ಅಮೆರಿಕ ಬಿಡೋದೆಲ್ಲಾ ಓಳು? ಕೇಳೋರಿಲ್ಲ ಉಕ್ರೇನ್ ಗೋಳು!
ಕೀವ್, ಉಕ್ರೇನ್: ಜಗತ್ತಿನಲ್ಲಿ ಎಲ್ಲೇ ಬೆಂಕಿ ಬಿದ್ದರೂ ಅಲ್ಲಿ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನ ಅಮೆರಿಕದ ನಾಯಕರು ಮಾಡುತ್ತಾರೆ ಎನ್ನುವ ಆರೋಪವಿದೆ. ಈ ಆರೋಪಕ್ಕೆ ಪೂರಕವಾಗಿ ಘಟನೆಯೊಂದು ನಡೆದಿದ್ದು ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಅಮೆರಿಕ ಓಳು ಬಿಟ್ಟಿದೆಯಾ? ಎಂಬ ಅನುಮಾನ ಜಗತ್ತನ್ನ ಕಾಡುತ್ತಿದೆ. ಬನ್ನಿ ಅಮೆರಿಕದ ಓಳಿನ ಆರೋಪದ ಕಥೆ ತಿಳಿಯೋಣ.
ರಷ್ಯಾ ಮತ್ತು ಅಮೆರಿಕ ಶಾಶ್ವತ ಶತ್ರುಗಳು. ಯಾವಾಗ ರಷ್ಯಾನ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಹುದು? ಎಂಬ ಲೆಕ್ಕಾಚಾರದಲ್ಲೇ ಅಮೆರಿಕ ಕಾಯ್ತಿದೆ. ಆದರೆ ಪುಟಿನ್ ಆಡಳಿತ ಅಮೆರಿಕದ ಈ ಆಸೆಗೆ ಅಡ್ಡಿಯಾಗಿ ನಿಂತಿದೆ. ಈ ಸಂದರ್ಭದಲ್ಲಿ ರಷ್ಯಾದ ಮಿಸೈಲ್ ಮತ್ತು ಯುದ್ಧ ವಿಮಾನಗಳನ್ನ ಅಮೆರಿಕ ತಯಾರಿಸಿರುವ ಅಸ್ತ್ರ ಪುಡಿ ಪುಡಿ ಮಾಡ್ತಿದೆ. ಎಂದು ಅಮೆರಿಕ ಹೇಳಿತ್ತು. ಆದ್ರೆ ಈಗ ಆ ಮಾತು ಸುಳ್ಳು ಉಕ್ರೇನ್ ಸೇನೆ ರಷ್ಯಾಗೆ ಸೇರಿದ ಯಾವುದೇ ಯುದ್ಧ ವಿಮಾನ ಉರುಳಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹಾಗಾದ್ರೆ ಅಮೆರಿಕ ಸುಳ್ಳು ಹೇಳಿತ್ತಾ?
ಅಷ್ಟಕ್ಕೂ ಮೇ 19 ರಂದು ಇಂತಹ ಒಂದು ಮಾತು ಕೇಳಿಬಂದಿತ್ತು. ಅಮೆರಿಕ ನಿರ್ಮಿತ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆ ಬಳಸಿಕೊಂಡು ಉಕ್ರೇನ್ ಪಡೆಗಳು ಇತ್ತೀಚೆಗೆ ರಷ್ಯಾದ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ಹೇಳಲಾಗಿತ್ತು. ಆದರೆ ಈಗ ಅದು ಸುಳ್ಳು ಎಂಬ ಆರೋಪವು ಕೇಳಿಬಂದಿದ್ದು, ಜಗತ್ತಿನಾದ್ಯಂತ ಇದೇ ವಿಚಾರದ ಬಗ್ಗೆ ಚರ್ಚೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ರಷ್ಯಾ ತನ್ನ ದಾಳಿ ಮತ್ತಷ್ಟು ತೀವ್ರಗೊಳಿಸಿದೆ ಹಾಗೂ ಉಕ್ರೇನ್ ಮೇಲೆ ಮಿಸೈಲ್, ಯುದ್ಧ ವಿಮಾನಗಳ ಮೂಲಕ ಡೆಡ್ಲಿ ಅಟ್ಯಾಕ್ ನಡೆಸುತ್ತಿದೆ.
ರಷ್ಯಾ ತಂತ್ರಕ್ಕೆ ಅಮೆರಿಕದ ಆಟ?
ಅದ್ಯಾವ ಘಳಿಗೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಶುರುವಾಯ್ತೋ ಗೊತ್ತಿಲ್ಲ, ಇಂದಿಗೆ 452ನೇ ದಿನವನ್ನ ಪೂರೈಸಿದೆ ಭೀಕರ ಕಾಳಗ. ರಷ್ಯಾ ಮಿಲಿಟರಿ ವಿಚಾರದಲ್ಲಿ ಎಷ್ಟು ಗಟ್ಟಿಮುಟ್ಟು ಎಂಬುದು ಎಲ್ಲರಿಗೂ ಗೊತ್ತು. ಮನಸ್ಸು ಮಾಡಿದರೆ ಉಕ್ರೇನ್ ಉಡೀಸ್ ಆಗುತ್ತೆ. ಆದರೂ ಉಕ್ರೇನ್ ಯುದ್ಧದಲ್ಲಿ (Russia Ukraine War) ಹಿನ್ನಡೆ ಆದ ರೀತಿ ನಟಿಸುತ್ತಾ, ಪುಟಿನ್ ದೊಡ್ಡ ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಇದೇ ಹೊತ್ತಲ್ಲಿ ಅಮೆರಿಕ ಕೂಡ ಹೊಸ ಅಸ್ತ್ರ ಪ್ರಯೋಗಿಸಿತ್ತು, ಆದರೆ ಅದು ಸುಳ್ಳು ಎಂಬ ಆರೋಪ ಈಗ ಕೇಳಿಬಂದಿದೆ.

ಅಮೆರಿಕದ ಕುತಂತ್ರ ಇದೆಯಾ?
ರಷ್ಯಾ ಒಂದನ್ನ ಮುಗಿಸಿದರೆ ಅಮೆರಿಕ ವಿರುದ್ಧ ಮಾತನಾಡುವ ಯಾವುದೇ ದೇಶ ಇರಲಾರದು. ಚೀನಾಗೆ ಆಘಾತ ನೀಡಿ ತಾನೇ ಪವರ್‌ಫುಲ್ ಆಗೋಕೆ ಅಮೆರಿಕ ತಂತ್ರ ನಡೆಸುತ್ತಿದೆ ಎಂಬ ಗಂಭೀರ ಆರೋಪವಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ನಡೆದುಕೊಳ್ಳುತ್ತಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ತನಗೇನೂ ಆಗದಿದ್ರು ಮೂಗು ತೂರಿಸಿ, ಉಕ್ರೇನ್‌ಗೆ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ದಾನ ನೀಡಿದೆ. ಹಾಗೇ ಮನಸ್ಸಿಗೆ ಬಂದಂತೆ ಗನ್, ವೆಪನ್ ಪೂರೈಕೆ ಮಾಡುತ್ತಿರುವ ಆರೋಪ ಕೂಡ ಅಮೆರಿಕದ ಮೇಲಿದೆ.
ನೇರವಾಗಿ ಉಕ್ರೇನ್ ಬೆನ್ನಿಗೆ ಅಮೆರಿಕ!
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಸೇರಿ ನ್ಯಾಟೋ ಪಡೆಗಳು ನೀಡುತ್ತಿರುವ ಸಹಾಯವೇ ಉಕ್ರೇನ್ ಸೇನೆಯ ಕೃತ್ಯಗಳಿಗೆ ಕಾರಣ ಎಂಬ ಆರೋಪ ಇದೆ. ಇಷ್ಟುದಿನ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದ ಈ ರಾಷ್ಟ್ರಗಳು, ನೇರವಾಗಿ ಉಕ್ರೇನ್ ನೆರವಿಗೆ ನಿಂತಿವೆ. ಅಮೆರಿಕ ಸೇರಿದಂತೆ ನ್ಯಾಟೋ ಪಡೆಗಳು ಸದ್ಯ ಉಕ್ರೇನ್‌ಗೆ ಲಕ್ಷ ಲಕ್ಷ ಕೋಟಿ ನೆರವು ನೀಡುತ್ತಿವೆ. ಇದರ ಜೊತೆಗೆ ಅಮೆರಿಕ ತನ್ನ ಶಕ್ತಿಶಾಲಿ ಎಂದು ಹೇಳಿಕೊಳ್ಳುವ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಉಡುಗೊರೆಯಾಗಿ ಉಕ್ರೇನ್‌ಗೆ ನೀಡಿತ್ತು. ಆದರೆ ಈಗ ಅದು ಡಮ್ಮಿ ಎಂಬ ಆರೋಪ ಕೇಳಿಬಂದಿದೆ.

ಹೀಗೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಇನ್ನೇನು ಮುಗಿದೇ ಹೋಯಿತು ಎನ್ನುವ ಹೊತ್ತಲ್ಲೇ ಮತ್ತೆ ಮತ್ತೆ ಆ ಜಾಗದಲ್ಲಿ ಕಿಚ್ಚು ಹೊತ್ತಿಕೊಳ್ಳುತ್ತಿದೆ. ಅದರಲ್ಲೂ ಅಮೆರಿಕ ಇವರಿಬ್ಬರ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ರಷ್ಯಾ ಇದಕ್ಕೆಲ್ಲಾ ಭವಿಷ್ಯದಲ್ಲಿ ಯಾವ ರೀತಿಯಾಗಿ ರಿಯಾಕ್ಷನ್ ಕೊಡುತ್ತೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications