ಚೀನಾ ಗರಂ: ದೊಡ್ಡಣ್ಣ ಅಮೆರಿಕದ ಸ್ನೇಹಿತನಿಗೆ ಬಿಗ್ ಶಾಕ್!
ಬೀಜಿಂಗ್: ಚೀನಾ ಮತ್ತು ತೈವಾನ್ ನಡುವೆ ಕಿತ್ತಾಟ ನಿಲ್ಲುತ್ತಿಲ್ಲ, ಬದಲಾಗಿ ಈ ತಿಕ್ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಲೂ ಅಷ್ಟೇ ತೈವಾನ್ ಮಾಡುತ್ತಿರುವ ಹಠಕ್ಕೆ ವಿರುದ್ಧವಾಗಿ ಚೀನಾ ಕೂಡ ಸೇಡು ತೀರಿಸಿಕೊಳ್ಳಲು ಸನ್ನದ್ಧವಾಗಿದೆ. ಹಾಗಾದ್ರೆ ಈ ಇಬ್ಬರ ಮಧ್ಯೆ ಹೊಸ ಕಿರಿಕ್ ಏನು? ಬನ್ನಿ ತಿಳಿಯೋಣ.
ಅಂದಹಾಗೆ ಚೀನಾ ದಿಗ್ಬಂಧನ ಉಲ್ಲಂಘಿಸಿ ತೈವಾನ್ ವಾರ್ಷಿಕ ಸಮರಾಭ್ಯಾಸ ನಡೆಸಲು ಕೆಲ ಸಿದ್ಧತೆಗಳನ್ನ ಆರಂಭಿಸಿದೆ. ಆದರೆ ಇದೇ ಸಂದರ್ಭದಲ್ಲಿ ಶಾಕ್ ನೀಡಿರುವ ಚೀನಾ, ತನ್ನ ಶತ್ರು ರಾಷ್ಟ್ರಕ್ಕೆ ಮರ್ಮಾಘಾತ ನೀಡಲು ಮುಂದಾಗಿದೆ. ಈ ವಾರವೇ ತೈವಾನ್ ಸುತ್ತಮುತ್ತ ಜಂಟಿ ಪಡೆಗಳ ತಾಲೀಮು ನಡೆಸಲು ಚೀನಾ ನಿರ್ಧರಿಸಿದೆ. ಹೀಗೆ ಮೊದಲೇ ಹೊತ್ತಿದ್ದ ಬೆಂಕಿ ಮತ್ತೊಮ್ಮೆ ಜ್ವಾಲೆಯಾಗಿ ಧಗಧಗಿಸುವ ಮುನ್ಸೂಚನೆ ಸಿಗುತ್ತಿದೆ. ತೈವಾನ್ ಮೇಲೆ ಒತ್ತಡ ಹೇರಲು ಕಳೆದ ಮೂರು ವರ್ಷಗಳಿಂದ ದ್ವೀಪರಾಷ್ಟ್ರದ ಸುತ್ತಮತ್ತ ಚೀನಾ ಸೇನಾ ತಾಲೀಮು ನಡೆಸುತ್ತಾ ಬಂದಿದೆ. ಆದರೆ ಈ ಬಾರಿ ತೈವಾನ್ ತನ್ನ ಮಾತು ಕೇಳುತ್ತಿಲ್ಲ ಅಂತಾ ಶಾಕ್ ನೀಡಲು ಮುಂದಾಗಿದೆ ಚೀನಾ.

ದಕ್ಷಿಣ ಚೀನಾ ಸಮುದ್ರದಲ್ಲಿ ಭಯ!
ಈಗಾಗಲೇ ಚೀನಾ ಯುದ್ಧವಿಮಾನಗಳು, ಬಾಂಬರ್‌ಗಳು, ಡ್ರೋನ್‌ಗಳು ಸೇರಿ ಶಸ್ತ್ರಭ್ಯಾಸಕ್ಕೆ ಬೇಕಿರುವ ವಸ್ತುಗಳನ್ನ ದಕ್ಷಿಣ ತೈವಾನ್ ಕಡೆಗೆ ಕಳುಹಿಸುತ್ತಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಆರೋಪವನ್ನ ಮಾಡಿದೆ. ಅಲ್ಲದೆ ತೈವಾನ್ ಭದ್ರಾತಾ ಅಧಿಕಾರಿಗಳು ಇದನ್ನು 'ಕಿರುಕುಳ' ಎಂದು ಕರೆದಿದ್ದಾರೆ. ಆದರೆ ಚೀನಾ ಮಾತ್ರ, ದೇಶದ ಸಾರ್ವಭೌಮತೆ ಮತ್ತು ಗಡಿ ಸಮಗ್ರತೆ ಎತ್ತಿಹಿಡಿಯುವ ದೃಢನಿಶ್ಚಯದಿಂದ ಚೀನಾ ಪ್ರಜೆಗಳು ಹಿಂದೆ ಸರಿಯುವುದಿಲ್ಲ ಎಂದು ತನ್ನ ಶತ್ರು ರಾಷ್ಟ್ರದ ವಿರುದ್ಧ ಖಡಕ್ ಸಂದೇಶ ರವಾನಿಸಿದೆ. ಹೀಗೆ ಈ ಎರಡೂ ದೇಶಗಳ ಜಗಳದಿಂದ ದಕ್ಷಿಣ ಚೀನಾ ಸಮುದ್ರದಲ್ಲಿ ಮತ್ತೆ ಭಯ ಆವರಿಸಿದೆ.
ಏನಿದು ಪದೇ ಪದೆ ಕಿರಿಕ್?
ಅಮೆರಿಕ ನಾಯಕರಿಂದ ಪದೇ ಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ತಿಂಗಳು ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನ ಪ್ರಯಾಣಿಸಿ ಸಿಟ್ಟು ತರಿಸಿತ್ತು ಅಮೆರಿಕ. ಬಳಿಕ ಚೀನಾ ತನ್ನ ಶಕ್ತಿ ಏನು ಅಂತಾ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ಈ ನಡುವೆ ತೈವಾನ್ & ಅಮೆರಿಕ ನಡುವಿನ ವಾಣಿಜ್ಯ ಒಪ್ಪಂದ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದೆ ಚೀನಾ.

ಚೀನಾ ವಿರುದ್ಧ ಯುದ್ಧ ಸಾರುತ್ತಾ ಅಮೆರಿಕ?
ಅಮೆರಿಕ ಸೇನೆ ತೈವಾನ್ ಪರ ನಿಂತಿದೆ. ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ. ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ಸಂದರ್ಭದಲ್ಲಿ ತೈವಾನ್‌ಗೆ ಅಮೆರಿಕ ಸಹಾಯ ಮಾಡುತ್ತಾ, ವ್ಯಾಪಾರದಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದೆ. ಈ ಕಾರಣಕ್ಕೆ ಚೀನಾ ಮೈಕೊಡವಿ ನಿಂತು, ಅಮೆರಿಕ ಸೇನೆ ವಿರುದ್ಧ ಜಗಳಕ್ಕೆ ಬರುತ್ತಿದೆ. ಇದೇ ವೇಳೆ ಅಮೆರಿಕ ಕೂಡ ಎಚ್ಚರಿಕೆ ಸಂದೇಶ ನೀಡುತ್ತಿದೆ. ಹೀಗಾಗಿ ಅಮೆರಿಕ ಮತ್ತು ಚೀನಾ ನಡುವೆ ಭೀಕರ ಯುದ್ಧ ನಡೆಯುತ್ತಾ? ಅನ್ನೋ ಡೌಟ್ ಇಡೀ ಜಗತ್ತಿನಾದ್ಯಂತ ಶುರುವಾಗಿದೆ. ಇದೇ ಸಂದರ್ಭದಲ್ಲಿ ಚೀನಾ ಕೂಡ ತೈವಾನ್ ಬಳಿ ಸೇನಾ ಸಮರಭ್ಯಾಸ ನಡೆಸಲು ಮುಂದಾಗಿದೆ.
ಈ ವಿಚಾರದಲ್ಲಿ ಚೀನಾದ್ದು ತಪ್ಪೋ, ಅಥವಾ ಚೀನಾ ನಡೆ ಸರಿಯೋ ಗೊತ್ತಿಲ್ಲ. ಆದರೆ ಈ ಸಂದರ್ಭದಲ್ಲಿ ಯುದ್ಧ ಬೇಡ ಅನ್ನೋದೆ ಜಗತ್ತಿನ ಪ್ರತಿಯೊಬ್ಬ ಪ್ರಜೆ ನಿರ್ಧಾರ. ಯಾಕಂದ್ರೆ ಕೊರೊನಾ ಕಂಟಕದಿಂದ ಜಗತ್ತು ಈಗ ತಾನೆ ಸುಧಾರಿಸಿಕೊಳ್ಳುತ್ತಿದೆ. ತೀವ್ರ ಆರ್ಥಿಕ ಸಂಕಷ್ಟ ಕೂಡ ಜಗತ್ತನ್ನ ಕಾಡುತ್ತಿದೆ. ಈ ಹೊತ್ತಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧವು ಆರಂಭ ಆಗಿದೆ. ಪರಿಸ್ಥಿತಿ ಹೀಗಿದ್ದಾಗ ಚೀನಾ ಮತ್ತು ತೈವಾನ್ ಜಗಳಕ್ಕೆ ನಿಂತರೆ ಪ್ರಪಂಚದ ಭವಿಷ್ಯ ಏನಾಗಬೇಡ? ಅನ್ನೋದೆ ಸಾಮಾನ್ಯ ಜನರ ಪ್ರಶ್ನೆ.












Click it and Unblock the Notifications