ಶತ್ರು ಪಡೆಗಳ ವಿರುದ್ಧ ಒಂದಾದ ಮಿತ್ರರು: ಅಮೆರಿಕ ವಿರುದ್ಧ ಚೀನಾ-ರಷ್ಯಾ ಶಾಂತಿ ಅಸ್ತ್ರ!
ಉಕ್ರೇನ್ ವಿಚಾರವಾಗಿ ಒಂದು ಕಡೆ ರಷ್ಯಾ ವಿರುದ್ಧ ಅಮೆರಿಕ ಮತ್ತದರ ಮಿತ್ರ ಪಡೆಗಳು ಗುಡುಗುತ್ತಿದ್ದರೆ, ಇನ್ನೊಂದು ಕಡೆ ರಷ್ಯಾ ಪಾಲಿನ ಕ್ಲೋಸ್ ಫ್ರೆಂಡ್ ಚೀನಾ ತನ್ನ ಸ್ನೇಹಿತನ ನೆರವಿಗೆ ಧಾವಿಸಿದೆ.
ಉಕ್ರೇನ್ ಯುದ್ಧದ ವಿಚಾರವಾಗಿ ಒಂದು ಕಡೆ ರಷ್ಯಾ ವಿರುದ್ಧ ಅಮೆರಿಕ ಮತ್ತದರ ಮಿತ್ರ ಪಡೆಗಳು ಗುಡುಗುತ್ತಿದ್ದರೆ, ಇನ್ನೊಂದು ಕಡೆ ರಷ್ಯಾ ಪಾಲಿನ ಕ್ಲೋಸ್ ಫ್ರೆಂಡ್ ಚೀನಾ ತನ್ನ ಸ್ನೇಹಿತನ ನೆರವಿಗೆ ಧಾವಿಸಿದೆ. ರಷ್ಯಾ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಆಡಿರುವ ಮಾತುಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಸಿಟ್ಟಿನ ಜ್ವಾಲೆಗೆ ತಣ್ಣೀರು ಎರಚಿದೆ.
ಉಕ್ರೇನ್ ಯುದ್ಧದ ವಿಚಾರವನ್ನೇ ಬಂಡವಾಳ ಮಾಡಿಕೊಂಡು ರಷ್ಯಾ ಹಣಿಯಲು ಸಿದ್ಧತೆ ನಡೆಸಿದ್ದ ಅಮೆರಿಕ ವಿರುದ್ಧ ಚೀನಾ ಶಾಂತಿಯ ಅಸ್ತ್ರವನ್ನು ಪ್ರಯೋಗಿಸಿದೆ. ರಷ್ಯಾ- ಉಕ್ರೇನ್ ಯುದ್ಧದ ತೀವ್ರತೆ ತಗ್ಗಿಸಲು ಹಾಗು ಉಕ್ರೇನ್ ಜೊತೆ ಕದನ ವಿರಾಮ ಘೋಷಣೆ ನಿಟ್ಟಿನಲ್ಲಿ ಚೀನಾ ನೀಡಿರುವ 12 ಅಂಶಗಳ ಪ್ರಸ್ತಾವದ ಕುರಿತು ಜಿನ್‌ಪಿಂಗ್ ಮತ್ತು ಪುಟಿನ್ ಗಂಭೀರ ಚರ್ಚೆ ನಡೆಸಿದ್ದಾರೆ.

ರಷ್ಯಾ-ಉಕ್ರೇನ್ ಗಡಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಸಭೆ ಮಹತ್ವ ಪಡೆದಿದೆ. ಹೀಗೆ ಕಷ್ಟ ಕಾಲದಲ್ಲಿ ಮತ್ತೊಮ್ಮೆ ತನ್ನ ಆತ್ಮೀಯ ಸ್ನೇಹಿತನಿಗೆ ಹೆಗಲು ಕೊಟ್ಟಿದೆ ಚೀನಾ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಆರಂಭವಾಗಿ ಬರೋಬ್ಬರಿ 13 ತಿಂಗಳು ಕಳೆದಿದೆ. ಹೀಗಾಗಿ ತನ್ನ ಶತ್ರು ರಷ್ಯಾ ವಿರುದ್ಧ ಪದೇ ಪದೆ ಅಮೆರಿಕ ಇದೇ ಅಸ್ತ್ರ ಪ್ರಯೋಗಿಸುತ್ತಿದೆ.
ಆದರೆ ಕಿಲಾಡಿ ರಷ್ಯಾ ಮಾತ್ರ ಅಮೆರಿಕದ ರಣತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿದೆ. ಅದರ ಮೊದಲ ಭಾಗವಾಗಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ನಡುವೆ ಯುದ್ಧ ನಿಲ್ಲಿಸುವ ಬಗ್ಗೆ ಮಹತ್ವದ ಶಾಂತಿ ಮಾತುಕತೆ ನಡೆದಿದೆ ಎಂಬುದು ವಿಶ್ಲೇಷಕರ ಮಾತಾಗಿದೆ.
ಚೀನಾಗೆ ಪುಟಿನ್ ಧನ್ಯವಾದ
ಕಷ್ಟದ ಸಮಯದಲ್ಲಿ ಇಡೀ ಜಗತ್ತೇ ರಷ್ಯಾ ವಿರುದ್ಧ ನಿಲ್ಲಲು ಸಿದ್ಧವಾಗಿದ್ದರೆ ಚೀನಾ ಮಾತ್ರ ರಷ್ಯಾ ಪರ ಬ್ಯಾಟ್ ಬೀಸಿದೆ. ಚೀನಾದ ಈ ಬೆಂಬಲಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಚೀನಾದ ಚಿಂತನೆಗಳನ್ನು ಜಾಗರೂಕತೆಯಿಂದ ಅಭ್ಯಸಿಸಿರುವುದಾಗಿ ಮತ್ತು ಅವುಗಳನ್ನು ಗೌರವದಿಂದ ನೋಡಿರುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿರುವುದು ಮಹತ್ವ ಪಡೆದುಕೊಂಡಿದೆ. ಎರಡು ರಾಷ್ಟ್ರಗಳ ಮುಖ್ಯಸ್ಥರ ಭೇಟಿ ಅಮೆರಿಕ ಮತ್ತದರ ಮಿತ್ರ ಪಡೆಗಳಿಗೆ ಇರಿಸು ಮುರಿಸು ಉಂಟುಮಾಡಿದೆ.
ಎತ್ತು ಏರಿಗೆ, ಕೋಣ ನೀರಿಗೆ!
ಇತ್ತ ಚೀನಾ ಅಧ್ಯಕ್ಷ ಜಿನ್‌ಪಿಂಗ್ ರಷ್ಯಾ ಪ್ರವಾಸದಲ್ಲಿದ್ದರೆ, ಇದೇ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಪೆಮಿಯೊ ಕಿಶಿದಾ ಉಕ್ರೇನ್‌ಗೆ ಧಿಡೀರ್ ಭೇಟಿ ನೀಡಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ದಾಳಿ ಕುರಿತು ಚರ್ಚೆ ನಡೆಸಲು ಜಪಾನ್ ಪ್ರಧಾನಿ ಪೆಮಿಯೊ ಕಿಶಿದಾ ಈ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈ ಬೆಳವಣಿಗೆಯಿಂದ ಚೀನಾ ರೊಚ್ಚಿಗೆದ್ದು ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಹಾಳುಮಾಡುವ ಬದಲು ಅದನ್ನ ಹತೋಟಿಗೆ ತರುವ ಕೆಲಸವನ್ನು ಜಪಾನ್ ಮಾಡಬೇಕು ಎಂದು ಆಗ್ರಹಿಸಿದೆ.

3ನೇ ಮಹಾಯುದ್ಧ ಶುರು?
ಇದು ಜಗತ್ತನ್ನು ಕಾಡುತ್ತಿರುವ ಟ್ರಿಲಿಯನ್ ಡಾಲರ್ ಪ್ರಶ್ನೆ. ಹಲವು ದಶಕಗಳಿಂದ ಪದೇ ಪದೆ ಈ ಪ್ರಶ್ನೆ ಜನರನ್ನು ಕಾಡುತ್ತಲೇ ಇರುತ್ತದೆ. ಆದರೆ ಉತ್ತರ ಮಾತ್ರ ಸ್ಪಷ್ಟವಾಗುತ್ತಿಲ್ಲ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಇಂತಹ ಆತಂಕವನ್ನು ಸೃಷ್ಟಿಸಿದ್ದರೂ 3ನೇ ಮಹಾಯುದ್ಧ ಸುಲಭಕ್ಕೆ ಶುರುವಾಗುವ ಸಾಧ್ಯತೆ ಇಲ್ಲ.
ಇದೇ ಸಂದರ್ಭದಲ್ಲಿ ಚೀನಾ ಜೊತೆಗೆ ಸೇರಿ ಉಕ್ರೇನ್ ನೊಂದಿಗೆ ಶಾಂತಿ ಮಾತುಕತೆ ನಡೆಸಲು ರಷ್ಯಾ ಪ್ರಯತ್ನಿಸುತ್ತಿರುವುದು 3ನೇ ಮಹಾಯುದ್ಧದ ಆತಂಕವನ್ನು ದೂರ ಮಾಡುತ್ತಿದೆ. (ಚಿತ್ರಕೃಪೆ: ಪಿಟಿಐ)












Click it and Unblock the Notifications