War: ತಲೆಕೆಳಗಾದ ಅಮೆರಿಕ ಲೆಕ್ಕಾಚಾರ: ರಷ್ಯಾದ ಮೇಲೆ ಡ್ರೋನ್‌ಗಳ ಸುರಿಮಳೆ!
Russia-Ukraine War: ರಷ್ಯಾ ಹಾಗೂ ಉಕ್ರೇನ್‌ನ ದೇಶದ ನಡುವೆ ಯುದ್ಧ ಜೋರಾಗಿದ್ದು. ರಷ್ಯಾದ ಮೇಲೆ ಉಕ್ರೇನ್ ಡ್ರೋನ್‌ಗಳ ಸುರಿಮಳೆಯನ್ನೇ ಸುರಿಸಿದೆ. ರಷ್ಯಾದ ರಾಜಧಾನಿ ಮಾಸ್ಕೋವನ್ನು ಗುರಿ ಮಾಡಿಕೊಂಡು ಈ ದಾಳಿಯನ್ನು ನಡೆಸಲಾಗಿದೆ. ರಷ್ಯಾದ 10ಕ್ಕೂ ಹೆಚ್ಚು ಪ್ರದೇಶಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ಮಾಡಿದೆ. ರಷ್ಯಾ ಮತ್ತು ಉಕ್ರೇನ್‌ನ ನಡುವೆ ಯುದ್ಧ ಮುಗಿಯುವ ಮುನ್ಸೂಚನೆ ಸಿಗುತ್ತಿಲ್ಲ. ಉಕ್ರೇನ್ ಮತ್ತು ಅಮೆರಿಕದ ನಡುವೆ ರಷ್ಯಾ ಹಾಗೂ ಉಕ್ರೇನ್ ಯುದ್ಧದ ವಿಚಾರವಾಗಿ ಚರ್ಚೆ ನಡೆಯುವುದಕ್ಕೆ ಕೆಲವೇ ಗಂಟೆಗಳ ಮುಂಚೆ ಈ ಬೆಳವಣಿಗೆ ನಡೆದಿದೆ. ಅಮೆರಿಕದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಈ ಯುದ್ಧವನ್ನು ಜೀವಂತವಾಗಿ ಇರಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನು ಈ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು 9ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಉಕ್ರೇನ್ ಮೂರು ವರ್ಷಗಳಲ್ಲೇ ರಷ್ಯಾದ ಮೇಲೆ ನಡೆಸಿರುವ ಅತ್ಯಂತ ದೊಡ್ಡ ಡ್ರೋನ್ ದಾಳಿ ಇದಾಗಿದೆ ಎಂದು ಹೇಳಲಾಗಿದೆ. ರಷ್ಯಾ ರಾಜಧಾನಿ ಹಾಗೂ ಸುತ್ತಮುತ್ತಲಿನ 10 ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ಮಾಡಲಾಗಿದೆ. ರಷ್ಯಾದ ವಾಯು ರಕ್ಷಣಾ ಪಡೆಗಳು ರಾತ್ರೋರಾತ್ರಿ ಉಕ್ರೇನ್‌ನ ಬರೋಬ್ಬರಿ 337 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾದ ಸೇನೆ ಹೇಳಿದೆ.

ಅಮೆರಿಕದಲ್ಲಿ ಸಭೆ ನಡೆಯಲಿದೆ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ವಿಶ್ವಕ್ಕೆ ಸಂಕಷ್ಟವನ್ನು ತಂದೊಡ್ಡಿದೆ. ವಿಶ್ವದ ಆರ್ಥಿಕತೆಯ ಮೇಲೆ ಈ ಎರಡೂ ದೇಶಗಳ ಯುದ್ಧ ಭಾರೀ ದೊಡ್ಡ ಮಟ್ಟದ ಪರಿಣಾಮವನ್ನೇ ಬೀರಿದೆ. ಅಷ್ಟು ಮಾತ್ರವಲ್ಲ, ಅಪಾರ ಸಾವು - ನೋವು ಹಾಗೂ ಆಸ್ತಿ ನಷ್ಟ ಸಹ ಆಗಿದೆ. ಇಷ್ಟಾದರೂ ಎರಡೂ ದೇಶಗಳು ಯುದ್ಧ ನಿಲ್ಲಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ರಷ್ಯಾ - ಉಕ್ರೇನ್ ಯುದ್ಧವನ್ನು ನಿಲ್ಲಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು. ಇದಕ್ಕಾಗಿ ಎರಡೂ ದೇಶಗಳ ಅಧ್ಯಕ್ಷರೊಂದಿಗೆ ಈಗಾಗಲೇ ಹಲವು ಸುತ್ತಿನ ಸಭೆಗಳು ನಡೆದಿವೆ. ಇಂದು ಮತ್ತೊಂದು ಪ್ರಮುಖ ಸಭೆ ನಡೆಯುವುದಿತ್ತು.
ರಷ್ಯಾದ ಮೇಲೆ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಮುಗಿಸುವ ನಿಟ್ಟಿನಲ್ಲಿ ಉಕ್ರೇನಿಯನ್ ನಿಯೋಗದಿಂದ ಮಂಗಳವಾರ (ಮಾರ್ಚ್ 11ಕ್ಕೆ) ಸೌದಿ ಅರೇಬಿಯಾದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕರನ್ನು ಭೇಟಿ ಮಾಡಲಿದೆ. ಈ ಭೇಟಿಯ ನಡುವೆಯೇ ಭಾರೀ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಉಕ್ರೇನ್‌ಗೆ ಯುದ್ಧವನ್ನು ನಿಲ್ಲಿಸುವ ಮನಸ್ಸು ಇಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ. ದಾಳಿಯ ಬಗ್ಗೆ ಉಕ್ರೇನ್‌ನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು apnews ವರದಿ ಮಾಡಿದೆ.
ಅಮೆರಿಕದ ಮೇಲೆ ಉಕ್ರೇನ್ ಮುನಿಸು: ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಈಚೆಗೆ ಅಮೆರಿಕದ ಶ್ವೇತ ಭವನಕ್ಕೆ ಭೇಟಿ ನೀಡಿದ್ದರು. ಆದರೆ ಆ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ವೊಲೊಡಿಮಿರ್ ಝೆಲೆನ್‌ಸ್ಕಿ ನಡುವೆ ಉತ್ತಮ ಮಾತುಕತೆ ನಡೆದಿರಲಿಲ್ಲ. ಅಲ್ಲದೆ ಉಕ್ರೇನ್‌ನ ಖನಿಜ ಸಂಪತ್ತಿನ ಪ್ರದೇಶವನ್ನು ಬಿಟ್ಟುಕೊಡುವಂತೆ ಕೇಳಿದ್ದು ಸಹ ಉಕ್ರೇನ್ ಮುನಿಸಿಗೆ ಕಾರಣವಾಗಿತ್ತು. ಇದೀಗ ಟ್ರಂಪ್ ಅವರು ಅವರ ಮಾತು ಉಳಿಸಿಕೊಳ್ಳದಂತೆ ಮಾಡಲು ಈ ರೀತಿ ಏಕಾಏಕಿ ರಷ್ಯಾದ ಮೇಲೆ ದಾಳಿ ಮಾಡಲಾಗಿದೆಯೇ ಎನ್ನುವ ಅನುಮಾನವು ಶುರುವಾಗಿದೆ.












Click it and Unblock the Notifications