ಇಸ್ರೇಲ್ ವಿರುದ್ಧ ಮತ್ತೆ ಹಿಜ್ಬುಲ್ಲಾ ಕಿರಿಕ್: ರಾಕೆಟ್ ಹಾರಿಸಿ ಮಾಡಿದ್ದೇನು?
ಇಸ್ರೇಲ್ ವಿರುದ್ಧ ಮತ್ತೊಮ್ಮೆ ಘೋರ ದಾಳಿ ನಡೆದಿದೆ. ಒಂದು ಕಡೆ ಇಸ್ರೇಲ್ ಸೇನೆಯಿಂದ ಗಾಜಾ & ಲೆಬನಾನ್ ಸೇರಿದಂತೆ ಸಿರಿಯಾದಲ್ಲಿ ಕಾರ್ಯಾಚರಣೆ ನಡೆಯುವ ಸಮಯದಲ್ಲೇ ಮತ್ತೊಂದು ಭಾರಿ ಸಂಚಲನ ಸೃಷ್ಟಿ ಮಾಡುವ ಘಟನೆ ವರದಿಯಾಗಿದೆ. ಪದೇ ಪದೇ ಕಿರಿಕ್ ಮಾಡುತ್ತಿರುವ ಹಿಜ್ಬುಲ್ಲಾ ಇದೀಗ ನೇರವಾಗಿ ಇಸ್ರೇಲ್ ಪ್ರಮುಖ ನಗರದ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಈ ಮೂಲಕವಾಗಿ ಭಯದ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಅರೆ, ಹಾಗಾದ್ರೆ ಅಸಲಿಗೆ ಇಸ್ರೇಲ್ ನೆಲದಲ್ಲಿ ಆಗಿದ್ದೇನು?
ಇಸ್ರೇಲ್ ಮಿಲಿಟರಿಗೆ ಈಗ ಒಂದೇ ಒಂದು ಗುರಿ ಇದೆ, ಅದು ಏನಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ತಮ್ಮ ಶತ್ರುಗಳು ಉಳಿಯಬಾರದು ಅಂತಾ ಗುಡುಗುತ್ತಿದೆ. ಇದೇ ಕಾರಣಕ್ಕೆ ಇಸ್ರೇಲ್ ಮನಸ್ಸಿಗೆ ಬಂದಂತೆ ದಾಳಿ ಮಾಡಿ, ಶತ್ರುಗಳನ್ನ ನಾಶ ಮಾಡಲು ಪ್ರಯತ್ನ ಆರಂಭಿಸಿದೆ. 2023ರ ಅಕ್ಟೋಬರ್ 7 ರಂದು ಇದೇ ಇಸ್ರೇಲ್ ವಿರುದ್ಧ ಗಾಜಾ ಪಟ್ಟಿ ಭಾಗದಿಂದ ಹಮಾಸ್ ಉಗ್ರರು ದಾಳಿ ನಡೆಸಿದ್ದರು. ಆ ನಂತರ ಘೋರ ಯುದ್ಧ ಶುರುವಾಗಿತ್ತು. ಹೀಗೆ ಯುದ್ಧ ಶುರುವಾದ ನಂತರ ಸಾಲು ಸಾಲು ಸಮಸ್ಯೆ ಎದುರಾಗುತ್ತಿದ್ದು, ಜನರು ಕೂಡ ನಲುಗಿ ಹೋಗಿದ್ದಾರೆ. ಇಂತಹ ಸಮಯದಲ್ಲೇ ಎಲ್ಲಾ ಸೈಲೆಂಟ್ ಆಗಿದೆ ಅಂತಾ ಆ ಭಾಗದಲ್ಲಿ ನಿಟ್ಟುಸಿರು ಬಿಡುವಾಗ ಮತ್ತೊಮ್ಮೆ ಹಿಜ್ಬುಲ್ಲಾ ಏನು ಮಾಡಿದೆ ಗೊತ್ತಾ?

20ಕ್ಕೂ ಹೆಚ್ಚು ರಾಕೆಟ್ ಮೂಲಕ ದಾಳಿ?
ಮಧ್ಯಪ್ರಾಚ್ಯ ಈಗ ಹೇಗೆ ಆಗಿದೆ ಅಂದ್ರೆ, ಕೊತ ಕೊತ ಕುದಿಯುತ್ತಿರುವ ಜ್ವಾಲಾಮುಖಿ ನೆನಪು ಮಾಡಿ ಭಯ & ಆತಂಕ ಹುಟ್ಟಿಸಿದೆ. ಯಾಕಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ಒಂದಾದ ನಂತರ ಒಂದು ಯುದ್ಧ ಶುರುವಾಗಿ ಜಾಗತಿಕ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿದೆ. ಹೀಗಿದ್ದಾಗಲೇ ಹಿಜ್ಬುಲ್ಲಾ ಬಂಡುಕೋರರು ಸೈಲೆಂಟ್ ಆಗಿ ಇರದೆ, ಇಸ್ರೇಲ್‌ನ ಹೆಚ್ಚು ಜನವಸತಿ ಪ್ರದೇಶಗಳನ್ನು ಗುರಿಯಾಗಿರಿಸಿ ಇದೀಗ ರಾಕೆಟ್ ದಾಳಿ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹಿಜ್ಬುಲ್ಲಾ ಬಂಡುಕೋರರಿಂದ ದಾಳಿ ನಡೆದ ತಕ್ಷಣ ಇಸ್ರೇಲ್ ಒಳಗೆ ಸೈರನ್ ಸದ್ದು ಮೊಳಗಿದ್ದು, 20ಕ್ಕೂ ಹೆಚ್ಚು ರಾಕೆಟ್ ಮೂಲಕ ಈ ದಾಳಿ ನಡೆದಿದೆ ಎಂದು ಆರೋಪ ಮಾಡಲಾಗಿದೆ.
ತಿಕ್ಕಾಟ ಇನ್ನಷ್ಟು ಹೆಚ್ಚಾಗುವ ಆತಂಕ!
ಅಂದಹಾಗೆ ಲೆಬನಾನ್ ಭಾಗದಲ್ಲಿ ಬೀಡು ಬಿಟ್ಟಿರುವ ಹಿಜ್ಬುಲ್ಲಾ ಬಂಡುಕೋರರು ಈ ರೀತಿ ಅಟ್ಯಾಕ್ ಮಾಡ್ತಿದ್ದಾರೆ ಎಂಬ ಆರೋಪ ಇದೆ. ಮತ್ತೊಂದು ಕಡೆ ಹಿಜ್ಬುಲ್ಲಾಗೆ ಹಣದ ಸಹಾಯ ಮಾಡುತ್ತಿರುವ ಆರೋಪದ ಹಿನ್ನೆಲೆ 'ಅಲ್-ಖರ್ದ್-ಅಲ್ ಹಸನ್' ಬ್ಯಾಂಕ್ ಬ್ರಾಂಚ್‌ಗಳ ಮೇಲೆ ದಾಳಿ ನಡೆದಿತ್ತು, ಈ ಹಿನ್ನೆಲೆಯಲ್ಲಿ ಹಿಜ್ಬುಲ್ಲಾ ಮರುದಾಳಿ ನಡೆಸಿರುವ ಆರೋಪ ಕೇಳಿಬಂದಿದೆ.
ಯಾಹ್ಯಾ ಸಿನ್ವಾರ್ ಹತ್ಯೆ ಬೆನ್ನಲ್ಲೇ ಮತ್ತಷ್ಟು ತಿಕ್ಕಾಟ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಘೋರತೆ ಪಡೆಯುವ ಭಯ ಕಾಡತೊಡಗಿದೆ. ಆದ್ರೆ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಯನ್ನ ಇಸ್ರೇಲ್ ಸೇನೆ ಎದುರಿಸಿದ್ದು, ಇನ್ನಷ್ಟು ದೊಡ್ಡ ಮಟ್ಟದಲ್ಲಿ ಲೆಬನಾನ್ ಮೇಲೆ ಅದರಲ್ಲೂ ಲೆಬನಾನ್ ರಾಜಧಾನಿ ಮೇಲೆ ಇಸ್ರೇಲ್ ಮಿಲಿಟರಿ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications