ಟ್ರಂಪ್ ಪ್ರಮಾಣವಚನದಲ್ಲಿ ಮಿಂಚಿದ ಕೋಟ್ಯಾಧಿಪತಿಗಳು, ಯುಎಸ್ ರಾಜಕಾರಣಿಗಳೇ ಸೈಡ್‌ಲೈನ್!
ಅಮೆರಿಕದ ನೂತನ ಅಧ್ಯಕ್ಷ ಹಾಗೂ ಉದ್ಯಮಿ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಕೋಟ್ಯಾಧಿಪತಿಗಳೇ ತುಂಬಿದ್ದರು. ಎಷ್ಟರ ಮಟ್ಟಿಗೆ ಎಂದರೆ ಅಮೆರಿಕದ ಕ್ಯಾಬಿನೇಟ್ ಮೆಂಬರ್‌ಗಳೇ ಇದರಲ್ಲಿ ಕಾಣಿಸದಷ್ಟು ಶ್ರೀಮಂತರು ಹಾಗೂ ಉದ್ಯಮಿಗಳಿಗೆ ಮೊದಲ ಸ್ಥಾನದಲ್ಲಿ ಅವಕಾಶ ನೀಡಲಾಗಿತ್ತು. ಈ ವಿಷಯ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಟ್ರಂಪ್ ಅವರು ಕೇವಲ ರಾಜಕಾರಣಿ ಮಾತ್ರವಲ್ಲ ಅವರೊಬ್ಬ ದೊಡ್ಡ ಉದ್ಯಮಿಯೂ ಹೌದು. ಇನ್ನು ಟ್ರಂಪ್ ಅವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೆಲಾನಿಯಾ ಮೀಮ್ ಅವರು ತಮ್ಮದೇ ಕ್ರಿಪ್ಟೋಕರೆನ್ಸಿಯನ್ನು ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ವಿಷಯ ಚರ್ಚೆಯಲ್ಲಿ ಇರುವಾಗಲೇ ಕೋಟ್ಯಾಧಿಪತಿಗಳಿಗೆ ಮಣೆ ಹಾಕಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಸೋಮವಾರ (ಭಾರತೀಯ ಕಾಲಮಾನ ಸೋಮವಾರ ರಾತ್ರಿ 10.30) ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಕೋಟ್ಯಾಧಿಪತಿಗಳಿಗೆ ಮಣೆಯಾಕಲಾಗಿದೆ.
ಮೊದಲ ಸಾಲಿನಲ್ಲಿ ಅವರೇ ಮಿಂಚಿದ್ದಾರೆ. ಪದಗ್ರಹಣದ ಸಮಾರಂಭದಲ್ಲಿ ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ಹಾಗೂ ಜೆಫ್ ಬೆಜೋಸ್ ಸೇರಿದಂತೆ ಹಲವಾರು ಅಮೆರಿಕದ ಕೋಟ್ಯಾಧಿಪತಿಗಳೇ ಮಿಂಚಿದ್ದಾರೆ. ಹೊಸ ಆಡಳಿತದ ಮೊದಲ ದಿನವೇ ಇವರು ಮೇಲುಗೈ ಸಾಧಿಸಿದ್ದಾರೆ. ಶ್ವೇತಭವನದಲ್ಲಿ ಶ್ರೀಮಂತ ಹಾಗೂ ಪ್ರಭಾವಿ ಉದ್ಯಮಿಗಳೇ ಮಿಂಚಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಟ್ರಂಪ್ ಒಬ್ಬರು ಪ್ರಭಾವಿ ಉದ್ಯಮಿಯಾಗಿದ್ದಾರೆ. ಅಲ್ಲದೆ ಹಲವು ಉದ್ಯಮಿಗಳು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಬೆನ್ನಿಗೆ ನಿಂತಿದ್ದರು. ವಿಶ್ವದ ಕೋಟ್ಯಾಧಿಪತಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಅವರು ಪ್ರಚಾರವನ್ನು ಸಹ ಮಾಡಿದ್ದರು. ಇದೀಗ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಈ ಕೋಟ್ಯಾಧಿಪತಿಗಳ ಕಾರುಬಾರು ಜೋರಾಗಿದೆ ಅಂತಲೇ ಹೇಳಲಾಗುತ್ತಿದೆ.
ಈ ಬಾರಿ ಅಮೆರಿಕದಲ್ಲಿ ಭಾರೀ ಚಳಿ ಇದ್ದು. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಪ್ರಮಾಣವಚನ ಸಮಾರಂಭವನ್ನು ಅಮೆರಿಕದ ವಾಷಿಂಗ್ಟನ್‌ನ ಡಿಸಿ ಕ್ಯಾಪಿಟಲ್ ರೊಟುಂಡಾ ಎನ್ನುವ ಒಳಾಂಗಣದಲ್ಲಿ ಆಯೋಜಿಸಲಾಗಿತ್ತು. ಕೆಲವೇ ಕೆಲವು ಸೀಟುಗಳ ವ್ಯವಸ್ಥೆ ಇಲ್ಲಿತ್ತು. ಇದರ ಹೊರತಾಗಿಯೂ ಅಲ್ಲಿಗೆ ಗಣ್ಯರು ಹಾಗೂ ಕೋಟ್ಯಾಧಿಪತಿಗಳಿಗೆ ರಾಜಮರ್ಯಾದೆ ಕೊಡಲಾಗಿದೆ.
ಮೆಟಾ ಸಿಇಒ ಜುಕರ್‌ಬರ್ಗ್ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಹಾಜರಿದ್ದರು. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಹಾಗೂ ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಹಲವರು ಹಾಜರಿದ್ದರು. ಇವರಿಗೆ ಅಮೆರಿಕದ ಪಾರ್ಲಿಮೆಂಟ್ (ಚುನಾಯಿತ ರಾಜಕಾರಣಿಗಳು) ಮೆಂಬರ್‌ಗಳಿಗಿಂತಲೂ ಮುಂಭಾಗದಲ್ಲಿ ಆಸನದ ವ್ಯವಸ್ಥೇ ಮಾಡಲಾಗಿತ್ತು.
ಇನ್ನು ಆ್ಯಪಲ್ ಸಿಇಒ ಟಿಮ್ ಕುಕ್, ಗೂಗಲ್ ಸಿಇಒ ಸುಂದರ್ ಪಿಚೈ ಹಾಗೂ ಗೂಗಲ್ ಸಂಸ್ಥಾಪಕ ಸೆರ್ಗೆ ಬ್ರಿನ್ ಸೇರಿದಂತೆ ಹಲವು ಗಣ್ಯರು ಹಾಗೂ ಕೋಟ್ಯಾಧಿಪತಿಗಳು ಹಾಜರಿದ್ದರು. ಇನ್ನು ಅಚ್ಚರಿಯೆಂದರೆ ಟಿಕ್‌ಟಾಕ್ ಸಿಇಒ ಶೌ ಚೆವ್ ಅವರು ಸಹ ವೇದಿಕೆ ಹಂಚಿಕೊಂಡಿದ್ದರು. ಇದು ಚರ್ಚೆಗೆ ಕಾರಣವಾಗಿದೆ. ಶ್ರೀಮಂತ ಹಾಗೂ ದೊಡ್ಡ ಉದ್ಯಮಿಗಳಿಗೆ ಜಾಗ ಕೊಟ್ಟು ಅಮೆರಿಕದ ಪಾರ್ಲಿಮೆಂಟ್ ಮೆಂಬರ್‌ಗಳನ್ನೇ ಸೈಡ್‌ಲೈನ್ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.












Click it and Unblock the Notifications