Mobile Addiction: ಮಕ್ಕಳು ರಾತ್ರಿ ಮೊಬೈಲ್ ಬಳಕೆ ಮಾಡುವಂತಿಲ್ಲ!
ತಂತ್ರಜ್ಞಾನ ಬೆಳೆದಂತೆ ಎಷ್ಟೆಲ್ಲಾ ಪ್ರಯೋಜನ ಇದೆಯೋ ಅಷ್ಟೆ ಸಮಸ್ಯೆ ಎದುರಾಗುತ್ತಿದೆ. ಅದ್ರಲ್ಲೂ ಈಗಿನ ಕಾಲದ ಮಕ್ಕಳ ಮೇಲೆ ತಂತ್ರಜ್ಞಾನ ಸಾಕಷ್ಟು ದುಷ್ಪರಿಣಾಮ ಬೀರಿದೆ. ಮಕ್ಕಳಿಗೆ ಮೊಬೈಲ್ ಇಲ್ಲ ಅಂದರೆ ಜೀವನವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಮುಖವಾಗಿ ರಾತ್ರಿ ವೇಳೆ ಮೊಬೈಲ್ ಬಳಕೆ ಪರಿಣಾಮ ಮಕ್ಕಳಿಗೆ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಹೌದು, ರಾತ್ರಿ ವೇಳೆ ಮಕ್ಕಳು ಮೊಬೈಲ್ ಬಳಕೆ ಮಾಡುವುದು ಕೇವಲ ಭಾರತದ ಸಮಸ್ಯೆ ಮಾತ್ರವಲ್ಲ. ಇದು ಜಾಗತಿಕ ಸಮಸ್ಯೆಯಾಗಿ ಬೆಳೆಯುತ್ತಿದೆ. ಸರಿಯಾದ ಸಮಯಕ್ಕೆ ನಿದ್ದೆ ಮಾಡದೆ, ಸರಿಯಾಗಿ ಊಟ ಮಾಡದೆ ಮೊಬೈಲ್ ಧ್ಯಾನದಲ್ಲಿ ಮಕ್ಕಳು ಮುಳುಗಿರುತ್ತಾರೆ. ಅದರಲ್ಲೂ ಚೀನಾದಲ್ಲಿ ಮಕ್ಕಳು ಮತ್ತು ಹದಿಹರೆಯದವರಿಗೆ ರಾತ್ರಿ ವೇಳೆ ಇಂಟರ್‌ನೆಟ್ ಬಳಕೆ ಒಂದು ರೀತಿ ಚಟವಾಗಿ ಹೋಗಿದೆ. ಇದನ್ನ ಅರಿತ ಅಲ್ಲಿನ ಸರ್ಕಾರ, ಇಂತಹ ಬೆಳವಣಿಗೆಗೆ ಕೂಡಲೇ ಕಡಿವಾಣ ಹಾಕಲು ಮುಂದಾಗಿದೆ. ಹಾಗಾದರೆ ಏನದು ಆ ಮೊಬೈಲ್ ರೂಲ್ಸ್? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಕ್ಕಳ ಮೊಬೈಲ್ ಬಳಕೆಗೆ ನಿರ್ಬಂಧ!
ಜಗತ್ತಿನಲ್ಲಿ ಸಂಪರ್ಕ ಸಾಧನಗಳ ಪೈಕಿ ಮೊಬೈಲ್ ತಂದಷ್ಟು ಪರಿಣಾಮಕಾರಿ ಬದಲಾವಣೆ ಇನ್ಯಾವ ವಸ್ತುವೂ ತರಲಿಲ್ಲ. ಆದರೆ ಮೊದಲಿಗೆ ಚೆನ್ನಾಗಿಯೇ ಇದ್ದ ಮೊಬೈಲ್ ಬಳಕೆಯ ಹವ್ಯಾಸ ಈಗೀಗ ಚಟವಾಗಿ ಮನುಷ್ಯರ ಜೀವನ ಹಾಗೂ ಆರೋಗ್ಯ ಹಾಳು ಮಾಡುತ್ತಿದೆ. ಅದರಲ್ಲೂ ಚೀನಾ ದೇಶದಲ್ಲಿ ಈ ಸಮಸ್ಯೆ ತುಸು ಹೆಚ್ಚಾಗಿಯೇ ಇದ್ದು, ಮೊಬೈಲ್ ಬಳಕೆ ಚಟದಿಂದ ಮಕ್ಕಳು ಮತ್ತು ಹದಿಹರೆಯದವರನ್ನ ಹೊರತರುವ ಉದ್ದೇಶದಿಂದ ಹೊಸ ರೂಲ್ಸ್ ಪ್ರಕಟಿಸಿದೆ ಚೀನಾ. ಹೊಸ ನಿಯಮದ ಪ್ರಕಾರ ಮಕ್ಕಳು ಮತ್ತು ಹದಿಹರೆಯದವರು ರಾತ್ರಿ ವೇಳೆ ಸ್ಮಾರ್ಟ್‌ಫೋನ್ ಬಳಕೆ ಮಾಡುವುದನ್ನ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಹಾಗಾದರೆ ಈ ರೂಲ್ಸ್ ಹೇಗೆ ಜಾರಿಗೆ ಬರುತ್ತೆ?

ಎಷ್ಟು ಗಂಟೆ ಮೊಬೈಲ್ ಬಳಸಬಹುದು?
ಮಕ್ಕಳ ಮೊಬೈಲ್ ಬಳಕೆ ಮೇಲೆ ನಿರ್ಬಂಧ ಹೇರುವ ನಿರ್ಧಾರಕ್ಕೆ ಚೀನಾ ಅಳೆದು-ತೂಗಿ ರೂಲ್ಸ್ ರೂಪಿಸಿದೆ. ಸಾರ್ವಜನಿಕರ ಜೊತೆಗೆ ಸಮಾಲೋಚನೆ ನಡೆಸಿದ ನಂತರ ಸೆಪ್ಟೆಂಬರ್ 2ರಿಂದ ಹೊಸ ನಿಯಮ ಜಾರಿಗೆ ಬರಲಿವೆ. ಹೊಸ ನಿರ್ಬಂಧಗಳ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಮೊಬೈಲ್ ಸಾಧನದ ಜೊತೆ ಇಂಟರ್ನೆಟ್ ಸಂಪರ್ಕ ಪಡೆಯುವುದನ್ನ ಕಟ್ ಮಾಡಲಾಗುತ್ತದೆ. ಹಾಗೇ ವಯಸ್ಸಿನ ಆಧಾರದಲ್ಲಿ ದಿನದಲ್ಲಿ ಎಷ್ಟು ಗಂಟೆಗಳ ಕಾಲ ಮಕ್ಕಳು ಮೊಬೈಲ್ ಬಳಕೆ ಮಾಡಬೇಕು? ಅನ್ನೋದನ್ನ ನಿರ್ಧರಿಸಲಾಗಿದೆ.

40 ನಿಮಿಷ ಮೊಬೈಲ್ ಬಳಸಬಹುದು!
ಚೀನಾದಲ್ಲಿ ಹೊಸ ನಿಯಮ ಜಾರಿಗೆ ಬಂದರೆ, 8 ವರ್ಷ ಒಳಗಿನ ಮಕ್ಕಳು ದಿನಕ್ಕೆ ಗರಿಷ್ಠ 40 ನಿಮಿಷ ಮತ್ತು 16ರಿಂದ 17 ವರ್ಷ ವಯಸ್ಸಿನವರಿಗೆ ದಿನಕ್ಕೆ ಗರಿಷ್ಠ 2 ಗಂಟೆ ಮೊಬೈಲ್ ಬಳಸಬಹುದು. ಚೀನಾದ ಸಿಎಸಿ ಅಂದರೆ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಷನ್ ಹೊಸ ನಿಯಮ ಪ್ರಕಟಿಸಿದ್ದು, ಜಾರಿಗೆ ತರಲು ಮುಂದಾಗಿದೆ. ಈ ನಿಯಮಗಳ ಮೂಲಕ ಭವಿಷ್ಯದಲ್ಲಿ ಎದುರಾಗುವ ದೊಡ್ಡ ವಿಪತ್ತು ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಚೀನಾದಲ್ಲಿ ಪ್ರತಿ ದಿನ ಅಸಂಖ್ಯಾತ ಮಕ್ಕಳು ಮೊಬೈಲ್ ಚಟಕ್ಕೆ ಬಲಿಯಾಗುತ್ತಿದ್ದು, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಒಟ್ನಲ್ಲಿ ಚೀನಾದಲ್ಲಿ ಇದೀಗ ಜಾರಿಗೆ ತರಲು ಹೊರಟಿರುವ ಮೊಬೈಲ್ ರೂಲ್ಸ್ ಕುರಿತಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯ ನಿರ್ಧಾರ ಎಂಬ ಮಾತು ಕೂಡ ಕೇಳಿಬರುತ್ತಿದೆ. ಈಗ ಜಾರಿಗೆ ತರಲು ಹೊರಟ ಈ ಹೊಸ ನಿಯಮಗಳು ಇನ್ನೂ ಅಂತಿಮವಾಗಿಲ್ಲ. ಪೋಷಕರ ಜೊತೆ ಈ ಬಗ್ಗೆ ಚರ್ಚೆ ನಡೆಸಿ ಬಳಿಕ ಅಗತ್ಯವಿರುವ ಬದಲಾವಣೆ ತರಲು ಚೀನಾದ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಷನ್ ನಿರ್ಧರಿಸಿದೆ. ಹೀಗಾಗಿ ಹೊಸ ನಿಯಮದಲ್ಲಿ ಕೆಲವು ಬದಲಾವಣೆ ತಂದು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 2ರಿಂದ ಮೊಬೈಲ್ ರೂಲ್ಸ್ ಜಾರಿಗೆ ತರುವ ಸಾಧ್ಯತೆ ಇದೆ.












Click it and Unblock the Notifications