KAS ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದ KPSC: 384 ಗೆಜೆಟೆಡ್ ಪ್ರೊಬೇಷನರ್ಸ್ ಸಂದರ್ಶನ ಮುಂದೂಡಿಕೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ (KAS) ಹುದ್ದೆಗಳ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. 384 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ನಿಗದಿಯಾಗಿದ್ದ ವ್ಯಕ್ತಿತ್ವ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆಯನ್ನು ಆಡಳಿತಾತ್ಮಕ ಕಾರಣಗಳಿಂದಾಗಿ ದಿಢೀರನೆ ಮುಂದೂಡಲಾಗಿದೆ. ಈ ಕುರಿತು ಆಯೋಗವು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ.
ಹಳೆಯ ವೇಳಾಪಟ್ಟಿ ಏನಿತ್ತು?
ದಿನಾಂಕ 10-03-2026 ರಂದು ಪ್ರಕಟವಾದ ಮಾಹಿತಿಯಂತೆ, ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾರ್ಚ್ 23, 2026 ರಿಂದ ಮೇ 04, 2026 ರವರೆಗೆ ವಿವಿಧ ಹಂತಗಳಲ್ಲಿ ಸಂದರ್ಶನವನ್ನು ನಡೆಸಲು ನಿರ್ಧರಿಸಲಾಗಿತ್ತು. 1:3 ಅನುಪಾತದಲ್ಲಿ ಒಟ್ಟು 1,152 ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ 2 ರಂದು ಬಿಡುಗಡೆ ಮಾಡಲಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಅಭ್ಯರ್ಥಿಗಳು ಸಂದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಇದೀಗ ಈ ಸಂಪೂರ್ಣ ವೇಳಾಪಟ್ಟಿಯನ್ನು ಆಯೋಗವು ಅಧಿಕೃತವಾಗಿ ಹಿಂಪಡೆದಿದೆ.

ಮುಂದೂಡಿಕೆಗೆ ಅಸಲಿ ಕಾರಣವೇನು?
ಅಧಿಕೃತ ಪ್ರಕಟಣೆಯಲ್ಲಿ ಕೇವಲ 'ಆಡಳಿತಾತ್ಮಕ ಕಾರಣ' ಎಂದು ಉಲ್ಲೇಖಿಸಲಾಗಿದ್ದರೂ, ಇತ್ತೀಚೆಗೆ ಕೇಳಿಬಂದಿರುವ ಪರೀಕ್ಷಾ ಅಕ್ರಮದ ಗಂಭೀರ ಆರೋಪಗಳೇ ಈ ದಿಢೀರ್ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಅಭ್ಯರ್ಥಿಗಳು ಹಾಗೂ ಶಿಕ್ಷಣ ತಜ್ಞರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಒಂದೇ ಪರೀಕ್ಷಾ ಕೇಂದ್ರದ, ಒಂದೇ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದಿದ್ದ 10 ರಿಂದ 15 ಅಭ್ಯರ್ಥಿಗಳು ಒಟ್ಟಾಗಿ ತೇರ್ಗಡೆಯಾಗಿದ್ದಾರೆ ಎಂಬ ಆರೋಪಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದವು. ಕೇವಲ ಒಂದು ಕೊಠಡಿಯಿಂದಲೇ ಇಷ್ಟೊಂದು ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸಹಜವಾಗಿಯೇ ಪಾರದರ್ಶಕತೆಯ ಬಗ್ಗೆ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಅಭ್ಯರ್ಥಿಗಳ ಪ್ರತಿಭಟನೆ ಹಾಗೂ ನಿರಂತರ ಮಾಧ್ಯಮಗಳ ವರದಿಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು, ಈ ಬಗ್ಗೆ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕೆಪಿಎಸ್‌ಸಿಗೆ ಸೂಚಿಸಿದ್ದರು. ಗೃಹ ಸಚಿವ ಜಿ. ಪರಮೇಶ್ವರ್ ಅವರು ಕೂಡ ಈ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು. ಸರ್ಕಾರದ ಈ ಬಿಗಿ ನಿಲುವಿನ ಬೆನ್ನಲ್ಲೇ, ಆಯೋಗವು ಎಚ್ಚೆತ್ತುಕೊಂಡು ಸಂದರ್ಶನ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಆಯೋಗದ ಸ್ಪಷ್ಟನೆ
ಅಕ್ರಮದ ಆರೋಪಗಳನ್ನು ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ ಅವರು ಆರಂಭದಲ್ಲಿ ತಳ್ಳಿಹಾಕಿದ್ದರು. "ಸುಮಾರು 5,700 ಕ್ಕೂ ಹೆಚ್ಚು ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆದಿದ್ದಾರೆ. ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 10-12 ಮಂದಿ ಪಾಸ್ ಆಗಿರುವುದು ಅಚ್ಚರಿಯೇನಲ್ಲ. ಇದು ಆಧಾರರಹಿತ ಆರೋಪ" ಎಂದು ಸ್ಪಷ್ಟನೆ ನೀಡಿದ್ದರು. ಆದಾಗ್ಯೂ, ವ್ಯವಸ್ಥೆಯ ಮೇಲಿನ ನಂಬಿಕೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮತ್ತು ದೂರುದಾರರಿಗೆ ಅಧಿಕೃತವಾಗಿ ದೂರು ನೀಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಇದೀಗ ಸಂದರ್ಶನ ಪ್ರಕ್ರಿಯೆಗೆ ಬ್ರೇಕ್ ಹಾಕಲಾಗಿದೆ. ಜೊತೆಗೆ, ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳ ಮಾತಿಗೆ ಮರುಳಾಗಬಾರದು, ಉದ್ಯೋಗ ಕೊಡಿಸುವುದಾಗಿ ಹಣ ಕೇಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಯೋಗ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಮುಂದಿನ ದಿನಾಂಕ ಯಾವಾಗ?
ಸದ್ಯಕ್ಕೆ ಸಂದರ್ಶನ ಪ್ರಕ್ರಿಯೆಯನ್ನು ಮಾತ್ರ ತಡೆಹಿಡಿಯಲಾಗಿದ್ದು, ವ್ಯಕ್ತಿತ್ವ ಪರೀಕ್ಷೆಯ ಪರಿಷ್ಕೃತ (Revised) ದಿನಾಂಕ ಮತ್ತು ಸಮಯದ ಮಾಹಿತಿಯನ್ನು ಶೀಘ್ರದಲ್ಲಿಯೇ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ, ತಮ್ಮ ಸಂದರ್ಶನದ ಸಿದ್ಧತೆಯನ್ನು ಮುಂದುವರಿಸುವುದು ಸೂಕ್ತ. ಹಗಲಿರುಳು ಕಷ್ಟಪಟ್ಟು ಓದಿ ಕೆಎಎಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದ ನೂರಾರು ಪ್ರಾಮಾಣಿಕ ಅಭ್ಯರ್ಥಿಗಳು ಆಯೋಗವು ಆದಷ್ಟು ಬೇಗ ಗೊಂದಲಗಳನ್ನು ಬಗೆಹರಿಸಿ, ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ.












Click it and Unblock the Notifications