ ಆರ್ಥಿಕತೆ ಮತ್ತು ದಶಕಗಳಲ್ಲ ದೇಶದ ದುರ್ಬಲ ಜನಸಂಖ್ಯೆಯ ಬೆಳವಣಿಗೆಯ ಮಧ್ಯೆ ಬೀಜಿಂಗ್ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ.
ದೇಶದ ವಾರ್ಷಿಕ ಅಂಕಿ-ಅಂಶಗಳ ಪ್ರಕಾರ 1978ರ ಬಳಿಕ ಇಂಥದ್ದೊಂದು ಕುಸಿತವನ್ನು ಚೀನಾ ಕಂಡಿರಲಿಲ್ಲ, ಅಲ್ಲದೆ 1949ರಲ್ಲಿ ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ರಚನೆ ಆದ ಬಳಿಕ ಇದು ಅತ್ಯಂತ ಕಡಿಮೆ ಜನನ ಪ್ರಮಾಣ ಆಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜನನ ಪ್ರಮಾಣವು ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ಒಂದೆಡೆ ವಯಸ್ಸಾದವರ ಸಂಖ್ಯೆ ಹೆಚ್ಚಳದಿಂದ ಚೀನಾದ ಆರ್ಥಿಕ ಬೆಳವಣಿಗೆ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರಿದೆ.
ಇನ್ನೊಂದೆಡೆ ಜನನ ಪ್ರಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಆಗಿರುವುದು ಚೀನಾದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications