ಕೋಪಗೊಂಡ ಪತ್ನಿ ಮನವೊಲಿಸಲು 4400 ಕಿಮೀ ಸೈಕಲ್ ತುಳಿದ ಪತಿ!
100 ದಿನಗಳಲ್ಲಿ 4400 ಕಿಲೋಮೀಟರ್ ಸೈಕ್ಲಿಂಗ್ ಮಾಡುವುದು ಸಣ್ಣ ಸಾಧನೆಯಲ್ಲ. ಇದಕ್ಕೆ ಧೈರ್ಯದ ಜೊತೆಗೆ ಪ್ರೇರಣೆಯೂ ಬೇಕು. ಚೀನಾದ 40 ವರ್ಷದ ಝೌ ಎಂಬ ವ್ಯಕ್ತಿ ತನ್ನ ಕೋಪಗೊಂಡ ಪತ್ನಿಯ ಮನವೊಲಿಸಲು 4400 ಕಿಲೋಮೀಟರ್ ಸೈಕಲ್ ತುಳಿದಿದ್ದಾರೆ. ಅವರ ಪತ್ನಿಯನ್ನು ಮನವೊಲಿಸುವ ಅವರ ವಿಶಿಷ್ಟ ವಿಧಾನ ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಯನ್ನು ಗಳಿಸುತ್ತಿದೆ. ಇದಕ್ಕೆ ಪ್ರಶಂಸೆ ಹಾಗೂ ಟೀಕೆ ವ್ಯಕ್ತವಾಗುತ್ತಿದೆ. ಹಾಗಾದರೆ ಏನಿದು ಕಥೆ ಎಂದು ತಿಳಿಯೋಣ.
ದೂರವಾಗಿ ಮತ್ತೆ ಒಂದಾದರು...
ಚೀನಾದ ಜಿಯಾಂಗ್ಸು ಪ್ರಾಂತ್ಯದ ಲಿಯಾನ್ಯುಂಗಾಂಗ್‌ನ 40 ವರ್ಷದ ಝೌ 2007ರಲ್ಲಿ ಲೀ ಅವರೊಂದಿಗೆ ಮದುವೆಯಾದರು. ಬಳಿಕ ಅವರಿಬ್ಬರು ಜಗಳದಿಂದ ದೂರವಾಗಿದ್ದರು. ಈ ವಿಷಯದಿಂದ ಬೇಸತ್ತು ಝೌ ಅವರು ತಮ್ಮ ದಾಂಪತ್ಯವನ್ನು ಮತ್ತೆ ಸರಿಪಡಿಸಲು ಯೋಚನೆ ಮಾಡಿದರು.

ಇದಕ್ಕಾಗಿ ಸೈಕಲ್‌ನಲ್ಲಿ ಸಾಗುವ ಸವಾಲನ್ನು ಸ್ವೀಕರಿಸಿದರು. ಝೌ ಈ ವರ್ಷ ಜುಲೈ 28 ರಂದು ನಾನ್‌ಜಿಂಗ್‌ನಿಂದ ತನ್ನ ಎರಡು ವರ್ಷಗಳ ಕಾಲ ಬಿರುಕುಗೊಂಡಿದ್ದ ದಾಂಪತ್ಯ ಜೀವನವನ್ನು ಸರಿಪಡಿಸಲು ತನ್ನ ಹೆಂಡತಿಯನ್ನು ಭೇಟಿ ಮಾಡಲು ಸೈಕಲ್ ಪ್ರಯಾಣವನ್ನು ಪ್ರಾರಂಭಿಸಿದರು.
ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಝೌ ಅವರು, ನನ್ನ ಮತ್ತು ನನ್ನ ಹೆಂಡತಿಯ ನಡುವೆ ಯಾವುದೇ ನಿರ್ದಿಷ್ಟ ಜಗಳ ಅಥವಾ ವಿಘಟನೆಯ ವಿಷಯವಿಲ್ಲ. ನಾವು ತುಂಬಾ ಹಠಮಾರಿಗಳು ಮತ್ತು ಬೇಗನೆ ಕೋಪಗೊಳ್ಳುತ್ತೇವೆ. ಇದರಿಂದಾಗಿಯೇ ಈ ಸಂಗತಿಗಳು ನಮ್ಮಿಬ್ಬರ ನಡುವೆ ಮತ್ತೆ ಮತ್ತೆ ಸಂಭವಿಸುತ್ತಲೇ ಇದ್ದವು. ಈಗ ಸುದೀರ್ಘ ಸಮಯದ ನಂತರ ನಾನು ನನ್ನ ಪತ್ನಿಯನ್ನು ಸೇರಲು ಹೊರಟಿದ್ದೇನೆ ಎಂದರು.

ಅಪಾಯಕಾರಿ ಪ್ರಯಾಣ
ಸಂಗಾತಿಯನ್ನು ತಲುಪಲು ಅವರು ತುಂಬಾ ಅಪಾಯಕಾರಿ ಸೈಕಲ್ ಪ್ರಯಾಣವನ್ನು ಝೌ ಆರಂಭಿಸಿದರು. ಅವರ ಪ್ರಯಾಣದ ಸಮಯದಲ್ಲಿ ಅವರು ಶಾಖದ ಹೊಡೆತಕ್ಕೆ ಗುರಿಯಾದರು. ಇದರಿಂದಾಗಿ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಮೊದಲ ಘಟನೆ ಅನ್ಹುಯಿ ಪ್ರಾಂತ್ಯದಲ್ಲಿ ಮತ್ತು ಎರಡನೆಯದು ಹುಬೈ ಪ್ರಾಂತ್ಯದಲ್ಲಿ ನಡೆದಿದೆ. ಹುಬೈನಲ್ಲಿ 40 ಡಿಗ್ರಿ ಶಾಖದಲ್ಲಿ ಸೈಕ್ಲಿಂಗ್ ಮಾಡುವಾಗ ನಿರ್ಜಲೀಕರಣದ ಕಾರಣ ಝೌ ರಸ್ತೆಯ ಮೇಲೆ ಕುಸಿದು ಬಿದ್ದರು. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಅವರು ತಮ್ಮ ಸೈಕಲ್ ಪ್ರಯಾಣವನ್ನು ಆರಂಭಿಸಿದರು.
ಝೌ ಅವರ ಪ್ರಯತ್ನ ಅವರ ಹೆಂಡತಿಗೆ ಇಷ್ಟವಾಯಿತು. ಆದರೆ ಲೀ ಕೂಡ ಪ್ರಯಾಣವನ್ನು ತ್ಯಜಿಸುವಂತೆ ಝೌ ಮನವೊಲಿಸಲು ಪ್ರಯತ್ನಿಸಿದರು. ಆದರೆ ಝೌ ಇದನ್ನು ಒಪ್ಪುವುದಿಲ್ಲ. ಈ ವಿಚಿತ್ರ ಘಟನೆಗೆ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯ ಬಗ್ಗೆ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಬಳಕೆದಾರರು ಝೌ ಅವರ ಈ ಕ್ರಮವನ್ನು ಅವರ ಆರೋಗ್ಯಕ್ಕೆ ಅಪಾಯಕಾರಿ ಎಂದು ಟೀಕಿಸುತ್ತಿದ್ದಾರೆ. ಪ್ರೇಮದೆಡೆಗಿನ ಅವರ ದೃಢಸಂಕಲ್ಪವನ್ನು ಹಲವರು ಶ್ಲಾಘಿಸಿದ್ದಾರೆ.
ಝೌ ಅವರ ಪ್ರಯಾಣದಲ್ಲಿ ಮತ್ತೊಂದು ತಿರುವು ಏನೆಂದರೆ ಅವರ ಪತ್ನಿ ಲೀ ಲಾಸಾದಿಂದ 400 ಕಿಲೋಮೀಟರ್ ದೂರದಲ್ಲಿರುವ ನಿಂಗ್ಚಿನಲ್ಲಿ ಅನಾರೋಗ್ಯಕ್ಕೆ ಒಳಗಾದಾಗ ಝೌ ತಕ್ಷಣವೇ ಅವನ ಸಹಾಯಕ್ಕೆ ದಾವಿಸಿದ್ದಾರೆ. ಅದರಿಂದ ಲೀ ಅವರ ಹೃದಯ ತುಂಬಿ ಬಂದಿದೆ. ಝೌ ಅಕ್ಟೋಬರ್ 28 ರಂದು ಲಾಸಾದಲ್ಲಿ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದರು. ಇಬ್ಬರು ಪುನರ್ಮಿಲನವನ್ನು ಗುರುತಿಸಲು ಸಣ್ಣ ಪಾರ್ಟಿಯನ್ನು ಆಯೋಜಿಸಿದ್ದರು.
ಒಟ್ಟಿನಲ್ಲಿ ಪತ್ನಿ ಮನವೊಲಿಸಲು ಝೌ ಯಶಸ್ವಿಯಾಗಿದ್ದಾರೆ. ಅದು ಸೈಕಲ್‌ನಲ್ಲಿ ಸಾಗುವ ಮೂಲಕ ಪತ್ನಿಯ ಕೋಪವನ್ನು ಶಮನಮಾಡಿದ್ದಾರೆ. ಇದು ನಿಜಕ್ಕೂ ವಿಚಿತ್ರವಾದ ಘಟನೆಯಾಗಿದೆ.












Click it and Unblock the Notifications