ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆ ಇಲ್ಲ, ಕೇಂದ್ರ ಸಚಿವರಿಂದ ಭರವಸೆ ಸಿಕ್ಕಿದೆ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಎಲ್‌ಪಿಜಿ ಅಭಾವವನ್ನು ನೀಗಿಸಲು ಹೊರದೇಶಗಳಿಂದ ಅನಿಲ ಪೂರೈಕೆಯಂತಹ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಶೇಷವಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್, ರೆಸ್ಟೋರೆಂಟ್ ಮತ್ತು ಕ್ಯಾಟರಿಂಗ್ ಉದ್ಯಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ತುರ್ತು ಪತ್ರ ಬರೆದು, ಕೂಡಲೇ ತೈಲ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದೇನೆ ಎಂದರು.
ಪಶ್ಚಿಮ ಏಷ್ಯಾದಲ್ಲಿ (ಇರಾನ್-ಇಸ್ರೇಲ್ ಸಂಘರ್ಷ) ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಅನಿಲ ಪೂರೈಕೆಯಲ್ಲಿ ಜಾಗತಿಕವಾಗಿ ಅಡೆತಡೆಗಳು ಉಂಟಾಗಿವೆ. ಇದನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಮಾರ್ಚ್ 9ರಂದು ಹೊಸ ಆದೇಶ ಹೊರಡಿಸಿ, ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದೆ. ಇದರಿಂದಾಗಿ ವಾಣಿಜ್ಯ ಉದ್ದೇಶದ ಅನಿಲ ಪೂರೈಕೆಯಲ್ಲಿ ಹಠಾತ್ ಕುಸಿತ ಕಂಡಿದ್ದು, ಹೋಟೆಲ್‌ಗಳು ಮತ್ತು ಹಾಸ್ಟೆಲ್‌ಗಳಲ್ಲಿ ಆಹಾರ ತಯಾರಿಕೆಗೆ ದೊಡ್ಡ ಮಟ್ಟದ ತೊಂದರೆಯಾಗಿದೆ.

ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಲಿ
"ಹೋಟೆಲ್‌ಗಳ ಮೇಲೆ ಅವಲಂಬಿತರಾಗಿರುವ ಜನಸಂಖ್ಯೆ ದೊಡ್ಡದಿದೆ, ಒಂದು ವೇಳೆ ಹೋಟೆಲ್ ವ್ಯವಸ್ಥೆ ಸ್ಥಗಿತಗೊಂಡರೆ ಜನಜೀವನ ಅಸ್ತವ್ಯಸ್ತವಾಗುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಮಾತ್ರ ಈ ಸಮಸ್ಯೆ ಹೆಚ್ಚಾಗಿದೆ ಎಂದು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ಉತ್ತರಿಸಿದ ಸಿದ್ದರಾಮಯ್ಯ, "ಬಿಜೆಪಿಯವರು ಕೇವಲ ಮಾತನಾಡುವ ಬದಲು ಕೇಂದ್ರದ ಮೇಲೆ ಒತ್ತಡ ತಂದು ಎಲ್‌ಪಿಜಿ ಹೆಚ್ಚಿನ ಸರಬರಾಜಿಗೆ ಕ್ರಮ ವಹಿಸಲಿ" ಎಂದು ತಿರುಗೇಟು ನೀಡಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಎಂದೂ ತಿಳಿಸಿದರು.
ಸದ್ಯಕ್ಕೆ ಎಲ್‌ಪಿಜಿ ಪೂರೈಕೆ ಕೊರತೆಯಿಂದಾಗಿ ಹೋಟೆಲ್‌ಗಳಲ್ಲಿ ದೋಸೆಯಂತಹ ಹೆಚ್ಚು ಗ್ಯಾಸ್ ಬಳಸುವ ತಿಂಡಿಗಳನ್ನು ಮೆನುವಿನಿಂದ ತೆಗೆದುಹಾಕಲಾಗುತ್ತಿದೆ. ಕೆಲವು ಹೋಟೆಲ್‌ಗಳು ಈಗಾಗಲೇ ಇಂಡಕ್ಷನ್ ಸ್ಟೌವ್‌ಗಳಿಗೆ ಬದಲಾಗುತ್ತಿವೆ. ಅಲ್ಲದೆ ಪೈಪ್‌ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಹೊಂದಿರುವವರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂಬ ಹೊಸ ನಿಯಮ ಕೂಡ ಜಾರಿಗೆ ಬಂದಿದ್ದು, ಇದು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಿದೆ. ಸರ್ಕಾರವು ಜನರಿಗೆ ಗಾಬರಿಗೊಂಡು ಸಿಲಿಂಡರ್ ಕಾಯ್ದಿರಿಸದಂತೆ ಮನವಿ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿರುವಂತೆ, ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಉತ್ಪಾದನೆ ಮತ್ತು ಸರಬರಾಜನ್ನು ಸುಗಮಗೊಳಿಸುವುದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನಿಲವನ್ನು ಒದಗಿಸಿದರೆ ಮಾತ್ರ ರಾಜ್ಯ ಸರ್ಕಾರವು ಅದನ್ನು ಗ್ರಾಹಕರಿಗೆ ವಿತರಿಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಉಂಟಾಗಿರುವ ಪೂರೈಕೆಯ ವ್ಯತ್ಯಯವು ಕೇಂದ್ರ ಮಟ್ಟದ ನಿರ್ಧಾರಗಳು ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದ ಉಂಟಾಗಿದ್ದು, ಇದನ್ನು ಸರಿಪಡಿಸಲು ಕೇಂದ್ರವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಈಗಾಗಲೇ ತೈಲ ಕಂಪನಿಗಳ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಎರಡು ಪ್ರಮುಖ ಸಭೆಗಳನ್ನು ನಡೆಸಿದ್ದಾರೆ. ರಾಜ್ಯದ ಜನತೆಗೆ, ಅದರಲ್ಲೂ ಮುಖ್ಯವಾಗಿ ಹೋಟೆಲ್ ಮತ್ತು ವಾಣಿಜ್ಯ ಉದ್ದೇಶದ ಬಳಕೆದಾರರಿಗೆ ಸಿಲಿಂಡರ್ ಅಭಾವ ತಟ್ಟದಂತೆ ನೋಡಿಕೊಳ್ಳಲು ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಅಧಿಕೃತ ಪತ್ರವನ್ನೂ ಬರೆಯಲಾಗಿದೆ.












Click it and Unblock the Notifications