3ನೇ ಮಹಾಯುದ್ಧ: ತೈವಾನ್ ಬೆಂಕಿಯೊಂದಿಗೆ ಆಟ ಆಡಬೇಡಿ!
ಬೀಜಿಂಗ್: ತೈವಾನ್ ವಿಚಾರಕ್ಕೆ ಚೀನಾ-ಅಮೆರಿಕ ಸಂಘರ್ಷ ಜೋರಾಗುತ್ತಿದೆ. ಒಂದ್ಕಡೆ ಚೀನಾ ಕೆಣಕಲು ಆಗಾಗ ಅಮೆರಿಕ ತನ್ನ ಹಡಗು ಅಥವಾ ಸೇನೆಯನ್ನ ತೈವಾನ್‌ಗೆ ಕಳುಹಿಸುತ್ತಿದೆ. ಅದೇ ರೀತಿ ಅಮೆರಿಕದ ಈ ಪ್ರಚೋದನೆಗೆ ಚೀನಾ ಕೂಡ ಖಡಕ್ ತಿರುಗೇಟು ನೀಡುತ್ತಾ ಬಂದಿದೆ. ಆದರೆ ಈ ಬಾರಿ ಅಮೆರಿಕಗೆ ಗಂಭೀರ ವಾರ್ನಿಂಗ್ ಕೊಟ್ಟಿದೆ ಚೀನಾ.
ಕಳೆದ ವಾರ ತನ್ನ ಯುದ್ಧ ನೌಕೆಯನ್ನು ತೈವಾನ್ (Taiwan) ಜಲಸಂಧಿ ಮೂಲಕ ಸಾಗಿಸಿತ್ತು ಅಮೆರಿಕ (America). ಇದಕ್ಕೂ ಕೆಲ ದಿನಗಳ ಮೊದಲು ಚೀನಾ (China) ಸೇನೆ ತೈವಾನ್ ವಿರುದ್ಧ ರೊಚ್ಚಿಗೆದ್ದು ಸಮರಾಭ್ಯಾಸ ನಡೆಸಿ ಖಡಕ್ ವಾರ್ನಿಂಗ್ ಕೊಟ್ಟಿತ್ತು. ಈ ಘಟನೆ ನಡೆದ ಕೆಲ ದಿನದಲ್ಲಿ ಅಮೆರಿಕ ಮತ್ತೆ ಬೆಂಕಿ ಹಚ್ಚುವ ಕೆಲಸ ಮಾಡಿತ್ತು ಎಂಬ ಆರೋಪ ಬಂದಿತ್ತು. ಇದೀಗ ಚೀನಾ, ತೈವಾನ್‌ನಲ್ಲಿ ಬೆಂಕಿಯೊಂದಿಗೆ ಆಟವಾಡುವವರು ಅಂತಿಮವಾಗಿ ತಾವೇ ಸುಟ್ಟು ಹೋಗುತ್ತಾರೆ ಎಂದಿದೆ.

ಅಮೆರಿಕದ ವರ್ತನೆಗೆ ಆಕ್ರೋಶ
ತೈವಾನ್ ಜಲಸಂಧಿ ಮೂಲಕ ಯುದ್ಧ ನೌಕೆ ಸಾಗಿಸಿದ್ದ ಅಮೆರಿಕ ವರ್ತನೆಗೆ ವಿರೋಧ ವ್ಯಕ್ತವಾಗಿದೆ. ಅಮೆರಿಕದ ವರ್ತನೆಗೆ ಡ್ರ್ಯಾಗನ್ ಚೀನಾ ಎಚ್ಚರಿಕೆ ಕೊಟ್ಟಿದೆ. ತೈವಾನ್‌ನ ಎರಡೂ ಬದಿ ನಮ್ಮದೆ, ತೈವಾನ್ ಕೂಡ ನಮಗೇ ಸೇರಿದ್ದು ಎನ್ನುವ ಧಾಟಿಯಲ್ಲಿ ವಾರ್ನಿಂಗ್ ಕೊಟ್ಟಿದೆ ಚೀನಾ. ಇನ್ನು ಚೀನಾದ ವಿದೇಶಾಂಗ ಸಚಿವರೇ ಈ ಕುರಿತು ನೇರವಾಗಿ ಅಮೆರಿಕಗೆ ಎಚ್ಚರಿಕೆ ನೀಡಿದ್ದು, ನಮ್ಮ ತಂಟೆಗೆ ಬರಬೇಡಿ ಎಂಬ ಮೆಸೇಜ್ ಕೊಟ್ಟಾಗಿದೆ.
ತೈವಾನ್ ವಿಚಾರದಲ್ಲಿ ಕಿತಾಪತಿ?
ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಪರಿಸ್ಥಿತಿ ನಿರ್ಮಿಸಿದ್ದ ಅಮೆರಿಕ ಮತ್ತೆ ಶಾಂತಿ ಕದಡಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕ ಜೊತೆ ಸ್ನೇಹ ಬೆಸೆದ ಮರುಕ್ಷಣವೇ ಯುದ್ಧದ ಭೀತಿ ಆವರಿಸಿತ್ತು. ಆದರೆ ಕೆಲ ದಿನಗಳಿಂದ ಪರಿಸ್ಥಿತಿ ಸರಿ ಹೋಗುತ್ತಿತ್ತು. ಈ ಮಧ್ಯೆ ಅಮೆರಿಕ ತೈವಾನ್ ಬಳಿ ಸೇನಾ ಹಡಗನ್ನು ತಂದು ಶಾಂತಿ ಕದಡಿದೆ ಎಂಬ ಮಾತು ಕೇಳಿಬಂದಿತ್ತು. ಈ ಘಟನೆ ನಡೆದ ಕೆಲವೇ ದಿನದಲ್ಲಿ ಚೀನಾ ಖಡಕ್ ಎಚ್ಚರಿಕೆ ರವಾನಿಸಿದೆ.
3ನೇ ಮಹಾಯುದ್ಧಕ್ಕೆ ಇಲ್ಲೇ ಮುನ್ನುಡಿ?
ಚೀನಾ-ತೈವಾನ್ ನಡುವೆ ಆಗಾಗ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಗಂಭೀರವಾಗಿದೆ. ಅದರಲ್ಲೂ ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕಕ್ಕೆ ಭೇಟಿ ನೀಡಿದ ತಕ್ಷಣ ತನ್ನ ಶತ್ರು ರಾಷ್ಟ್ರಕ್ಕೆ ಚೀನಾ ಆಘಾತ ನೀಡಿತ್ತು. ಈಗ ಯುದ್ಧಕ್ಕೆ ಮುಂದಾಗಿರುವ ರೀತಿ ಚೀನಾ ಮಾತನಾಡುತ್ತಿರುವುದು, ಅಮೆರಿಕ ಪದೇಪದೆ ತೈವಾನ್ ವಿಚಾರ ಕೆಣಕುವುದು ನೋಡಿದರೆ 3ನೇ ಮಹಾಯುದ್ಧಕ್ಕೆ ಇಲ್ಲೇ ಮುನ್ನುಡಿ ಎಂದೇ ಬಿಂಬಿಸಲಾಗುತ್ತಿದೆ.

ರಷ್ಯಾ ರೀತಿಯಲ್ಲೇ ಚೀನಾ ಅಟ್ಯಾಕ್?
ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಥೇಟ್ ರಷ್ಯಾ ತನ್ನ ಶತ್ರು ಉಕ್ರೇನ್ ಮೇಲೆ ಎರಗಿದಂತೆ ಚೀನಾ ಕೂಡ ತೈವಾನ್ ವಿರುದ್ಧ ಯುದ್ಧ ಸಾರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಯುದ್ಧ ಆರಂಭವಾದರೆ ಪರಿಸ್ಥಿತಿ ಹೇಗಿರಲಿದೆ ಎಂಬುದರ ಸ್ಯಾಂಪಲ್ ತೋರಿಸಿದೆ ಡ್ರ್ಯಾಗನ್ ಸೇನೆ.
ಒಟ್ನಲ್ಲಿ ಅಮೆರಿಕ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ನಡೆಸುತ್ತಿರುವ ಬೆಳವಣಿಗೆ ಬಗ್ಗೆ ಚೀನಾ ರೊಚ್ಚಿಗೆದ್ದು ಎಚ್ಚರಿಕೆ ನೀಡಿದೆ. ಆದರೆ ಚೀನಾದ ಈ ಎಚ್ಚರಿಕೆಗೆ ಅಮೆರಿಕ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ದಕ್ಷಿಣ ಕೊರಿಯಾ ಮತ್ತು ಜಪಾನ್ ಕೂಡ ಚೀನಾ ಜೊತೆ ಕಿರಿಕಿರಿ ಶುರು ಮಾಡಿವೆ. ಮತ್ತೊಂದು ಕಡೆ ಉತ್ತರ ಕೊರಿಯಾ ಚೀನಾ ಬೆಂಬಲಕ್ಕೆ ನಿಂತಿದ್ದು, ದಕ್ಷಿಣ ಚೀನಾ ಪ್ರದೇಶದ ದೇಶಗಳ ನಡುವೆ ಪರಿಸ್ಥಿತಿ ಸೂಕ್ಷ್ಮವಾಗಿದೆ. ಯಾವಾಗ ಬೇಕಾದರೂ ಶಾಂತಿ ಕದಡಿ ಹೋಗುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications