ಜಾತಿ ಪದ್ದತಿ ವಿರುದ್ಧ ಸಮರ ಸಾರಿದೆ ಅಮೆರಿಕದ ಈ ರಾಜ್ಯ!
ಕ್ಯಾಲಿಫೋರ್ನಿಯಾ: ಮನುಷ್ಯನೇ ಮನುಷ್ಯನ ವಿರುದ್ಧ ದ್ವೇಷ ಕಾರಲು, ಅಸೂಯೆ ಪಡಲು ಕಾರಣವಾಗಿದ್ದೇ ಜಾತಿ ಪದ್ಧತಿ. ಇಂಥ ಪದ್ಧತಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಮೂಲೆ ಮೂಲೆಯಲ್ಲೂ ವಿವಿಧ ರೀತಿಯಲ್ಲಿ ನೆಲೆಯೂರಿದೆ. ಆದರೆ ಅದರ ವಿರುದ್ಧ ಸಮರ ಸಾರಬೇಕು ಅಷ್ಟೇ. ಈಗ ಅಮೆರಿಕದ ಈ ರಾಜ್ಯ ಜಾತಿ ಪದ್ಧತಿ ವಿರುದ್ಧ ಸಮರ ಸಾರಿ, ತೊಡೆ ತಟ್ಟಿದೆ.
ಅಮೆರಿಕ ಜನಾಂಗೀಯ ದ್ವೇಷ ಮತ್ತು ತಿಕ್ಕಾಟದಲ್ಲಿ ಶತಮಾನಗಳ ಕಾಲ ನರಳಿದೆ. ಅಲ್ಲಿ ಈಗಲೂ ಕರಿಯರ ವಿರುದ್ಧ ಬಿಳಿಯರು ಜನಾಂಗೀಯ ದ್ವೇಷ ಸಾಧಿಸುತ್ತಾರೆ. ಇದು ಅಮೆರಿಕದ ನೆಮ್ಮದಿಯನ್ನೇ ಹಾರಿ ಹೋಗುವಂತೆ ಮಾಡಿದೆ. ಈ ಸಂದರ್ಭದಲ್ಲೇ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯ ಎಲ್ಲರೂ ಬೆನ್ನುತಟ್ಟುವ ಕೆಲಸ ಮಾಡಿದೆ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಜಾತಿ ಪದ್ಧತಿ ತೊಡೆದು ಹಾಕುವ ಮಸೂದೆ ಜಾರಿಯಾಗಿದ್ದು, ಜಾತಿ ಪದ್ದತಿ ನಿಷೇಧಿಸಿದ ಅಮೆರಿಕದ ಮೊದಲ ರಾಜ್ಯ ಎಂಬ ಕೀರ್ತಿಗೆ ಕ್ಯಾಲಿಫೋರ್ನಿಯಾ ಪಾತ್ರವಾಗಿದೆ.

ಜಾತಿ ಪದ್ಧತಿ ನಿಷೇಧಕ್ಕೆ ಸಂತಸ
ಈ ಹಿಂದೆ ವಾಷಿಂಗ್ಟನ್‌ನ ಸಿಯಾಟಲ್ ನಗರ ಈ ಮಸೂದೆ ಜಾರಿಗೊಳಿಸಿತ್ತು. ಜಾತಿ ಪದ್ಧತಿ ನಿಷೇಧಿಸಿದ ಅಮೆರಿಕ ಮೊದಲ ನಗರವೆಂಬ ಹೆಗ್ಗಳಿಕೆಗೆ ಸಿಯಾಟಲ್ ಸಿಟಿ ಪಾತ್ರವಾಗಿತ್ತು. ಇದಾದ ಬಳಿಕ ಕ್ಯಾಲಿಫೋರ್ನಿಯಾ ರಾಜ್ಯ ಕೂಡ ಇಂತಹದ್ದೇ ಕ್ರಮ ಕೈಗೊಂಡಿದೆ. ಈ ಮೂಲಕ ಜಗತ್ತಿಗೇ ಮಾದರಿ ಆಗುವಂತಹ ನಿರ್ಧಾರವನ್ನ ಜಾರಿಗೆ ತರಲಾಗಿದೆ. ಜಾತಿ ಪದ್ಧತಿ ನಿಷೇಧವಾದ ಸಂತಸದಲ್ಲಿ ಅಮೆರಿಕನ್ನರು ಸಂಭ್ರಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರು ಆಗಿದೆ.
'15 ವರ್ಷಗಳ ಹೋರಾಟದ ಫಲ'
ಜಾತಿ ಪದ್ಧತಿ ತೊಡೆದು ಹಾಕುವ ಮಸೂದೆ ಜಾರಿ ಬಗ್ಗೆ ಈಕ್ವಾಲಿಟಿ ಲ್ಯಾಬ್ ಸಂಘಟನೆಯ ತೇನ್ಮೋಳಿ ಸೌಂದರರಾಜನ್ ಸಂತಸ ಹಂಚಿಕೊಂಡಿದ್ದಾರೆ. '15 ವರ್ಷದ ಹೋರಾಟದ ಫಲವಾಗಿ ಮಸೂದೆ ಜಾರಿಯಾಗಿದೆ. ಕ್ಯಾಲಿರ್ಫೋನಿಯಾದಲ್ಲಿ ಮಸೂದೆ ಜಾರಿಗೆ ಬರುವುದು ಅವಶ್ಯಕವಾಗಿದೆ. ಏಷ್ಯನ್-ಅಮೆರಿಕನ್ ಸಮುದಾಯಗಳ ಮೇಲೆ ಜಾತಿ ತಾರತಮ್ಯ ನಡೆಯುತ್ತ ಬಂದಿತ್ತು. ನಮ್ಮ ಸ್ವಾತಂತ್ರ್ಯಕ್ಕಾಗಿ ಸಂಘಟಿತರಾಗಿ ಹೋರಾಟ ಆರಂಭಿಸಿದ್ದೆವು' ಎನ್ನುವ ಮೂಲಕ ಮಸೂದೆ ಜಾರಿಯ ಹಿಂದಿರುವ ಹೋರಾಟದ ಇತಿಹಾಸ ತಿಳಿಸಿದ್ದಾರೆ.
'ಈಕ್ವಾಲಿಟಿ ಲ್ಯಾಬ್ ಸಂಘಟನೆಯ ಮೂಲಕ ರಾಜ್ಯದಾದ್ಯಂತ ಹೋರಾಟ ಮಾಡಲಾಗಿತ್ತು. ಈ ಹೋರಾಟದ ಫಲವಾಗಿಯೇ ವಾಷಿಂಗ್ಟನ್‌ನ ಸಿಯಾಟಲ್ ನಗರದಲ್ಲಿ ಫೆಬ್ರವರಿಯಲ್ಲಿ ಜಾತಿ ತಾರತಮ್ಯ ವಿರೋಧಿ ಮಸೂದೆ ಜಾರಿಗೆ ಬಂದಿತ್ತು. ಈಗ ಕ್ಯಾಲಿರ್ಫೋನಿಯಾ ರಾಜ್ಯದಲ್ಲಿ ಕೂಡ ಜಾರಿಗೆ ಬಂದಿದೆ' ಎಂದು ಈಕ್ವಿಟಿ ಲ್ಯಾಬ್ ಸಂಘಟನೆಯ ತೇನ್ಮೋಳಿ ಸೌಂದರರಾಜನ್ ಹೇಳಿದ್ದಾರೆ.
ಇಲ್ಲಿ ಸಂತಸ, ಅಲ್ಲಿ ವಿರೋಧ!
ಹೌದು, ಜಾತಿ ಪದ್ಧತಿ ವಿರೋಧಿ ಮಸೂದೆ ಜಾರಿ ಹಿನ್ನೆಲೆ ಸಾಕಷ್ಟು ಮಂದಿ ಸಂಭ್ರಮ ಪಟ್ಟಿದ್ದಾರೆ. ಆದರೆ ಏಷ್ಯನ್-ಅಮೆರಿಕನ್ ವ್ಯಾಪಾರಿಗಳು ಮತ್ತು ದೇವಸ್ಥಾನ ಮಂಡಳಿಗಳು ವಿರೋಧ ವ್ಯಕ್ತಪಡಿಸಿವೆ. 'ಜಾತಿ ಪದ್ಧತಿ ವಿರೋಧಿ ಮಸೂದೆ ಜಾರಿಯಾಗುವ ಪರಿಣಾಮ ಭಾರತೀಯ ಹೋಟೆಲ್ ಮತ್ತು ಮೋಟೆಲ್ ಮಾಲೀಕರ ಮೇಲೆ ಪರಿಣಾಮ ಬೀರುತ್ತದೆ. ಮಸೂದೆ ಅಂಗೀಕಾರವಾದರೆ, ಸಣ್ಣ ಉದ್ಯಮಗಳ ವಿರುದ್ಧ ಕ್ಷುಲ್ಲಕ ಮೊಕದ್ದಮೆ ಹೂಡುವ ಸಾಧ್ಯತೆಯಿದೆ. ಇದ್ರಿಂದ ವ್ಯಾಪಾರಿಗಳಿಗೆ ಅಡ್ಡಿಯಾಗಬಹುದು' ಎಂದು ಹೋಟೆಲ್ ಮಾಲೀಕರ ಸಂಘ ಅಭಿಪ್ರಾಯಪಟ್ಟಿದೆ.
ಒಟ್ನಲ್ಲಿ ಜಾತಿ ಪದ್ಧತಿ ತೊಡೆದು ಹಾಕುವ ಮಸೂದೆ ಒಂದು ಕಡೆ ಸಂತಸಕ್ಕೆ ಕಾರಣವಾಗಿದ್ದರೆ, ಇನ್ನೊಂದು ಕಡೆ ಇದಕ್ಕೆ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಜಾತಿ ಪದ್ಧತಿ ಕುಲುಮೆಯಲ್ಲಿ ಬೆಂದವರು ಈ ವಿಚಾರವನ್ನ ವಾಸ್ತವವಾಗಿ ಯೋಚಿಸಿ ಉತ್ತರಿಸುತ್ತಿದ್ದರೆ, ಇನ್ನೂ ಕೆಲವರು ಭವಿಷ್ಯವನ್ನು ಊಹೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಅದೆಲ್ಲ ಏನೇ ಇರಲಿ ಕ್ಯಾಲಿಫೋರ್ನಿಯಾ ರಾಜ್ಯ ಜಾತಿ ಪದ್ಧತಿ ವಿರುದ್ಧ ಕೈಗೊಂಡ ನಿರ್ಧಾರ ಜಗತ್ತಿನಾದ್ಯಂತ ದೊಡ್ಡ ಸದ್ದು ಮಾಡುತ್ತಿರುವುದು ಸುಳ್ಳಲ್ಲ.












Click it and Unblock the Notifications