China Virus: ಚೀನಾದಲ್ಲಿ ಹೊಸ ವೈರಸ್; ಕಟ್ಟೆಚ್ಚರ ವಹಿಸಿದ ಆರೋಗ್ಯಾಧಿಕಾರಿಗಳು
ಕೋವಿಡ್-19 ಹೊಡೆತದಿಂದ ಇನ್ನೂ ಜಗತ್ತು ಸುಧಾರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಚೀನಾದಿಂದ ಮತ್ತೊಂದು ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಚೀನಾದಲ್ಲಿ ಕೋವಿಡ್ ಮಾದರಿಯಂತೆ ಉಸಿರಾಟ ತೊಂದರೆ ಲಕ್ಷಣ ಇರುವ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ವ್ಯಾಪಕವಾಗಿ ಹರಡುತ್ತಿದ್ದು ಆತಂಕ ಸೃಷ್ಟಿಸಿದೆ. ಚೀನಾದಲ್ಲಿ ಈಗಾಗಲೇ ವೈದ್ಯಾಧಿಕಾರಿಗಳು ಅಲರ್ಟ್ ಆಗಿದ್ದು ಮುಂಜಾಗ್ರತೆ ವಹಿಸುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಬುಲೆಟಿನ್ ಪ್ರಕಾರ ವೈರಸ್ ಸೋಂಕು ಪ್ರಕರಣಗಳ ಹೆಚ್ಚಳವನ್ನು ದೃಢಪಡಿಸಿದೆ. 2024ರ ಅಕ್ಟೋಬರ್ ತಿಂಗಳಿನಿಂದಲೂ ದೇಶದಲ್ಲಿ ಉಸಿರಾಟ ಸಮಸ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುವ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

ಚೀನಾದ ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಡಳಿತವು (NCDPA) ಹೊಸ ಸೋಂಕಿನ ಮೂಲವ್ನು ಪತ್ತೆಹಚ್ಚಲು ಮತ್ತು ಸೋಂಕಿಗೆ ಚಿಕಿತ್ಸೆ ವಿಧಾನವನ್ನು ನಿರ್ಧರಿಸಲು ಈಗಾಗಲೇ ಅಧ್ಯಯನ ಆರಂಭಿಸಿದೆ. ಚಳಿಗಾಲದಲ್ಲಿ ಉಸಿರಾಟ ಸಮಸ್ಯೆ ಹೆಚ್ಚಾಗುತ್ತಿದ್ದು ಸೋಂಕಿನ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಚೀನಾದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಪರಿಸ್ಥಿತಿ ಈಗಾಗಲೇ ಗಂಭೀರವಾಗಿದೆ ಎಂದು ವರದಿಯಾಗಿದೆ. ಡಿಸೆಂಬರ್ 16 ರಿಂದ 22ರ ನಡುವೆ ಉಸಿರಾಟ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಎಂದು ಎನ್‌ಸಿಡಿಪಿಎ ಸ್ಪಷ್ಟಪಡಿಸಿದೆ.
ಮಕ್ಕಳು ಮತ್ತು ಹಿರಿಯರಿಗೆ ತೊಂದರೆ ಹೆಚ್ಚು
ಈಗ ಹರಡುತ್ತಿರುವ ನ್ಯುಮೋನಿಯಾ ಚಿಕ್ಕ ಮಕ್ಕಳು ಮತತು ವೃದ್ಧರು ಸೇರಿದಂತೆ ದುರ್ಬಲರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅದರಲ್ಲೂ ಕಡಿಮೆ ಸೋಂಕು ಪ್ರತಿರೋಧ ಶಕ್ತಿ ಹೊಂದಿರುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ತೀವ್ರ ರೋಗಲಕ್ಷಣ ಕಂಡು ಬಂದಿದೆ. ಅಸ್ತಮಾ ಅಥವಾ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD)ಯಿಂದ ಬಳಲುತ್ತಿರುವವರಿಗೆ ಇದು ಮಾರಕವಾಗಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಕಾಯಿಲೆ ಲಕ್ಷಣಗಳು
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ವೈರಸ್ ಸೋಂಕಿತರಲ್ಲಿ ಜ್ವರ, ಕೆಮ್ಮು, ಸ್ರವಿಸುವ ಮೂಗು ಮತ್ತು ಉಬ್ಬಸ ಸೇರಿದಂತೆ ಉಸಿರಾಟ ತೊಂದರೆ ಕಾಣಿಸಿಕೊಳ್ಳುತ್ತದೆ. ವೈರಸ್ ತೀವ್ರವಾಗಿ ಬಾಧಿಸುವವರಲ್ಲಿ ಇ ವೈರಸ್ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು ಎಂದು ವರದಿ ತಿಳಿಸಿದೆ. ಉಸಿರಾಟ ಮತ್ತು ನಿಕಟ ದೈಹಿಕ ಸಂಪರ್ಕದಿಂದ ವೈರಸ್ ಹರಡುತ್ತದೆ ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ ಇದು ಕೋವಿಡ್‌ನಂತೆಯೇ ಹರಡುವ ಮತ್ತು ರೋಗ ಲಕ್ಷಣಗಳನ್ನು ಹೊಂದಿದೆ.
ಏನಿದು ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV)?
ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಸಾಮಾನ್ಯವಾಗಿ ಉಸಿರಾಟ ತೊಂದರೆ ಉಂಟು ಮಾಡುವ ಲಕ್ಷಣ ಹೊಂದಿದೆ. ಸಾಮಾನ್ಯ ಜ್ವರ ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಹೆಚ್ಚು ಹರಡುತ್ತದೆ. ಶ್ವಾಸಕೋಶಗಳ ಸೋಂಕಿಗೆ ಈ ವೈರಸ್ ಕಾರಣವಾಗಬಹುದು.
ಕೋವಿಡ್ - 19 ರೀತಿ ಎಚ್‌ಎಂಪಿವಿಗೆ ಯಾವುದೇ ಲಸಿಕೆಯಾಗಲಿ ಚಿಕಿತ್ಸೆಯಾಗಲಿ ಇಲ್ಲ. ಹೆಚ್ಚು ರೋಗಲಕ್ಷಣ ಇರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಕಡಿಮೆ ರೋಗ ಲಕ್ಷಣ ಇದ್ದರೆ ಮನೆಯಲ್ಲಿ ವಿಶ್ರಾಂತಿ ಪಡೆದರೂ ಸಾಕಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications