Donald Trump: ಅಮೆರಿಕ ವಿರುದ್ಧ ರೊಚ್ಚಿಗೆದ್ದ ಚೀನಾ, ಶೇ. 125 ರಷ್ಟು ತೆರಿಗೆ ಇಂದಿನಿಂದ ಜಾರಿಗೆ!
ಅಮೆರಿಕ ಮತ್ತು ಚೀನಾ ಒಬ್ಬರನ್ನು ಮತ್ತೊಬ್ಬರು ಸರ್ವನಾಶ ಮಾಡಲು ಸಜ್ಜಾಗಿರುವಂತೆ ಕಾಣುತ್ತಿದೆ. ಅಮೆರಿಕ ವಿರುದ್ಧ ರೊಚ್ಚಿಗೆದ್ದ ಚೀನಾ ಈಗಾಗಲೇ ಹಲವು ಬದಲಾವಣೆ ಮಾಡಿ, ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಲು ಸಜ್ಜಾಗಿದೆ. ಡೊನಾಲ್ಡ್ ಟ್ರಂಪ್ ಅವರ ಹೊಸ ತೆರಿಗೆ ನೀತಿಗೆ ವಿರುದ್ಧವಾಗಿ ಇದೀಗ ಚೀನಾ ಕೂಡ ರೊಚ್ಚಿಗೆದ್ದು ಹೊಸ, ಹೊಸ ಟ್ಯಾಕ್ಸ್ ಹುಡುಕಿ ಹುಡುಕಿ ಹಾಕುತ್ತಿದೆ. ಇಂತಹ ಸಮಯದಲ್ಲೇ, ಚೀನಾ ನೆಲಕ್ಕೆ ಬರುವ ಅಮೆರಿಕದ ವಸ್ತುಗಳ ಮೇಲೆ ಶೇಕಡಾ 125 ರಷ್ಟು ತೆರಿಗೆ ಇಂದಿನಿಂದಲೇ ಜಾರಿಗೆ ಬರಲಿದೆ.
ಈ ಹಿಂದೆ ಶೇಕಡಾ 84 ರಷ್ಟು ತೆರಿಗೆ ಹೇರಿಕೆ ಮಾಡಲು ಚೀನಾ ಮುಂದಾಗಿತ್ತು. ಆ ನಂತರ ಮತ್ತಷ್ಟು ರೊಚ್ಚಿಗೆದ್ದು ಕೂತಿರುವ ಚೀನಾ ಇದೀಗ ಮತ್ತೊಂದು ಕ್ರಮ ಕೈಗೊಂಡಿದೆ. ತನ್ನ ಶೇಕಡಾ 84 ರಷ್ಟು ತೆರಿಗೆ ನೀತಿಗೆ ಬದಲಾಗಿ ಶೇಕಡಾ 125 ರಷ್ಟು ತೆರಿಗೆ ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಹೀಗೆ ಚೀನಾ ಕೈಗೊಂಡಿರುವ ನಿರ್ಧಾರ, ಭಾರಿ ದೊಡ್ಡ ಸಂಚಲನಕ್ಕೂ ಕಾರಣವಾಗಿದೆ. ಟ್ರಂಪ್ ಆಡಳಿತ ಅನೇಕ ದೇಶಗಳ ಮೇಲಿನ ಸುಂಕವನ್ನು 90 ದಿನಗಳವರೆಗೆ ತಡೆಹಿಡಿಯಲು ನಿರ್ಧಾರ ಕೈಗೊಂಡ ಒಂದು ದಿನದ ನಂತರ ಈ ಬೆಳವಣಿಗೆಯು ನಡೆದಿದೆ.

ಅಮೆರಿಕ & ಚೀನಾ ನಡುವೆ ತಿಕ್ಕಾಟ!
ಚೀನಾದ ಹಣಕಾಸು ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಚೀನಾ ಮೇಲೆ ಅಮೆರಿಕ ಈಗ ಅಸಹಜವಾಗಿ ಹೆಚ್ಚಿನ ಸುಂಕ ಅಂದರೆ ತೆರಿಗೆ ಹೇರಿಕೆ ಮಾಡುತ್ತಿದೆ. ಈ ಮೂಲಕ ಅಮೆರಿಕದ ಇಂತಹ ಕ್ರಮ ಅಂತಾರಾಷ್ಟ್ರೀಯ ಆರ್ಥಿಕ ವ್ಯಾಪಾರ ನಿಯಮಗಳು ಹಾಗೂ ಮೂಲ ಆರ್ಥಿಕ ಕಾನೂನುಗಳನ್ನ ಗಂಭೀರವಾಗಿ ಉಲ್ಲಂಘಿಸುತ್ತದೆ ಎಂದು ಚೀನಾ ಈಗ ತಿಳಿಸಿದೆ. ಹಾಗೇ ಟ್ರಂಪ್ ಸರ್ಕಾರದ ಈ ಕ್ರಮವನ್ನು ಬೆದರಿಕೆ ಎಂದು ಉಲ್ಲೇಖ ಮಾಡುವ ಮೂಲಕ, ತೆರಿಗೆ ಯುದ್ಧ ಎಂದು ಚೀನಾ ಇದೀಗ ಪರೋಕ್ಷವಾಗಿ ಕರೆದಿದೆ. ಇದು ಅಮೆರಿಕ & ಚೀನಾ ನಡುವೆ ಮತ್ತೆ ಬಹುದೊಡ್ಡ ತಿಕ್ಕಾಟಕ್ಕೆ ದಾರಿ ಮಾಡಿಕೊಟ್ಟಿದೆ.
ಚಿನ್ನದ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆ?
ಡೊನಾಲ್ಡ್ ಟ್ರಂಪ್ ಅವರು ಕೈಗೊಳ್ಳುತ್ತಿರುವ ಕಣ್ಣಿಗೆ ಕಣ್ಣು ಎಂಬ ದ್ವೇಷದ ತೆರಿಗೆ ನಿರ್ಧಾರ ಭಾರಿ ಅಲ್ಲೋಲ & ಕಲ್ಲೋಲ ಸೃಷ್ಟಿ ಮಾಡುತ್ತಿರುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಚಿನ್ನದ ಬೆಲೆ ಈಗ ಇರುವ ರೀತಿ ನೋಡಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು & ಮತ್ತಷ್ಟು ಬಂಗಾರ ಬೆಲೆ ಏರಿಕೆ ಆಗುವುದು ಗ್ಯಾರಂಟಿ ಆಗುತ್ತಿದೆ. ಚಿನ್ನದ ಬೆಲೆ ಕಳೆದ ಕೆಲವು ತಿಂಗಳಿಂದ ನಿರಂತರ ಏರಿಕೆ ಕಾಣುತ್ತಿದ್ದು ಬಂಗಾರ ಖರೀದಿ ಮಾಡಲು ಕಾಯುತ್ತಿದ್ದವರಿಗೆ ಈಗ ಮತ್ತೊಂದು ಆಘಾತಕಾರಿ ಸುದ್ದಿ ಸಿಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರದ ನಂತರ ಹೆಚ್ಚಿನ ತೆರಿಗೆ ಭಯದಲ್ಲಿ, ಚಿನ್ನದ ಬೆಲೆ 1 ಲಕ್ಷ ರೂಪಾಯಿಗೆ ಏರಿಕೆ ಆಗಬಹುದು ಅಂತಾನೇ ಇದೀಗ ತಜ್ಞರು ಹೇಳುತ್ತಿದ್ದಾರೆ.












Click it and Unblock the Notifications