Russia & Ukraine: 1,500ಕ್ಕೂ ಹೆಚ್ಚು ಬಾರಿ ಉಕ್ರೇನ್ ವಿರುದ್ಧ ರಷ್ಯಾ ವಾಯುದಾಳಿ?
ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವುದು ಒಂದೇ, ಭೂಮಿ ಮೇಲೆ ಸೂರ್ಯ ಪಶ್ಚಿಮ ದಿಕ್ಕಿಗೆ ಹುಟ್ಟುವುದೂ ಒಂದೇ... ಅರೆರೆ ಯಾಕಪ್ಪಾ ಈ ಮಾತು? ಅಂತಾ ನಿಮಗೆ ಪ್ರಶ್ನೆ ಮೂಡಿದೆ ಅಂತಾ ಕಾಣುತ್ತೆ, ಅಂದಹಾಗೆ ಈ ರೀತಿ ಹೇಳಲು ಕಾರಣ ಆಗಿರುವುದು ರಷ್ಯಾ & ಉಕ್ರೇನ್‌ನ ನಾಯಕರ ನಡುವೆ ಇರುವ ಮೊಂಡುತನ. ಯಾರ ಮಾತಿಗೂ ಬಗ್ಗದೆ ಯುದ್ಧ ಮುಂದುವರಿಸಿ ತಮ್ಮ ಹಠ ಪ್ರದರ್ಶನ ಮಾಡುತ್ತಿವೆ ರಷ್ಯಾ & ಉಕ್ರೇನ್ ಸೇನೆಗಳು.
ಇದೇ ಮೊಂಡುತನ ಇದೀಗ ಜಾಗತಿಕ ಆತಂಕಕ್ಕೆ ಕಾರಣವಾಗುವ ಜೊತೆಗೆ 3ನೇ ಮಹಾಯುದ್ಧದ ಭಯ ಕೂಡ ಹುಟ್ಟಿಸಿದೆ. ಅದರಲ್ಲೂ ಕಳೆದ ಕೆಲವೇ ದಿನಗಳ ಅಂತರದಲ್ಲಿ 1,500ಕ್ಕೂ ಹೆಚ್ಚು ಬಾರಿ ಉಕ್ರೇನ್ ವಿರುದ್ಧ ರಷ್ಯಾ ವಾಯುದಾಳಿ ನಡೆಸಿದೆಯಂತೆ. ಇದು ಸಾಲದು ಎನ್ನವಂತೆ, ರಷ್ಯಾ ನಡೆಸಿರುವ ದಾಳಿಗೆ ರಿವೇಂಜ್ ತೆಗೆದುಕೊಳ್ಳಲು ಉಕ್ರೇನ್ ಮುನ್ನುಗ್ಗುತ್ತಿರುವ ಆರೋಪ ಕೇಳಿ ಬಂದಿದೆ!

ರಷ್ಯಾ ವಾಯುದಾಳಿಗೆ ಬೆಚ್ಚಿದ ಉಕ್ರೇನ್!
ಉಕ್ರೇನ್ ಪರಿಸ್ಥಿತಿ ಏನಾಗಿದೆ ಅಂದ್ರೆ ಒಂದು ಕಡೆ ಯುದ್ಧ ನಿಲ್ಲಿಸಿ ನೆಮ್ಮದಿಯಾಗಿ ಬದುಕುವ ಅವಕಾಶ ಕೂಡ ಸಿಗುತ್ತಿಲ್ಲ, ಇನ್ನೊಂದು ಕಡೆ ರಷ್ಯಾ ವಿರುದ್ಧ ಗಟ್ಟಿಯಾಗಿ ನಿಂತು ಫೈಟಿಂಗ್ ಮಾಡಲು ಅವಕಾಶ ಕೂಡ ಸಿಗುತ್ತಿಲ್ಲ. ಕೈಯಲ್ಲಿ ಕಾಸು ಇಲ್ಲ, ಹೋರಾಡಲು ಶಸ್ತ್ರಾಸ್ತ್ರವೂ ಇಲ್ಲ. ಹೀಗಾಗಿ ರಣರಂಗದಲ್ಲಿ ವಿಲವಿಲ ಒದ್ದಾಡುತ್ತಿದೆ ಉಕ್ರೇನ್ ಮಿಲಿಟರಿ. ಇದೇ ವೇಳೆ, ರಷ್ಯಾ ವಿರುದ್ಧ ಕ್ಷಿಪಣಿಗಳನ್ನ ಬಳಸಿ ದಾಳಿ ಮಾಡಿ ಉಕ್ರೇನ್ ಮತ್ತೊಂದು ಸಂಕಷ್ಟಕ್ಕೆ ಈಗ ಸಿಲುಕಿದೆ.
ಹೌದು, ಯಾವಾಗ ಉಕ್ರೇನ್ ಸೇನೆ ರಷ್ಯಾ ವಿರುದ್ಧ ಕ್ಷಿಪಣಿಗಳನ್ನ ಬಳಕೆ ಮಾಡಿ ದಾಳಿಯ ಮಾಡಿತ್ತೋ ಆಗಲೇ ನೋಡಿ ಶುರುವಾಗಿದ್ದು ದೊಡ್ಡ ಸಮಸ್ಯೆ. ಉಕ್ರೇನ್ ಮಾಡಿದ ತಪ್ಪಿಗೆ ರಷ್ಯಾ ಈಗ ಶಿಕ್ಷೆ ನೀಡುತ್ತಿದೆ. ರಷ್ಯಾ ಸೇನೆ ತನ್ನಲ್ಲಿ ಇರುವ ಭಯಾನಕ ಅಸ್ತ್ರಗಳನ್ನ ಈಗ ಯಾವುದೇ ಮುಲಾಜು ನೋಡದೆ ಉಕ್ರೇನ್ ವಿರುದ್ಧ ಬಳಕೆ ಮಾಡುತ್ತಿದೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ರಷ್ಯಾ ಮಿಲಿಟರಿ ಉಕ್ರೇನ್ ವಿರುದ್ಧ ದಾಳಿ ಮಾಡುತ್ತಿದೆ. ಹೀಗಿದ್ದಾಗ, ಕಳೆದ ಕೆಲವೇ ದಿನಗಳ ಅಂತರದಲ್ಲಿ 1,500ಕ್ಕೂ ಹೆಚ್ಚು ಬಾರಿ ಉಕ್ರೇನ್ ವಿರುದ್ಧ ರಷ್ಯಾ ವಾಯುದಾಳಿ ನಡೆಸಿದೆಯಂತೆ.
ಡೊನಾಲ್ಡ್ ಟ್ರಂಪ್ ಬಂದರೆ ಯುದ್ಧ ನಿಲ್ಲುತ್ತಾ?
ಒಟ್ನಲ್ಲಿ ಆದಷ್ಟು ಬೇಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲದೇ ಹೋದರೆ ಮುಂದಿನ ಪರಿಸ್ಥಿತಿ ಊಹೆಗೂ ನಿಲುಕುವುದಿಲ್ಲ. ಯಾಕಂದ್ರೆ ರಷ್ಯಾ ತನ್ನ ಬಳಿ ಇರುವ ಎಲ್ಲಾ ಅಸ್ತ್ರಗಳನ್ನೂ ಈ ಸಮಯದಲ್ಲಿ ಉಕ್ರೇನ್ ವಿರುದ್ಧ ಬಳಕೆ ಮಾಡಲು ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಈ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧಿಕಾರ ವಹಿಸಿಕೊಂಡ ನಂತರ ಎಲ್ಲವೂ ನಿರ್ಧಾರ ಆಗುವ ನಿರೀಕ್ಷೆ ಇದೆ.












Click it and Unblock the Notifications