3ನೇ ಮಹಾಯುದ್ಧ ಫಿಕ್ಸ್? ಇಸ್ರೇಲ್ ವಿರುದ್ಧ ಇರಾನ್ ದಾಳಿ?
ಇರಾನ್ & ಅಮೆರಿಕ ನಡುವಿನ ವೈರತ್ವ ಜೋರಾಗಿದ್ದು, ಇಸ್ರೇಲ್ ವಿರುದ್ಧ ಕೂಡ ಇರಾನ್ ಗರಂ ಆಗಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಇರಾನ್ ಸೇನೆ ದಾಳಿ ಮಾಡುವ ಸಾಧ್ಯತೆ ಇದ್ದು, ಅಲರ್ಟ್ ಆಗಿರಿ ಎಂದು ಇದೀಗ ಅಮೆರಿಕ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ. ಹಾಗಾದ್ರೆ ಇಸ್ರೇಲ್ ವಿರುದ್ಧ ದಿಢೀರ್ ದಾಳಿ ಮಾಡಲು ಇರಾನ್ ಮುಂದಾಗಿದ್ದು ಏಕೆ?
ಇರಾನ್ ಸೇನೆ ಕೊತ ಕೊತ ಕುದಿಯುತ್ತಿದ್ದು, ಅಮೆರಿಕದ ಹೆಸರು ಕೇಳಿದರೆ ಸಾಕು ಬೆಂಕಿಯ ಕಿಡಿಯನ್ನೇ ಉಗುಳುತ್ತದೆ. ಹೀಗಿದ್ದಾಗ ಇತ್ತೀಚೆಗಷ್ಟೇ ಇರಾನ್ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಿತ್ತು ಇಸ್ರೇಲ್ ಎಂಬ ಆರೋಪ ಕೇಳಿಬಂದಿತ್ತು. ಹತ್ತಾರು ಜನ ಇರಾನ್ ಸೇನಾ ಅಧಿಕಾರಿಗಳು ಈ ದಾಳಿಗೆ ಬಲಿಯಾಗಿದ್ದರು. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲಿ ಈಗ ದಿಢೀರ್ ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡುವ ಮುನ್ನೆಚ್ಚರಿಕೆ ನೀಡಲಾಗಿದೆ. ಇದು ಭಯದ ವಾತಾವರಣ ಸೃಷ್ಟಿ ಮಾಡಿದೆ.

ಇರಾನ್‌ಗೆ ಅಮೆರಿಕ ವಾರ್ನಿಂಗ್!
ಅಂದಹಾಗೆ ಇದೀಗ ಖುದ್ದು ಅಮೆರಿಕದ ಅಧ್ಯಕ್ಷರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಸೂಕ್ಷ್ಮ ವಾತಾವರಣ ಸೃಷ್ಟಿ ಮಾಡಿದ್ದು, ಇಸ್ರೇಲ್ ಮೇಲೆ ಇರಾನ್ ಬೇಗನೇ ದಾಳಿ ನಡೆಸುವ ಸಾಧ್ಯತೆ ಇದೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್. ಯುದ್ಧಕ್ಕೆ ಮುಂದಾಗಬೇಡಿ ಎಂಬ ಎಚ್ಚರಿಕೆ ಸಂದೇಶವನ್ನೂ ಇರಾನ್‌ಗೆ ನೀಡಿದ್ದಾರೆ ಬೈಡನ್. ಈ ಮೂಲಕ ಇಬ್ಬರ ನಡುವೆ, ಭಾರಿ ದೊಡ್ಡ ಕಿರಿಕ್ ಶುರುವಾದಂತೆ ಕಾಣುತ್ತಿದೆ. ಹಾಗೇ ಹಮಾಸ್ ವಿರುದ್ಧ ಹೋರಾಡುತ್ತಾ ಸುಸ್ತಾಗಿರುವ ಇಸ್ರೇಲ್‌ಗೆ ಈ ಸುದ್ದಿ ಮತ್ತೊಂದು ಆಘಾತವನ್ನೂ ನೀಡುತ್ತಿದೆ.
ಮತ್ತೊಂದು ಕಡೆ ಇಸ್ರೇಲ್ ಪರ ಬ್ಯಾಟ್ ಬೀಸಿರುವ ಅಮೆರಿಕ ಅಧ್ಯಕ್ಷ ಬೈಡನ್, ಯುದ್ಧದಲ್ಲಿ ಇಸ್ರೇಲ್ ಪರ ನಮ್ಮ ಬೆಂಬಲ ಇರಲಿದೆ. ಇಸ್ರೇಲ್‌ಗೆ ಬೇಕಾದ ಎಲ್ಲ ಸಹಾಯ ಮಾಡಲಿದ್ದೇವೆ. ಯುದ್ಧ ನಡೆಸಿದರೆ ಇರಾನ್ ಗೆಲುವು ಪಡೆಯಲು ಆಗಲ್ಲ ಎಂದಿದ್ದಾರೆ. ಹಾಗಾದ್ರೆ ಇಷ್ಟು ದ್ವೇಷ ಶುರುವಾಗಿದ್ದು ಏಕೆ? ಈಗ ಇರಾನ್ ಸೇನೆ ಇಸ್ರೇಲ್ ವಿರುದ್ಧ ಭೀಕರ ದಾಳಿ ಮಾಡಲು ಸ್ಕೆಚ್ ಹಾಕಿರುವುದು ಏಕೆ? ಮುಂದೆ ಓದಿ.
ಬೆಂಕಿ ಹೊತ್ತಿಕೊಂಡಿದ್ದು ಹೀಗೆ...
ಅಂದಹಾಗೆ ಡಮಾಸ್ಕಸ್‌ನಲ್ಲಿರುವ, ಇರಾನ್ ರಾಯಭಾರ ಕಚೇರಿ ಮೇಲೆ ಏಪ್ರಿಲ್ 1 ರಂದು ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್ ಅಟ್ಟಹಾಸ ಮೆರೆದಿದೆ ಎಂದು ಇರಾನ್ ಆರೋಪಿಸಿತ್ತು. ಡಮಾಸ್ಕಸ್ ಮೇಲೆ ಇಸ್ರೇಲ್ ದಾಳಿ ಮಾಡಿದಾಗ, ಇರಾನ್ ಸೇನಾಧಿಕಾರಿಗಳು ಸೇರಿ ಹಲವು ಇರಾನ್ ಅಧಿಕಾರಿಗಳು ಜೀವ ಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿ ಆಕ್ರೋಶ ಹೊರಹಾಕಿತ್ತು ಇರಾನ್. ಹೀಗೆ ಡಮಾಸ್ಕಸ್ ದಾಳಿಗೆ, ನೇರ ಪ್ರತಿಕ್ರಿಯೆ ನೀಡೋಕೆ ಇರಾನ್ ಸಿದ್ಧತೆ ಆರಂಭಿಸಿದೆ ಎನ್ನಲಾಗಿದೆ. ಹಾಗೇ ಸಶಸ್ತ್ರ ಪಡೆಗೆ ಸಂಪೂರ್ಣ ಸಿದ್ಧವಾಗಿರಲು ಸೂಚಿಸಿರುವುದು ಕೂಡ ಭಯ ಹೆಚ್ಚಿಸಿದೆ. ಹೀಗಾಗಿ ಅಮೆರಿಕ ಸಂಭಾವ್ಯ ದಾಳಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ.












Click it and Unblock the Notifications