ಬೆಂಗಳೂರು ಬಗ್ಗೆ ಭಯಪಟ್ಟ ಬರಾಕ್ ಒಬಾಮಾ!

ಶನಿವಾರ ಬ್ರೂಕ್‌ಲಿನ್‌ನ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಬರಾಕ್ ಒಬಾಮಾ, ನಮ್ಮ ಹಿಂದಿನ ತಲೆಮಾರು ಆರ್ಥಿಕವಾಗಿ ಬಲಿಷ್ಠವಾಗಿತ್ತು. ಆಗ ನಮಗೆ ಎದುರಾಳಿಗಳು ಇರಲಿಲ್ಲ. ಸದ್ಯ, ಬೀಜಿಂಗ್, ಬೆಂಗಳೂರು, ಮಾಸ್ಕೊ ಹೀಗೆ ಎಲ್ಲ ಕಡೆ ಪೈಪೋಟಿ ಎದುರಾಗುತ್ತಿದೆ ಎಂದು ಹೇಳಿದ್ದಾರೆ.
ಚೀನಾ, ಭಾರತದಂತಹ ದೇಶಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ಅವುಗಳ ಬಲವಾದ ಪೈಪೋಟಿಯನ್ನು ನಾವು ಎದುರಿಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗಣಿತ ಹಾಗೂ ತಂತ್ರಜ್ಞಾನ ವಿಷಯಗಳಲ್ಲಿ ಅವರು ನಮಗೆ ಪೈಪೋಟಿ ನೀಡಲು ಪರಿಶ್ರಮ ಪಡುತ್ತಿದ್ದಾರೆ ಎಂದು ಒಬಾಮಾ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ವಿಶ್ವದ ಇತರ ರಾಷ್ಟ್ರಗಳ ಇಂತಹ ಬೆಳವಣಿಗೆಯಿಂದಾಗಿ ಯಾರಿಗೆ ಬೇಕಾದರೂ ಉದ್ಯೋಗಾವಕಾಶ ಸಿಗಬಹುದು. ಆದ್ದರಿಂದ ಪರಿಶ್ರಮ ಪಟ್ಟು ವಿದ್ಯಾರ್ಥಿಗಳು ಓದಬೇಕು ಎಂದು ಒಬಾಮಾ ಸಲಹೆ ನೀಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ, ಚೀನಾ ಮುಂತಾದ ದೇಶಗಳಲ್ಲಿ ಹೊಸ-ಹೊಸ ಸಂಶೋಧನೆಗಳು ಆಗುತ್ತಿವೆ. ಮುಂದೆ ಅವರು ನಮ್ಮ ವಿರುದ್ಧ ಪೈಪೋಟಿ ನಡೆಸುತ್ತಾರೆ ಎಂದು ಒಬಾಮಾ ವಿಶ್ಲೇಷಿಸಿದ್ದಾರೆ. (ಬೆಂಗಳೂರಿನ ಮಕ್ಕಳನ್ನು ನೋಡಿ ಕಲ್ತುಕೊಳ್ಳಿ: ಒಬಾಮಾ)
ಇಂದಿನ ಪ್ರಪಂಚದಲ್ಲಿ ಕಂಪನಿಗಳು ಕ್ರಿಯಾಶೀಲ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸುತ್ತಿವೆ. ಅವರು ವಿಶ್ವದ ಯಾವ ರಾಷ್ಟ್ರಗಳಲ್ಲಿದ್ದರೂ, ಅವರನ್ನು ಹೆಚ್ಚಿನ ಸಂಬಳ ನೀಡಿ ಕರೆತರುತ್ತಾರೆ. ಆದ್ದರಿಂದ ಭಾರತ ಮತ್ತು ಚೀನಾದ ವಿದ್ಯಾರ್ಥಿಗಳು ಉದ್ಯೋಗ ಪಡೆಯುವಲ್ಲಿ ನಿಮಗೆ ಪೈಪೋಟಿ ನೀಡಲಿದ್ದಾರೆ ಎಂದು ಒಬಾಮಾ ಹೇಳಿದ್ದಾರೆ. (ಪಿಟಿಐ)












Click it and Unblock the Notifications