ಕ್ಯೂಬಾದ ವಯೋವೃದ್ಧ ರೌಲ್ ಕ್ಯಾಸ್ಟ್ರೋ ವಿರುದ್ಧ ಕ್ರಮಕ್ಕೆ ಮುಂದಾದ ಅಮೆರಿಕ
ವಯೋವೃದ್ಧ ರೌಲ್ ಕ್ಯಾಸ್ಟ್ರೋ ವಿರುದ್ಧ ಕ್ರಮಕ್ಕೆ ಮುಂದಾದ ಅಮೆರಿಕ: ಲೇಖಕ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ.
ಹಲವಾರು ದಿನಗಳ ಊಹಾಪೋಹಗಳ ಬಳಿಕ, ಅಮೆರಿಕದ ನ್ಯಾಯಾಂಗ ಇಲಾಖೆ ಕೊನೆಗೂ ಕ್ಯೂಬಾದ ಮಾಜಿ ಅಧ್ಯಕ್ಷ, 94 ವರ್ಷ ವಯಸ್ಸಿನ ರೌಲ್ ಕ್ಯಾಸ್ಟ್ರೋ ಅವರ ವಿರುದ್ಧ ಅಧಿಕೃತವಾಗಿ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳು 1996ರ ಒಂದು ಹಳೆಯ ಘಟನೆಗೆ ಸಂಬಂಧಿಸಿದ್ದು, ಕ್ಯೂಬಾದ ಮಿಲಿಟರಿ ಆಗ ಎರಡು ನಿಶ್ಶಸ್ತ್ರ ನಾಗರಿಕ ವಿಮಾನಗಳನ್ನು ಹೊಡೆದುರುಳಿಸಿತ್ತು. ಈ ವಿಮಾನಗಳು ಬ್ರದರ್ಸ್ ಟು ದ ರೆಸ್ಕ್ಯೂ ಎನ್ನುವ, ಅಮೆರಿಕದ ಮಿಯಾಮಿ, ಫ್ಲೋರಿಡಾದ ಸ್ವಯಂಸೇವಕರ ಗುಂಪಿಗೆ ಸೇರಿತ್ತು. ಈ ಗುಂಪು ಬಹುತೇಕ ಕ್ಯೂಬನ್ ವಲಸಿಗರಿಂದಲೇ ತುಂಬಿತ್ತು. ಈ ತಂಡದ ಮುಖ್ಯ ಉದ್ದೇಶ ದ್ವೀಪ ರಾಷ್ಟ್ರವಾದ ಕ್ಯೂಬಾದಿಂದ ಪಲಾಯನಗೈಯಲು ಪ್ರಯತ್ನಿಸುವವರನ್ನು ಗುರುತಿಸಿ, ಅವರನ್ನು ಸುರಕ್ಷಿತವಾಗಿ ಅಮೆರಿಕ ತಲುಪಲು ನೆರವಾಗುವುದಾಗಿತ್ತು. ಕಾಲ ಕ್ರಮೇಣ, ಈ ಗುಂಪು ಬಹಿರಂಗವಾಗಿಯೇ ಕ್ಯೂಬನ್ ಸರ್ಕಾರವನ್ನು ಟೀಕಿಸಲಾರಂಭಿಸಿ, ಕ್ಯೂಬಾದ ಬಳಿಯೇ ಹಾರಾಟ ನಡೆಸಲಾರಂಭಿಸಿತು.

ಅಮೆರಿಕ ಈಗ ಕ್ಯೂಬಾ ಮೇಲೆ ಹೆಚ್ಚಿನ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದು, ಕ್ಯೂಬಾ ಗಂಭೀರವಾದ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗೆ ಸಿಲುಕಿ ನರಳುತ್ತಿದೆ. ಈ ಸಮಯದಲ್ಲೇ ಅಮೆರಿಕ ಕ್ಯಾಸ್ಟ್ರೋ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಬಹಳಷ್ಟು ಜನರು ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವೆಂದರೆ, ಅಮೆರಿಕ ಯಾಕೆ ಈ ಸಂದರ್ಭದಲ್ಲಿ ಕ್ರಮಕ್ಕೆ ಮುಂದಾಗಿದೆ? ಇನ್ನು ಮುಂದೆ ಏನಾಗಲಿದೆ?
America: ಯಾರೀ ರೌಲ್ ಕ್ಯಾಸ್ಟ್ರೋ?
ರೌಲ್ ಕ್ಯಾಸ್ಟ್ರೋ ಕ್ಯೂಬಾದ ಪ್ರಸಿದ್ಧ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ ಕಿರಿಯ ಸಹೋದರ. 1952ರಲ್ಲಿ ರೌಲ್ ಅಮೆರಿಕದ ಬೆಂಬಲ ಹೊಂದಿದ್ದ, ಕ್ಯೂಬಾದ ದಮನಕಾರಿ ನಾಯಕ ಫುಲ್ಜೆನ್ಸಿಯೋ ಬಾಟಿಸ್ಟ ಅವರನ್ನು ಕೆಳಗಿಳಿಸುವ ಫಿಡೆಲ್ ಕ್ಯಾಸ್ಟ್ರೋ ಹೋರಾಟಕ್ಕೆ ಜೊತೆಯಾದರು. 1953ರಲ್ಲಿ, ಬಾಟಿಸ್ಟಾ ನಿಗ್ರಹಕ್ಕೆ ಕೈಗೊಂಡ ಮೊಂಕಾಡಾ ಬಾರಕ್ಸ್ ಮೇಲಿನ ವಿಫಲ ದಾಳಿಯಲ್ಲಿ ರೌಲ್ ಭಾಗವಹಿಸಿದ್ದರು. ಈ ಘಟನೆಯಲ್ಲಿ ಬಹಳಷ್ಟು ಕ್ರಾಂತಿಕಾರಿಗಳು ಹತ್ಯೆಗೊಂಡರು, ಅಥವಾ ಬಂಧನಕ್ಕೊಳಗಾದರು. ಆದರೆ, ಈ ಘಟನೆಯ ಕಿಡಿ ಕ್ಯೂಬನ್ ಕ್ರಾಂತಿಗೆ ನಾಂದಿಯಾಯಿತು. ಬಳಿಕ ರೌಲ್ ಅವರು ಜುಲೈ 26 ಮೂವ್ಮೆಂಟ್ ಎನ್ನುವ ಗುಂಪಿನ ಸ್ಥಾಪಕ ಸದಸ್ಯರಾದರು. ಬಳಿಕ ಇದೇ ಗುಂಪು ಫಿಡೆಲ್ ಕ್ಯಾಸ್ಟ್ರೋ ಅವರನ್ನು ಅಧಿಕಾರಕ್ಕೆ ತಂದಿತು.
1958ರ ವೇಳೆಗೆ, ರೌಲ್ ಹಿರಿಯ ಮಿಲಿಟರಿ ಕಮಾಂಡರ್ ಎನಿಸಿಕೊಂಡರು. ತನ್ನ ಯೋಧರು ಮತ್ತು ಸ್ಥಳೀಯ ಹಳ್ಳಿಗಳ ಮೇಲೆ ನಡೆಯುತ್ತಿದ್ದ ದಾಳಿಗಳನ್ನು ತಡೆಗಟ್ಟಲು ರೌಲ್ 50 ಯುಎಸ್ ಮರೀನ್‌ಗಳನ್ನು ಬಂಧಿಸಿದಾಗ ಅಮೆರಿಕದ ಗಮನ ರೌಲ್ ಅವರತ್ತ ಹರಿಯಿತು. ಇದು ರೌಲ್ ಜೀವನದಲ್ಲಿ ಒಂದು ಮಹತ್ವದ ತಿರುವಾಗಿತ್ತು. ಅವರು ಕೇವಲ ಫಿಡೆಲ್ ಕ್ಯಾಸ್ಟ್ರೋ ತಮ್ಮನಾಗಿ ಗುರುತಿಸಿಕೊಳ್ಳುವುದು ಮಾತ್ರವಲ್ಲದೆ, ತಾನೂ ಓರ್ವ ನಾಯಕನಾಗಿ ಹೊರಹೊಮ್ಮಿದ್ದರು. 1959ರಲ್ಲಿ ರೌಲ್ ಕ್ಯಾಸ್ಟ್ರೋ ಕ್ಯೂಬಾದ ರಕ್ಷಣಾ ಸಚಿವರಾಗಿ ನೇಮಕಗೊಂಡು, ಹಲವಾರು ದಶಕಗಳ ಕಾಲ ಕ್ಯೂಬಾದ ಮಿಲಿಟರಿಯ ಮುಖವಾಗಿದ್ದರು. 1961ರಲ್ಲಿ, ಅಮೆರಿಕದ ಬೆಂಬಲ ಹೊಂದಿದ್ದ ಅಂದಾಜು 1,400 ಕ್ಯೂಬನ್ ವಲಸಿಗರು ಕ್ಯೂಬಾ ಮೇಲೆ ಬೇ ಆಫ್ ಪಿಗ್ಸ್ ಎಂಬಲ್ಲಿ ದಾಳಿ ನಡೆಸಿದರು. ಆಗ ರೌಲ್ ಪಡೆಗಳು ಅವರನ್ನು ಮಣಿಸಿ, ಕ್ಯೂಬಾಗೆ ಮಹತ್ವದ ಗೆಲುವು ಸಂಪಾದಿಸಿದವು.
ರೌಲ್ 1976ರಲ್ಲಿ ಕ್ಯೂಬಾದ ಉಪಾಧ್ಯಕ್ಷರಾಗಿ ನೇಮಕಗೊಂಡರು. ಬಳಿಕ, 2008ರಲ್ಲಿ ವಯಸ್ಸಾಗುತ್ತಿದ್ದ ತನ್ನ ಅಣ್ಣ ಫಿಡೆಲ್‌ರಿಂದ ಅಧಿಕಾರ ವಹಿಸಿಕೊಂಡು, 2019ರ ತನಕವೂ ಕ್ಯೂಬಾದ ಅಧ್ಯಕ್ಷರಾಗಿ ಮುಂದುವರಿದರು. 2021ರ ತನಕವೂ ಕಮ್ಯುನಿಸ್ಟ್ ಪಕ್ಷದ ನೇತೃತ್ವ ವಹಿಸಿದ್ದ ರೌಲ್, ಇಂದಿಗೂ ಕ್ಯೂಬಾದಲ್ಲಿ ಓರ್ವ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಆದರೆ, ಕ್ಯೂಬಾ ವಿರೋಧ ಪಕ್ಷಗಳಿಗೆ ಮುಕ್ತವಾಗಿ ಕಾರ್ಯಾಚರಿಸಲು ಅವಕಾಶ ಇಲ್ಲದ ದೇಶ ಎಂದೇ ಪರಿಗಣಿತವಾಗಿದೆ. 2003ರಲ್ಲಿ, 'ಬ್ಲ್ಯಾಕ್ ಸ್ಪ್ರಿಂಗ್' ಎಂದೇ ಪ್ರಸಿದ್ಧವಾದ ಒಂದು ಘಟನೆಯಲ್ಲಿ ಕ್ಯೂಬನ್ ಸರ್ಕಾರ ಜೋಸ್ ಡೇನಿಯಲ್ ಫೆರೆರ್ ಸೇರಿದಂತೆ ಬಹಳಷ್ಟು ಪ್ರಜಾಪ್ರಭುತ್ವ ಪರ ಹೋರಾಟಗಾರರನ್ನು ಬಂಧಿಸಿತು.
ರೌಲ್ ಮೇಲಿರುವ ಆರೋಪಗಳೇನು?
ಕ್ಯೂಬಾ 1960ರಿಂದಲೂ ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಲೇ ಬಂದಿದೆ. ಇದು ಕ್ಯೂಬಾದ ವ್ಯಾಪಾರಕ್ಕೆ ಭಾರೀ ಹೊಡೆತ ನೀಡಿದೆ. ಶೀತಲ ಸಮರದ ಸಂದರ್ಭದಲ್ಲಿ, ಕ್ಯೂಬಾ ತನ್ನ ಇಂಧನ ಮತ್ತು ಹಣಕ್ಕಾಗಿ ಸೋವಿಯತ್ ಒಕ್ಕೂಟದ ಮೇಲೆ ಅಪಾರ ಅವಲಂಬನೆ ಹೊಂದಿತ್ತು. 1991ರಲ್ಲಿ ಸೋವಿಯತ್ ಒಕ್ಕೂಟ ಪತನಗೊಂಡಾಗ, ಕ್ಯೂಬಾ 'ಸ್ಪೆಷಲ್ ಪೀರಿಯಡ್' (ವಿಶೇಷ ಅವಧಿ) ಎಂದು ಕರೆಯಲ್ಪಟ್ಟ ಗಂಭೀರ ಬಿಕ್ಕಟ್ಟಿಗೆ ಸಿಲುಕಿತು. ಈ ಸಮಯದಲ್ಲಿ ಇಂಧನ ಕೊರತೆ, ಆಹಾರ ಸಮಸ್ಯೆ, ಮತ್ತು ಜನರು ದ್ವೀಪರಾಷ್ಟ್ರದಿಂದ ಪಲಾಯನಗೈಯುವುದು ಉಂಟಾಗಿತ್ತು. ಫ್ಲೋರಿಡಾ ತಲುಪುವ ಉದ್ದೇಶದಿಂದ ಸಾವಿರಾರು ಕ್ಯೂಬನ್ನರು ಅಸುರಕ್ಷಿತ ಬೋಟ್‌ಗಳನ್ನು ಏರಿ ಪಲಾಯನ ನಡೆಸಿದರು. ದುರದೃಷ್ಟವಶಾತ್ ಅವರಲ್ಲಿ ಬಹಳಷ್ಟು ಜನರು ಸಮುದ್ರದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡದ್ದು ಈಗ ಇತಿಹಾಸ.
ಜೋಸ್ ಬಾಸುಲ್ಟೋ ನೇತೃತ್ವದ ವಲಸಿಗರ ಗುಂಪೊಂದು ಸಮುದ್ರದ ಮೇಲೆ ಹಾರಾಟ ನಡೆಸುತ್ತಾ, ಸಮುದ್ರದಲ್ಲಿ ಸಿಲುಕಿರುವ ಜನರನ್ನು ಪತ್ತೆಹಚ್ಚಿ, ಅವರ ಮಾಹಿತಿಗಳನ್ನು ಅಮೆರಿಕದ ಕೋಸ್ಟ್ ಗಾರ್ಡ್‌ಗೆ ಒದಗಿಸಿ, ಅವರನ್ನು ರಕ್ಷಿಸಲು ನೆರವಾಗುತ್ತಿತ್ತು. ಆದರೆ, ಈ ವಿಮಾನಗಳು ಕೇವಲ ರಕ್ಷಣೆಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಕೆಲವೊಂದು ಬಾರಿ ಈ ವಿಮಾನಗಳು ಕ್ಯೂಬಾದ ವಾಯು ಪ್ರದೇಶದ ಒಳಗೆ ಪ್ರವೇಶಿಸಿ, ಎಚ್ಚರಿಕೆಗಳನ್ನು ತಿರಸ್ಕರಿಸಿ, ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಬೆಂಬಲಿಸುವ ಕರಪತ್ರಗಳನ್ನು ಕೆಳಗೆ ಚೆಲ್ಲತೊಡಗಿದವು. ಫೆಬ್ರವರಿ 24, 1996ರಂದು, ಕ್ಯೂಬನ್ ಮಿಲಿಟರಿ ಇಂತಹ ಎರಡು ವಿಮಾನಗಳನ್ನು ಹೊಡೆದುರುಳಿಸಿ, ಅದರಲ್ಲಿದ್ದ ನಾಲ್ಕೂ ಸಿಬ್ಬಂದಿಗಳ ಹತ್ಯೆಗೈದಿತು. ಈಗ, ಘಟನೆ ನಡೆದು ಬಹುತೇಕ 30 ವರ್ಷಗಳ ಬಳಿಕ, ಅಮೆರಿಕ ಆ ಕಾಲದಲ್ಲಿ ಕ್ಯೂಬಾದ ರಕ್ಷಣಾ ಸಚಿವರಾಗಿದ್ದ ರೌಲ್ ಕ್ಯಾಸ್ಟ್ರೋ ಮತ್ತು ಇತರ ಆರು ಜನರು ಮೂವರು ಅಮೆರಿಕನ್ನರು ಸೇರಿದಂತೆ, ವಿಮಾನದ ಸಿಬ್ಬಂದಿಯ ಸಾವಿಗೆ ಕಾರಣ ಎಂದು ಆರೋಪಿಸಿದೆ. ಅಮೆರಿಕದ ಅಟಾರ್ನಿ ವರ್ಷಗಳು ಕಳೆದ ಮಾತ್ರಕ್ಕೆ ಹತ್ಯೆಯ ಜವಾಬ್ದಾರಿಯನ್ನು ಅಳಿಸಿ ಹಾಕುವುದಿಲ್ಲ ಎಂದು ವಾದಿಸಿದೆ.
ಅಮೆರಿಕ ಈಗ ಕ್ರಮ ಕೈಗೊಳ್ಳುತ್ತಿರುವುದೇಕೆ?
ಕ್ಯೂಬಾ ಈಗ ಮತ್ತೆ ಅಮೆರಿಕದ ಅಸಾಧಾರಣ ಒತ್ತಡಕ್ಕೆ ಸಿಲುಕಿದೆ. ಕ್ಯೂಬಾದ ಅತಿದೊಡ್ಡ ಇಂಧನ ಪೂರೈಕೆದಾರ ರಾಷ್ಟ್ರವಾದ ವೆನೆಜುವೆಲಾದ ಅಧ್ಯಕ್ಷ ನಿಕೊಲಾಸ್ ಮಡುರೊ ಅವರನ್ನು ಜನವರಿಯಲ್ಲಿ ಅಮೆರಿಕ ಬಂಧಿಸಿದ ಬಳಿಕ ಕ್ಯೂಬಾದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ವೆನೆಜುವೆಲಾದ ನೂತನ ಸರ್ಕಾರದ ಮೇಲೆ ಕ್ಯೂಬಾಗೆ ತೈಲ ಪೂರೈಕೆ ಮಾಡದಂತೆ ಒತ್ತಡ ಹೇರಲಾಗಿದೆ. ಇನ್ನು ಮೆಕ್ಸಿಕೋದಂತಹ ದೇಶಗಳಿಗೂ ಕ್ಯೂಬಾಗೆ ನೆರವಾದರೆ ನಿರ್ಬಂಧ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಮೇ 14ರ ಗುರುವಾರದಂದು, ಕ್ಯೂಬಾ ತನ್ನ ಪೆಟ್ರೋಲ್ ಮತ್ತು ಡೀಸೆಲ್ ಸಂಪೂರ್ಣವಾಗಿ ಬರಿದಾಗಿದೆ ಎಂದು ಘೋಷಿಸಿತು. ಇದೇ ವೇಳೆ, ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ 2025ರಲ್ಲಿ ಕ್ಯೂಬಾದ ಬಹುತೇಕ ನಾಗರಿಕರು ಸಾಕಷ್ಟು ಆಹಾರ ಮತ್ತು ಔಷಧಗಳ ಕೊರತೆಯಿಂದ ನರಳುತ್ತಿದ್ದರು ಎಂದು ವರದಿ ಮಾಡಿದೆ.
ಇತ್ತೀಚೆಗೆ, ಸಿಐಎ ನಿರ್ದೇಶಕರಾದ ಜಾನ್ ರಾಟ್‌ಕ್ಲಿಫ್ ಅವರು ಕ್ಯೂಬಾದ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿದ್ದು, ಇದು ಸಂಭಾವ್ಯ ಸರ್ಕಾರ ಬದಲಾವಣೆಯ ಸಂಕೇತವಾಗಿರಬಹುದೇ ಎಂದು ಅಂದಾಜಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಕ್ಯೂಬಾ ಕುರಿತು ಮಾತನಾಡಿದ್ದು, ಜನರು ಈ ಕ್ಷಣಕ್ಕಾಗಿ ಬಹುತೇಕ 65 ವರ್ಷ ಕಾದಿದ್ದರು ಎಂದಿದ್ದಾರೆ. ಫ್ಲೋರಿಡಾದಲ್ಲಿರುವ ಕ್ಯೂಬನ್ ಅಮೆರಿಕನ್ನರು 1960ರ ದಶಕದಿಂದಲೂ ಕ್ಯಾಸ್ಟ್ರೋ ನಾಯಕತ್ವವನ್ನು ಕೆಳಗಿಳಿಸಲು ಆಗ್ರಹಿಸುತ್ತಲೇ ಬಂದಿದ್ದರು.
ಅಂತಿಮವಾಗಿ, ಈ ಪ್ರಕರಣ ಕೇವಲ ಒಂದು ಘಟನೆಗೆ ನ್ಯಾಯ ನೀಡುವುದಕ್ಕೆ ಸಂಬಂಧಿಸಿದ್ದಲ್ಲ. ಇದು ಫ್ಲೋರಿಡಾದ ರಾಜಕಾರಣ ಮತ್ತು ಕ್ಯೂಬಾದಲ್ಲಿನ ಬದಲಾವಣೆಯ ಕುರಿತು ಹೆಚ್ಚುತ್ತಿರುವ ಮಾತುಕತೆಗಳಿಗೆ ಆಳವಾದ ಸಂಬಂಧ ಹೊಂದಿದೆ. ಕ್ಯೂಬಾವನ್ನು ಅಮೆರಿಕ ಕಳೆದ 67 ವರ್ಷಗಳಿಂದ ತನ್ನ ಪ್ರಮುಖ ಎದುರಾಳಿಯಾಗಿ ಪರಿಗಣಿಸಿದೆ.
ಗಿರೀಶ್ ಲಿಂಗಣ್ಣ ಪರಿಚಯ
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected]












Click it and Unblock the Notifications