ತಂಟೆಗೆ ಬಂದ್ರೆ ಸರ್ವನಾಶ: ಅಮೆರಿಕಗೆ ಚೀನಾ ಎಚ್ಚರಿಕೆ!
ಫಿಲಿಪೈನ್ಸ್: ಅಮೆರಿಕ ತನ್ನ ಸುತ್ತಮುತ್ತಲ ದೇಶಗಳಲ್ಲಿ ನಡೆಸುತ್ತಿರುವ ಬೆಳವಣಿಗೆಗಳ ಬಗ್ಗೆ ಚೀನಾ ರೊಚ್ಚಿಗೆದ್ದಿದೆ. ಒಂದು ಕಡೆ ತೈವಾನ್ (Taiwan) ಜೊತೆ ಸ್ನೇಹ ಬೆಳೆಸುವ ನೆಪದಲ್ಲಿ ನನ್ನನ್ನು ಕೆಣಕುತ್ತಿದೆ ಅಮೆರಿಕ ಎಂದು ಎಚ್ಚರಿಸಿದ್ದ ಚೀನಾ, ಇದೀಗ ಫಿಲಿಪೈನ್ಸ್ (Philippines) ಮತ್ತು ಅಮೆರಿಕ (America) ಸೇನೆ ನಡೆಸುತ್ತಿರುವ ಜಂಟಿ ಸಮರಭ್ಯಾಸದ ಬಗ್ಗೆಯೂ ಎಚ್ಚರಿಕೆ ಕೊಟ್ಟಿದೆ.
ಅಮೆರಿಕ ಸೇನೆ ಫಿಲಿಪೈನ್ಸ್ ಜೊತೆ ಸಮರಭ್ಯಾಸಕ್ಕೆ ಸಜ್ಜಾಗಿದೆ. 17,000 ಸೈನಿಕರು ಸಮರಭ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ 12,000 ಸೈನಿಕರು ಅಮೆರಿಕದಿಂದ ಬಂದಿದ್ದಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಚೀನಾ ಅಮೆರಿಕ ಸೇನೆಗೆ ಹಾಗೂ ಅಮೆರಿಕದ ನಾಯಕರಿಗೆ ಖಡಕ್ ಸಂದೇಶ ರವಾನಿಸಿದೆ. ನಮ್ಮ ತಂಟೆಗೆ ಬಂದರೆ ಸರ್ವನಾಶ ಎನ್ನುವ ರೀತಿಯಲ್ಲೇ ಚೀನಾ ಉತ್ತರ ನೀಡಿದೆ. ಈ ಮೂಲಕ ತೈವಾನ್ ಜೊತೆಯಲ್ಲಿ ಫಿಲಿಪೈನ್ಸ್ ಬುಡಕ್ಕೂ ಅಮೆರಿಕ ಬಿಸಿನೀರು ಕಾಯಿಸುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.

ಚೀನಾ ಹೇಳಿದ್ದು ಏನು?
ಅಂದಹಾಗೆ ಅಮೆರಿಕ ತನ್ನ ಸುತ್ತಮುತ್ತಲೂ ಏನೆಲ್ಲಾ ಆಟ ಆಡುತ್ತಿದೆ ಎಂಬುದು ಈಗಾಗಲೇ ಚೀನಾಗೆ ಸರಿಯಾಗಿ ಗೊತ್ತಾಗಿದೆ. ಹೀಗಾಗಿಯೇ ಅಮೆರಿಕ ತನ್ನ ಸುತ್ತಮುತ್ತಲ ಯಾವುದೇ ದೇಶಕ್ಕೆ ಯಾವ ಸಂದರ್ಭದಲ್ಲಿ ಎಂಟ್ರಿ ಕೊಟ್ಟರೂ ಖಡಕ್ ಎಚ್ಚರಿಕೆ ನೀಡುತ್ತಿದೆ ಚೀನಾ. ಅದರಲ್ಲೂ ದಕ್ಷಿಣ ಚೀನಾ ಸಮುದ್ರದ ಆಸುಪಾಸಿನಲ್ಲಿ ಅಮೆರಿಕ ಕಂಡುಬಂದರೆ ಸರಿಯಾಗೇ ಪ್ರತ್ಯುತ್ತರ ನೀಡುತ್ತಿದೆ ಚೀನಾ ಸೇನೆ. ಇದೀಗ ಮತ್ತೆ ಚೀನಾ ಸೇನೆಯನ್ನು ಕೆಣಕುವ ಉದ್ದೇಶದಿಂದಲೇ ಅಮೆರಿಕ ಮತ್ತು ಫಿಲಿಪೈನ್ಸ್ ಒಟ್ಟಾಗಿ ಜಂಟಿ ಸಮರಭ್ಯಾಸ ನಡೆಸುತ್ತಿವೆ ಎನ್ನಲಾಗಿದೆ.
ಇಂಡೋ-ಪೆಸಿಫಿಕ್ ಮೇಲೆ ಕಣ್ಣು!
ಅಮೆರಿಕದ ಜೊತೆಗೆ ಜಂಟಿ ಸಮರಭ್ಯಾಸ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿರುವ ಫಿಲಿಪೈನ್ಸ್, ಇಂಡೋ-ಪೆಸಿಫಿಕ್ ಭಾಗ ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಮುಕ್ತವಾಗಿದೆ ಎಂಬುದನ್ನು ತೋರಿಸಲು ಈ ಜಂಟಿ ಸಮರಭ್ಯಾಸ ಆಯೋಜಿಸಲಾಗಿದೆ ಎಂದು ನಿನ್ನೆ ತಾನೆ ಹೇಳಿಕೆ ನೀಡಿತ್ತು. ಈ ಮೂಲಕ ಚೀನಾ ನೆರೆಯ ರಾಷ್ಟ್ರವೊಂದು, ಡ್ರ್ಯಾಗನ್ ಸೇನೆ ವಿರುದ್ಧ ತೊಡೆತಟ್ಟಿತ್ತು. ಆದರೆ ಈವರೆಗೂ ಚೀನಾ ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ದಿಢೀರ್ ಪ್ರತ್ಯುತ್ತರ ನೀಡಿರುವ ಡ್ರ್ಯಾಗನ್ ಸೇನೆ, ನಮ್ಮ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದಿದೆ.
ಕೈಕೊಟ್ಟ ಫ್ರಾನ್ಸ್ ಅಧ್ಯಕ್ಷ!
ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಕೂಡ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಮತ್ತೊಂದು ಕಡೆ ಫ್ರಾನ್ಸ್ ಅಧ್ಯಕ್ಷ ಚೀನಾ ಪರ ಮಾತನಾಡಿರುವುದು ಅಮೆರಿಕನ್ನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಜೊತೆಗೆ ಚೀನಾ ಮತ್ತೆ ಗರಂ ಆಗಿದೆ, ಅಮೆರಿಕ ಮತ್ತು ಫಿಲಿಪೈನ್ಸ್ ಸ್ನೇಹ ತನಗೆ ಗಂಡಾಂತರ ತರಬಹುದು ಎಂಬ ಭೀತಿ ಚೀನಾಗೆ ಆವರಿಸಿದಂತೆ ಕಾಣುತ್ತಿದೆ.

ಈಗಿನ ಎಲ್ಲಾ ಬೆಳವಣಿಗೆಗಳಿಂದ ಲಾಭ ಪಡೆಯಲು ಒಂದು ಕಡೆ ಅಮೆರಿಕ ಯತ್ನಿಸುತ್ತಿದ್ದರೆ, ಮತ್ತೊಂದು ಕಡೆ ಚೀನಾ ತನ್ನ ಉಳಿವಿಗಾಗಿ ಏನು ಬೇಕೋ ಅದೆಲ್ಲವನ್ನೂ ಸಿದ್ಧಮಾಡಿಕೊಳ್ಳುತ್ತಿದೆ. ಈ ಎಲ್ಲಾ ತಿಕ್ಕಾಟದ ಪರಿಣಾಮ ಮುಂಬರುವ ದಿನಗಳಲ್ಲಿ ದಕ್ಷಿಣ ಚೀನಾ ಸಮುದ್ರದ ಆಸುಪಾಸಿನ ಪ್ರದೇಶ ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಇದೆ. ಈಗಲಾದರೂ ಅಮೆರಿಕ ಸೈಲೆಂಟ್ ಆಗುತ್ತಾ ಅಥವಾ ಚೀನಾ ಮತ್ತಷ್ಟು ವೈಲೆಂಟ್ ಆಗುತ್ತಾ ಕಾದು ನೋಡಬೇಕಿದೆ.












Click it and Unblock the Notifications