ಸಂಕಷ್ಟದ ಸಂದರ್ಭದಲ್ಲಿ ಸ್ನೇಹಿತನ ಬೆನ್ನಿಗೆ ನಿಂತ ಸ್ನೇಹಿತ!
ಮಾಸ್ಕೋ: ಅತ್ತ ಉಕ್ರೇನ್ ವಿರುದ್ಧ ರಷ್ಯಾ ಹೋರಾಡಲು ಅಮೆರಿಕ & ನ್ಯಾಟೋ ಪಡೆಗಳು ಪರೋಕ್ಷವಾಗಿ ಅಡ್ಡಿ ಮಾಡುತ್ತಿವೆ, ಆದರೆ ಇತ್ತ ತನ್ನ ಗೆಳೆಯನ ಪರವಾಗಿ ನಿಂತಿರುವ ಅದೊಂದು ರಾಷ್ಟ್ರ ಮಾತ್ರ ರಷ್ಯಾಗೆ ನೇರವಾಗಿ & ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಹಾಗಾದ್ರೆ ಯಾವುದು ಆ ರಾಷ್ಟ್ರ? ಆ ರಾಷ್ಟ್ರದಿಂದ ರಷ್ಯಾಗೆ ಆಗುತ್ತಿರುವ ಸಹಾಯ ಏನು? ತಿಳಿಯೋಣ ಬನ್ನಿ.
ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಜಗತ್ತು 2 ಬಣವಾಗಿ ಛಿದ್ರವಾಗಿದೆ. 1ನೇ ಮಹಾಯುದ್ಧ ಹಾಗೂ 2ನೇ ಮಹಾಯುದ್ಧದ ಸಂದರ್ಭದಲ್ಲೂ ಜಗತ್ತು 2 ಭಾಗವಾಗಿ ಹೋಗಿತ್ತು. ಕೋಟ್ಯಂತರ ಜನರು ಮಹಾಯುದ್ಧದ ರಕ್ತದಾಹಕ್ಕೆ ಬಲಿಯಾದರು & ಅದೇ ಮಹಾಯುದ್ಧ ಮಾನವನ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕಹಿ ಘಟನೆಯಾಗಿ ಉಳಿದಿದೆ. ಆದರೆ ಇದೇ ಹೊತ್ತಲ್ಲೇ ಒಂಟಿಯಾಗಿರುವ ರಷ್ಯಾಗೆ ಚೀನಾ (Russia Ukraine War) ಭರ್ಜರಿ ಸಹಾಯ ಮಾಡುತ್ತಿದೆ, ಈ ಮೂಲಕ ಅಮೆರಿಕ ವಿರುದ್ಧ ತೊಡೆತಟ್ಟಿ ನಿಂತಿದೆ.

ಯಾರಿಗೂ ಕೇರ್ ಮಾಡುತ್ತಿಲ್ಲ ಚೀನಾ!
ರಷ್ಯಾ ವಿಚಾರ ಬಂತು ಅಂದ್ರೆ ಸಾಕು ಅಮೆರಿಕ ಅಲರ್ಟ್ ಆಗುತ್ತೆ. ರಷ್ಯಾಗೆ ಸಹಾಯ ಮಾಡುವ ಯಾವುದೇ ರಾಷ್ಟ್ರ ಆಗಿರಲಿ, ಅದನ್ನ ಟಾರ್ಗೆಟ್ ಮಾಡುತ್ತದೆ ಅಮೆರಿಕ. ಆದರೆ ಚೀನಾ ವಿರುದ್ಧ ಮಾತ್ರ ಅಮೆರಿಕದ ಈ ತಂತ್ರ ನಡೆಯುತ್ತಿಲ್ಲ. ಈ ಕಾರಣಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕೇರ್ ಮಾಡದೆ ರಷ್ಯಾ ಪರ ನಿಂತಿದೆ ಚೀನಾ. ಹಾಗಾದ್ರೆ ಈಗ ಯಾವ ರೀತಿ ಸಹಾಯಕ್ಕೆ ಒಪ್ಪಿದೆ ಗೊತ್ತಾ ಚೀನಾ? ತನ್ನ ರಾಷ್ಟ್ರಕ್ಕೆ ಬಂದ ರಷ್ಯಾದ ಪ್ರತಿನಿಧಿ ಜೊತೆ ಏನೆಲ್ಲಾ ಚರ್ಚೆ ನಡೆಸಿದೆ ಚೀನಾ? ಮುಂದೆ ಓದಿ.
ರಷ್ಯಾ & ಚೀನಾ ದೋಸ್ತಿ ಜೋರು
ಯಾರು ಏನೇ ಹೇಳಲಿ ನಾವು ಮಾತ್ರ ರಷ್ಯಾ ಜೊತೆಗೆ ಇರುತ್ತೇವೆ ಎಂಬುದು ಚೀನಾ ಮಾತು. ಹೀಗಾಗಿ ಚೀನಾ ತನ್ನ ದೇಶಕ್ಕೆ ಬಂದ ರಷ್ಯಾ ಪ್ರತಿನಿಧಿ ಜೊತೆ ಹಲವು ಒಪ್ಪಂದಕ್ಕೆ ಸಹಿ ಹಾಕಿದೆ. ಅಮೆರಿಕದ ಭಾರಿ ವಿರೋಧ ಕಟ್ಟಿಕೊಂಡಿರುವ ಚೀನಾ, ರಷ್ಯಾ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದೆ. ರಷ್ಯಾ ಪ್ರಧಾನಿ ಮಿಖಾಯಿಲ್ ಮಿಷುಟ್ಸಿನ್ ಚೀನಾ ಪ್ರವಾಸದಲ್ಲಿದ್ದು, ಚೀನಾ ಅಧ್ಯಕ್ಷ ಜಿನ್‌ಪಿಂಗ್ ಜೊತೆಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಅಲ್ಲದೆ ಚೀನಾ & ರಷ್ಯಾ ಪರಸ್ಪರರ ಅಭಿವೃದ್ಧಿಗೆ ಬದ್ಧವಾಗಿರಲು ಪ್ರಮಾಣ ಮಾಡಿದ್ದಾರೆ.

ಚೀನಾ ಬಿಟ್ಟು ಬೇರೆ ದಾರಿ ಇಲ್ವಾ?
ಈಗಿನ ಪರಿಸ್ಥಿತಿಯಲ್ಲಿ ಚೀನಾ ಜೊತೆಗೆ ರಷ್ಯಾ ತುಂಬಾ ಒಡನಾಟ ಹೆಚ್ಚಿಸಿಕೊಳ್ಳುತ್ತಿದೆ. ಅದರಲ್ಲೂ ಸೇನಾ ಸಂಬಂಧದ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿ ಕೆಲಸ ಮುಂದುವರಿಸಲು ರಷ್ಯಾಗೆ ಇದೀಗ ಚೀನಾ ಸಹಾಯ ಬೇಕು. ಇದೇ ಕಾರಣಕ್ಕೆ ಹಲವು ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಸಹಿ ಮಾಡಿವೆ. ವ್ಯಾಪಾರ ಹಾಗೂ ಸೇವಾ ಕ್ಷೇತ್ರಗಳಲ್ಲಿ ಹೂಡಿಕೆ ಸಹಕಾರ ಸೇರಿದಂತೆ ಚೀನಾದ ಕೃಷಿ ಉತ್ಪನ್ನಗಳ ರಫ್ತು, ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕೆ ಈಗ ಎರಡೂ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ. ಇದು ಅಮೆರಿಕದ ಕೋಪವನ್ನ ನೆತ್ತಿಗೇರಿಸಿದೆ.
ಅಮೆರಿಕ ನೆಲದಲ್ಲಿ ಆರ್ಥಿಕ ಸಂಕಷ್ಟ
ಕೊರೊನಾ ಕಂಟಕದ ಬಳಿಕ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ, ಇದರ ನಡುವೆ ಯುದ್ಧ ಬೇರೆ ಶುರುವಾಗಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಯುರೋಪ್ ಖಂಡ ಆರ್ಥಿಕ ಕುಸಿತ ಎದುರಿಸುತ್ತಿದೆ. ಈ ಕಷ್ಟದಲ್ಲೇ ಬ್ಯಾಂಕ್‌ಗಳು ಕೂಡ ಅಮೆರಿಕದಲ್ಲಿ ಬಾಗಿಲು ಹಾಕಿಕೊಂಡು ಹೋಗುತ್ತಿವೆ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ರಷ್ಯಾ ಸೋಲಿಸಿ, ಆದಷ್ಟು ಬೇಗ ಯುದ್ಧ ಮುಗಿಸುವ ಐಡಿಯಾ ಅಮೆರಿಕದ್ದು. ಆದರೆ ಕಿಲಾಡಿ ರಷ್ಯಾ ಈಗ ಚೀನಾ ಜೊತೆ ಒಪ್ಪಂದಗಳಿಗೆ ಸಹಿ ಹಾಕಿ ಅಮೆರಿಕಗೆ ಶಾಕ್ ನೀಡಿದೆ.

ಒಟ್ನಲ್ಲಿ ರಷ್ಯಾ ವಿರುದ್ಧ ಇಡೀ ಜಗತ್ತೇ ಒಂದಾದರೂ ಚೀನಾ ಮಾತ್ರ ತನ್ನ ಗೆಳೆಯನನ್ನ ಬಿಟ್ಟುಕೊಡುತ್ತಿಲ್ಲ. ಈ ನಡೆ ಅಮೆರಿಕ & ನ್ಯಾಟೋ ಪಡೆಗಳಿಗೆ ಚೀನಾ ವಿರುದ್ಧ ಕೋಪ ಬರುವಂತೆ ಮಾಡಿದೆ. ಆದ್ರೂ ಇದಕ್ಕೆಲ್ಲಾ ಕೇರ್ ಮಾಡದ ಚೀನಾ, ತನ್ನ ಮತ್ತು ರಷ್ಯಾ ಸಂಬಂಧ ವೃದ್ಧಿಗೆ ಮುಂದಾಗುತ್ತಿದೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮೆರಿಕ ಮುಂದೆ ಚೀನಾ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೋ ಗೊತ್ತಿಲ್ಲ. h












Click it and Unblock the Notifications