ಪ್ರಧಾನಿ ನರೇಂದ್ರ ಮೋದಿಗೆ ಬೈಡನ್ ಕುಟುಂಬದ ವಿಶೇಷ ಔತಣ?
ವಾಷಿಂಗ್ಟನ್: ಪ್ರಧಾನಿ ಮೋದಿ ಅಮೆರಿಕ ಭೇಟಿಗೆ ದಿನಗಣನೆ ಆರಂಭವಾಗಿದೆ. ಅಮೆರಿಕದ ಶಕ್ತಿ ಕೇಂದ್ರ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಸಜ್ಜಾಗಿದೆ. ಈ ಸಂದರ್ಭದಲ್ಲೇ ಅಮೆರಿಕ ಅಧ್ಯಕ್ಷರ ಕುಟುಂಬ ಕೂಡ ಸರ್ಪ್ರೈಸ್ ನೀಡಿದೆ. ಪ್ರಧಾನಿ ಮೋದಿ ಅವರಿಗಾಗಿ ವಿಶೇಷ ಔತಣಕೂಟ ಆಯೋಜನೆ ಮಾಡಲು ಜೋ ಬೈಡನ್ ಫ್ಯಾಮಿಲಿ ಸಜ್ಜಾಗಿದೆ.
ಹೌದು, ಅಮೆರಿಕದ ಶ್ವೇತಭವನದಲ್ಲಿ ಆಯೋಜನೆಯಾಗಿರುವ ಸ್ಟೇಟ್ ಡಿನ್ನರ್‌ಗೆ ಮೊದಲು ಅಂದರೆ ಜೂನ್ 21 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಔತಣಕೂಟ ಆಯೋಜಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಕುಟುಂಬ ಸಿದ್ಧವಾಗಿದೆ. ಪ್ರಧಾನಿ ಮೋದಿ ಅವರನ್ನು ಬೈಡನ್ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅಧಿಕೃತವಾಗಿ ಅಮೆರಿಕ ಭೇಟಿಗೆ ಆಹ್ವಾನಿಸಿದ್ದರು. ಈ ಹಿನ್ನೆಲೆ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಜಗತ್ತಿನ ಗಮನ ಸೆಳೆಯುತ್ತಿದೆ. ಅಲ್ಲದೆ ಭಾರತದ ಶತ್ರು ರಾಷ್ಟ್ರಗಳು ಈ ಭೇಟಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಿವೆ.

ಪಿಎಂ ಮೋದಿ ಬಗ್ಗೆ ಬೈಡನ್ ಸ್ನೇಹ!
ಪ್ರಧಾನಿ ಮೋದಿ ಅವರ ಐತಿಹಾಸಿಕ ಭೇಟಿ ವೇಳೆ ಜೂನ್ 22ರಂದು ಸೌತ್ ಲಾನ್ಸ್‌ನಲ್ಲಿ ಭಾರತ ಪ್ರಧಾನಿಗೆ ಅದ್ದೂರಿ ಸ್ವಾಗತ ಸಮಾರಂಭ ಆಯೋಜಿಸಲಾಗಿದೆ. ಶ್ವೇತಭವನದ ಹುಲ್ಲುಹಾಸಿನ ಮೇಲೆ ನಡೆಯಲಿರುವ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಮೊದಲು ಪ್ರಧಾನಿ ಮೋದಿ ಅವರು ಜೋ ಬೈಡನ್ ಹಾಗೂ ಅವರ ಕುಟುಂಬದೊಂದಿಗೆ ಕೆಲವು ಕಾಲ ಸಮಯ ಕಳೆಯಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಬೈಡನ್ ಅವರು ಪ್ರಧಾನಿ ಮೋದಿ ಅವರನ್ನ ಹೊಗಳಿ ಸುದ್ದಿಯಾಗಿದ್ದರು. ಇದೀಗ ಸ್ವತಃ ಪ್ರಧಾನಿ ಮೋದಿ ಅವರನ್ನ ಜೋ ಬೈಡನ್ ತಮ್ಮ ಕುಟುಂಬದ ವಿಶೇಷ ಔತಣ ಕೂಟಕ್ಕೆ ಆಹ್ವಾನಿಸಿದ್ದಾರೆ.
ಐತಿಹಾಸಿಕ ಕ್ಷಣಕ್ಕೆ ಭಾರತ & ಅಮೆರಿಕ ಸಾಕ್ಷಿ!
ಪ್ರಧಾನಿಯಾಗಿ ಮೋದಿ ಅವರು ಅಧಿಕೃತವಾಗಿ ಅಮೆರಿಕಗೆ ಈಗ 2ನೇ ಬಾರಿಗೆ ಭೇಟಿಯನ್ನ ಕೊಡುತ್ತಿದ್ದಾರೆ. ಈ ಹಿಂದೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಕೂಡ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ 2ನೇ ಬಾರಿಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದು ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಎರಡೂ ದೇಶಗಳು ಸಾಕ್ಷಿಯಾಗಲಿವೆ. ಇನ್ನು ಅಮೆರಿಕದಲ್ಲಿ ವಾಸವಿರುವ ಭಾರತ ಮೂಲದವರು ಪಿಎಂ ಮೋದಿ ಆಗಮನಕ್ಕೆ ಕಾದು ಕುಳಿತಿದ್ದಾರೆ. ವಿಶೇಷ ವ್ಯವಸ್ಥೆ ಕೂಡ ಮಾಡಿಕೊಂಡು ಪ್ರಧಾನಿಗೆ ಭಾರತೀಯರು ವೆಲ್‌ಕಂ ಹೇಳಲಿದ್ದಾರೆ.

2024ರ ಅಧ್ಯಕ್ಷೀಯ ಚುನಾವಣೆ
ಬೈಡನ್ ಪ್ರಕಾರ ಈ ಭೇಟಿಯನ್ನು ನೋಡುವುದಾದರೆ ಮುಂಬರುವ 2024ರ ಅಧ್ಯಕ್ಷೀಯ ಚುನಾವಣೆಗೆ ಇದು ಬಹುಮುಖ್ಯ. ಏಕೆಂದರೆ ಅಮೆರಿಕದಲ್ಲಿ ನೆಲೆಸಿ, ಅಮೆರಿಕ ಪ್ರಜೆಗಳಾಗಿ ಮತದಾನದ ಹಕ್ಕು ಪಡೆದಿರುವ ಲಕ್ಷಾಂತರ ಭಾರತೀಯರು ಅಲ್ಲಿದ್ದಾರೆ. ಹೀಗಾಗಿ ಅವರ ಬೆಂಬಲ ಪಡೆಯಲು ಜೋ ಬೈಡನ್‌ಗೆ ಈ ಕಾರ್ಯಕ್ರಮ ಅತಿಮುಖ್ಯ ಎನ್ನಲಾಗಿದೆ. ಇದೇ ಕಾರಣಕ್ಕೆ ಸಕಲ ಸಿದ್ಧತೆ ನಡೆಸಿ, ಪ್ರಧಾನಿ ಮೋದಿ ಅವರನ್ನ ಬರಮಾಡಿಕೊಳ್ಳಲು ಅಮೆರಿಕ ಅಧ್ಯಕ್ಷರು ಕಾಯುತ್ತಿದ್ದಾರೆ. ಹಾಗೇ ಆಧುನಿಕ ಜಗತ್ತಿನಲ್ಲಿ ಭಾರತದ ಶಕ್ತಿ ಪ್ರದರ್ಶನ ಮತ್ತು ಆರ್ಥಿಕ ಬೆಳವಣಿಗೆಗೂ ಈ ಭೇಟಿ ಅತ್ಯಂತ ಮಹತ್ವದ್ದು.
ರಷ್ಯಾ & ಉಕ್ರೇನ್ ನಡುವೆ ಯುದ್ಧ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಅಮೆರಿಕಗೆ ನೀಡುತ್ತಿರುವ ಮೊದಲ ಭೇಟಿ ಇದು. ಹೀಗಾಗಿ ಹಲವು ಪ್ರಶ್ನೆಗಳು ಎದ್ದಿವೆ. ರಷ್ಯಾ ವಿರುದ್ಧ ಭಾರತದ ಬೆಂಬಲ ಕೇಳಲು ಅಮೆರಿಕ ಕೂಡ ಯತ್ನಿಸಬಹುದು. ಹಾಗೇ ಇತ್ತೀಚೆಗೆ ಕೆಲವು ವರದಿಗಳು ಬಂದ ಪ್ರಕಾರ, ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತವನ್ನು ನ್ಯಾಟೋ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿವೆ. ಅದರ ಬಗ್ಗೆ ಕೂಡ ಪ್ರಧಾನಿ ಮೋದಿ ಅವರ ಭೇಟಿ ವೇಳೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಆದ್ರೆ ಭಾರತ ಮಾತ್ರ ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.












Click it and Unblock the Notifications