ಕೆನ್ನೆಗೆ ಅರಿಷಿಣ ಹಚ್ಚಿದ ನಂತರ ಕೊನೆಯುಸಿರೆಳೆದ ಪತ್ನಿ ಚೆನ್ನಮ್ಮಂಗೆ ದೇವೇಗೌಡರ ಕಣ್ಣೀರ ವಿದಾಯ, ಪಕ್ಷಾತೀತ ಗಣ್ಯರ ಅಶ್ರುತರ್ಪಣ
ಹಾಸನ: ಹೃದಯಾಘಾತದಿಂದ ನಿಧನರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಇಂದು (ಜುಲೈ 20) ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ತಪ್ಪಲಿನ ಸ್ವಂತ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಮಠಾಧೀಶರು ಸೇರಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ, ಶಾಸಕರು, ಸಚಿವರು, ಸಂಸದರ ಪಕ್ಷಾತೀತವಾಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ತಾಯಿಯ ಕೆನ್ನೆಗೆ ಎಚ್.ಡಿ. ರೇವಣ್ಣ ಅವರು ಮುತ್ತಿಟ್ಟು ಕಣ್ಣೀರು ಸುರಿಸಿದರು. ಪಾರ್ಥಿವ ಶರೀರಕ್ಕೆ ಹೂಗುಚ್ಚ ಇಟ್ಟು ಕಣ್ಣೀರಾದರು.
ಅರ್ಚಕ ಕಣ್ಣನ್ ಶರ್ಮಾ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿದವು. ಚೆನ್ನಮ್ಮ ಅವರ ಕಿರಿಯ ಮಗ ರಮೇಶ್ ಅವರು ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನಡೆಸಿದರು. ಚೆನ್ನಮ್ಮ ಅವರ ಆಸೆಯಂತೆ ದೇವೇಗೌಡರ ಹುಟ್ಟೂರಾದ ಹದರನಹಳ್ಳಿಯ ಸ್ವಂತ ಜಮೀನಿನಲ್ಲಿ ಒಕ್ಕಲಿಗ ಸಾಂಪ್ರದಾಯದಂತೆ, ಹಲವು ಪೂಜಾ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.

ಇದೇ ವೇಳೆ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರಿಗೆ ಹಸ್ತಾಂತರಿಸಿದರು. ಮೂರು ಬಾರಿ ಕುಶಾಲ ತೋಪು ಹಾರಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ 5 ಗಂಟೆ ಹೊತ್ತಿಗೆ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ನಡೆದಿದ್ದು, ಚೆನ್ನಮ್ಮ ಅವರು ಪಂಚಭೂತಗಳಲ್ಲಿ ಲೀನರಾದರು.
ಶನಿವಾರ ಜುಲೈ 18ರಂದು ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಚೆನ್ನಮ್ಮ ಅವರಿಗೆ ಎಚ್.ಡಿ.ದೇವೇಗೌಡ ಅವರು ಕೆನ್ನೆಗೆ ಅರಿಷಿಣ ಹಚ್ಚಿದ ನಂತರ ಅವರ ಕೊನೆಯುಸಿರೆಳೆದರು. ಬಳಿಕ ಅವರ ಅಂತೀಮ ದರ್ಶನಕ್ಕೆ ಬೆಂಗಳೂರಿನಲ್ಲೆ ವ್ಯವಸ್ಥೆ ಮಾಡಲಾಗಿತ್ತು. ಇಡೀ ಆಸ್ಪತ್ರೆಯಲ್ಲಿ ಮೌನ ಆವರಿಸಿತು.
ರಂಗನಾಥನ ಸಾನಿಧ್ಯದಲ್ಲಿ ಮಣ್ಣು ಮಾಡಲು ಮಕ್ಕಳ ನಿರ್ಧರಿಸಿದ್ದರು. ಅದರ ಪ್ರಕಾರ, ನೆನ್ನೆಯಷ್ಟೇ ಕ್ರಯಕ್ಕೆ ಬರೆಸಿಕೊಂಡು ಹೊಸದಾಗಿ ಖರೀದಿಸಿದ ಜಮೀನಿನಲ್ಲಿ ಅಂತಿಮ ವಿಧಿವಿಧಾನಗಳು ನಡೆದಿದ್ದು,
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಸಿಎಂ ಡಿಕೆ ಶಿವಕುಮಾರ್, ರಾಜ್ಯ ಸಚಿವರು, ವಿಪಕ್ಷ ನಾಯಕರು, ರೈತಪರ ಮುಖಂಡು, ಜೆಡಿಎಸ್ ಬೆಂಬಲಿಗರು, ಶ್ರೀ ಆದಿಚುಂಚನಗಿರಿ ಮಠ ಮಠಾಧೀಶರು, ಗ್ರಾಮಸ್ಥರು ಅಂತಿಮ ಗೌರವ ಸಲ್ಲಿಸಿದರು.
ಪಾರ್ಥಿವ ಶರೀರವಿದ್ದ ಪಲ್ಲಕ್ಕಿಯಿಂದ ಪ್ರದಕ್ಷಿಣೆ
ಗಣ್ಯರ ಅಂತಿಮ ದರ್ಶನ ಬಳಿಕ ಚೆನ್ನಮ್ಮನವರ ಪಾರ್ಥಿವ ಶರೀರವನ್ನು ಪುಲ್ಪಾಲಂಕಾರಗಳಿಂದ ಸಿಂಗರಿಸಿದ್ದ ಪಲ್ಲಕ್ಕಿಯಲ್ಲಿ ಇಡಲಾಯಿತು. ಸ್ವಾಮೀಜಿಗಳ ಸಮ್ಮುಖದಲ್ಲಿಆ ಪಲ್ಲಕ್ಕಿಯನ್ನು ಸಮಾಧಿ ಗುಂಡಿಯನ್ನು ಕೆಲವು ಸುತ್ತು ಪ್ರದಕ್ಷಿಣೆ ಮಾಡಲಾಯಿತು. ಪುತ್ರರಾದ ಕೇಂದ್ರ ಸಚಿವರ ಎಚ್.ಡಿಕುಮಾರಸ್ವಾಮಿ, ಎಚ್.ಡಿ.ರೇಣ್ಣ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಅಂತ್ಯಕ್ರಿಯೆಗೂ ಮುನ್ನ ಪಾರ್ಥಿವ ಶರೀರಕ್ಕೆ ಪೂಜೆ ನೆರವೇರಿಸಿದರು. ಬಳಿಕ ಸಂಜೆ 6 ಗಂಟೆ ಆಸುಪಾಸಿಗೆ ಅಂತ್ಯಕ್ರಿಯೆ ನಡೆಯಿತು.
ನಾನು ಪ್ರಧಾನಿ ಆಗಲು ಪತ್ನಿ ಕಾರಣ: ದೇವೇಗೌಡ
ಹೂಗುಚ್ಚವಿಟ್ಟು ಪತ್ನಿ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದ ಎಚ್.ಡಿ.ದೇವೇಗೌಡ ಅವರು ಭಾವುಕರಾದರು. ಪತ್ನಿಯ ನೆನೆದು ಉಮ್ಮಳಿಸಿ ಕಣ್ಣೀರಿಟ್ಟರು. 'ನನ್ನ ರಾಜಕೀಯ ಜೀವನದ ಯಶಸ್ಸಿಗೆ, ನಾನು ಪ್ರಧಾನಿ ಆಗಲು ಪತ್ನಿ ಚೆನ್ನಮ್ಮ ಕಾರಣವೆಂದು ಪತ್ನಿಯ ತ್ಯಾಗ, ಸೇವೆ' ಸ್ಮರಿಸಿದರು. ಒಂದೆಡೆ ರಂಗನಾಥ ಸ್ವಾಮಿ, ಇನ್ನೊಂದೆಡೆ ಕುಲದೇವರು ದೇವೇಶ್ವರನ ಆಶೀರ್ವಾದ ಇತ್ತು. ಇದರೊಂದಿಗೆ ನನ್ನ ಬೆಳವಣಿಗೆಗೆ ಕುಟುಂಬಸ್ಥರೆಲ್ಲರು ಕಾರಣವೆಂದು ಕಂಬನಿ ಮಿಡಿದರು. ಅವಳನ್ನು ದೇವರ ಸಾನಿಧ್ಯದೆಡೆಗೆ ಕಳುಹಿಸಿಕೊಡುತ್ತೇನೆ ಎಂದು ದೇವೇಗೌಡರು ಭಾವುಕರಾದರು.


Click it and Unblock the Notifications
