ಉಕ್ರೇನ್ ಆಸ್ಪತ್ರೆ ಮೇಲೆ ರಷ್ಯಾ ಸೇನೆಯಿಂದ ಡೆಡ್ಲಿ ಅಟ್ಯಾಕ್?
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಪ್ರಯತ್ನಗಳು ವಿಶ್ವಸಂಸ್ಥೆ ಮಟ್ಟದಲ್ಲಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ದಾಳಿ ಕೂಡ ಹೆಚ್ಚಾಗುತ್ತಿದೆ. ಈ ಮೂಲಕ ರಷ್ಯಾ ಇದೀಗ ಉಕ್ರೇನ್ ಕಥೆಯನ್ನೇ ಮುಗಿಸಿ ಹಾಕಲು ಸ್ಕೆಚ್ ಹಾಕಿದೆ, ಎನ್ನುವ ಭಾರಿ ಗಂಭೀರ ಆರೋಪ ಕೇಳಿಬಂದಿದೆ. ಅದರಲ್ಲೂ ಇಂದು ಉಕ್ರೇನ್ ದೇಶದ ಆಸ್ಪತ್ರೆಯ ಮೇಲೆ ಬಾಂಬ್ ಹಾಕಿರುವ ಆರೋಪ ಇದೀಗ ರಷ್ಯಾ ವಿರುದ್ಧ ಕೇಳಿಬಂದಿದೆ. ಹಾಗಾದ್ರೆ ಈ ದಾಳಿಯಲ್ಲಿ ಏನೆಲ್ಲಾ ಅನಾಹುತ ಸಂಭವಿಸಿದೆ? ಬನ್ನಿ ತಿಳಿಯೋಣ.
ರಷ್ಯಾ ಇದೀಗ ತನ್ನ ಬಳಿ ಇರುವ ಅತ್ಯಾಧುನಿಕ ಡ್ರೋನ್‌ಗಳನ್ನ ಬಳಸಿ, ಉಕ್ರೇನ್ ಈಶಾನ್ಯ ಭಾಗದ ಸುಮಿ ನಗರದ ಆಸ್ಪತ್ರೆಯ ಕಟ್ಟಡದ ಮೇಲೆ ದಾಳಿ ಮಾಡಿದೆ ಎಂಬ ಆರೋಪ ಈಗ ಕೇಳಿಬಂದಿದೆ. ದಿಢೀರ್ ರಷ್ಯಾ ಈ ರೀತಿಯ ದಾಳಿ ನಡೆಸಿದ್ದರಿಂದ ಉಕ್ರೇನ್ ಸೇನೆ ಕೂಡ ಈ ಸಮಯದಲ್ಲಿ ಅಸಹಾಯಕ ಪರಿಸ್ಥಿತಿಗೆ ಸಿಲುಕಿತ್ತು. ಒಂದೇ ಆಸ್ಪತ್ರೆಯ ಮೇಲೆ ಪದೇ ಪದೇ 2 ದಾಳಿ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ರಷ್ಯಾ ಹಾರಿಸಿದ 73 ಡ್ರೋನ್‌ಗಳಲ್ಲಿ 69 ಡ್ರೋನ್ ಹೊಡೆದು ಉರುಳಿಸಿದ್ದೇವೆ ಎಂದು ಉಕ್ರೇನ್ ತಿಳಿಸಿದೆ. ಇನ್ನುಳಿದ ಡ್ರೋನ್‌ಗಳು ಅನಾಹುತ ಸೃಷ್ಟಿ ಮಾಡುತ್ತಿವೆ. ಅಲ್ಲದೆ ರಷ್ಯಾ ಒಟ್ಟು 4 ಕ್ಷಿಪಣಿಗಳನ್ನ ಕೂಡ ಹಾರಿಸಿದ್ದು, ಇವುಗಳಲ್ಲಿ ಒಟ್ಟು 2 ಕ್ಷಿಪಣಿಗಳು ಉಡೀಸ್ ಆಗಿವೆ. ಹಾಗೇ ಘಟನೆಯಲ್ಲಿ 8 ಜನ ಮೃತಪಟ್ಟು 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು ಉಕ್ರೇನ್ ಸೇನೆ ಅಲರ್ಟ್ ಆಗಿದೆ. ಹಾಗೇ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಿದೆ.
ರಷ್ಯಾಗೆ ಸಹಾಯ ಮಾಡುತ್ತಿರುವುದು ಯಾರು?
2 ವರ್ಷಗಳಿಂದ ನಿರಂತರ ಯುದ್ಧ ನಡೆಸುತ್ತಿದ್ದರೂ ರಷ್ಯಾ ಬಳಿ ಇರುವ ಶಸ್ತ್ರಾಸ್ತ್ರಗಳು ಈ ಸಮಯದಲ್ಲೂ ಕಡಿಮೆ ಆಗಿಲ್ಲ. ಅಷ್ಟಕ್ಕೂ ರಷ್ಯಾಗೆ ಇಷ್ಟೆಲ್ಲಾ ಶಸ್ತ್ರಾಸ್ತ್ರಗಳು ಬರುತ್ತಿರುವುದು ಎಲ್ಲಿಂದ? ಎಂಬ ಪ್ರಶ್ನೆ ಇಡೀ ಜಗತ್ತಿನಾದ್ಯಂತ ಮೂಡಿದೆ. ಮತ್ತೊಂದು ಕಡೆ ಅಮೆರಿಕ ಈ ಬಗ್ಗೆ ಮಾಡುತ್ತಿರುವ ಆರೋಪದ ಪ್ರಕಾರ, ಚೀನಾ & ಉತ್ತರ ಕೊರಿಯಾ ಇದೀಗ ರಷ್ಯಾ ಸೇನೆ ನೆರವಿಗೆ ನಿಂತಿದ್ದು ಡ್ರೋನ್ ಸೇರಿದಂತೆ ಅಗತ್ಯ ಕ್ಷಿಪಣಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ರಷ್ಯಾ ಸೇನೆಗೆ ಸಪ್ಲೈ ಮಾಡುತ್ತಿವೆ ಎಂದು ಆರೋಪ ಮಾಡುತ್ತಿದೆ ಅಮೆರಿಕ. ಹೀಗಿದ್ದಾಗಲೇ ಅತ್ತ ಉಕ್ರೇನ್ ಕೂಡ ದಾಳಿ ಅರಂಭಿಸಿದ್ದು, ರಷ್ಯಾದ ಬೆಲ್ಗೊರೊಡ್ ವಲಯದಲ್ಲಿ ಉಕ್ರೇನ್ ಸೇನೆ ಹಾರಿಸಿದ್ದ 4 ಡ್ರೋನ್ ಪುಡಿ ಮಾಡಿರುವುದಾಗಿ ರಷ್ಯಾ ಸೇನೆ ತಿಳಿಸಿದೆ.
ಯುದ್ಧ ನಿಲ್ಲಿಸುವೆ ಎಂದ ಟ್ರಂಪ್!
ಡೊನಾಲ್ಡ್ ಟ್ರಂಪ್ ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆ ಚರ್ಚಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ನಾನು ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ರಷ್ಯಾ & ಉಕ್ರೇನ್ ಯುದ್ಧಕ್ಕೆ ತಕ್ಷಣ ಬ್ರೇಕ್ ಹಾಕುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹಾಗೇ, ಮತ್ತೊಂದು ಕಡೆ ಇದೇ ಸಮಯವನ್ನು ಕಮಲಾ ಹ್ಯಾರಿಸ್ ವಿರುದ್ಧ ಆರೋಪಕ್ಕೂ ವೇದಿಕೆ ಮಾಡಿಕೊಂಡಿದ್ದಾರೆ ಡೊನಾಲ್ಡ್ ಟ್ರಂಪ್. ರಷ್ಯಾ ಹಾಗೂ ಉಕ್ರೇನ್ ವಾರ್ ನಿಲ್ಲಿಸಲು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋತು ಹೋಗಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಟ್ರಂಪ್.












Click it and Unblock the Notifications