ಇಸ್ರೇಲ್ ಮತ್ತೊಂದು ಯುದ್ಧಕ್ಕೆ ರಣಕಹಳೆ ಮೊಳಗಿಸುತ್ತಾ?
ಇಸ್ರೇಲ್ & ಗಾಜಾ ನಡುವೆ ನಡೆಯುತ್ತಿರುವ ರಣಭೀಕರ ಯುದ್ಧ ಇನ್ನೂ ನಿಂತಿಲ್ಲ. ಹೀಗೆ, ಇಬ್ಬರ ನಡುವೆ ಭಾರಿ ರಣಕಾಳಗ ನಡೆಯುತ್ತಿರುವ ಸಮಯದಲ್ಲೇ ಯುದ್ಧ ನಿಲ್ಲಿಸೋದಕ್ಕೂ ಜಗತ್ತು ಪರದಾಡುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯದಲ್ಲೇ ಮತ್ತೊಂದು ಯುದ್ಧಕ್ಕೆ ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ.
ಹೌದು, ಕಳೆದ 8 ತಿಂಗಳಿಂದ ಇಸ್ರೇಲ್ ಸೇನೆ & ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ದೊಡ್ಡ ಅವಾಂತರ ಸೃಷ್ಟಿ ಮಾಡಿದೆ. ಈಗಾಗಲೇ ಸಾವಿರಾರು ಜನ ಜೀವ ಕಳೆದುಕೊಂಡು, ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿದೆ. ಹೀಗಿದ್ದರೂ ಇಸ್ರೇಲ್ ಮಾತ್ರ ಸುಮ್ಮನೆ ಕೂರುತ್ತಿಲ್ಲ. ಅದರ ಬದಲಾಗಿ ಗಾಜಾ ವಿರುದ್ಧದ ಯುದ್ಧ ನಿಲ್ಲಿಸಿ ಮತ್ತೊಂದು ಯುದ್ಧ ಆರಂಭ ಮಾಡಲು ಸಜ್ಜಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಇಸ್ರೇಲ್ ಪ್ರಧಾನಿ ಕೂಡ, ಹೇಳಿಕೆಗಳನ್ನ ನೀಡುತ್ತಿರುವುದು ಆತಂಕ ಹೆಚ್ಚಿಸಿದೆ.

35,000ಕ್ಕೂ ಹೆಚ್ಚು ಜನ ಬಲಿ
ಜಾಗತಿಕ ಮಟ್ಟದಲ್ಲಿ ಇಸ್ರೇಲ್ ನಡೆಯ ಬಗ್ಗೆ ಬೇಸರ ವ್ಯಕ್ತವಾಗಿದ್ದು, ಹೀಗೆಲ್ಲ ಇಸ್ರೇಲ್ ವಿರುದ್ಧ ಜಗತ್ತು ರೊಚ್ಚಿಗೇಳಲು ಸ್ವತಃ ಇಸ್ರೇಲ್ ಕಾರಣ. ಯಾಕೆ ಅಂದ್ರೆ ಹಮಾಸ್ ಉಗ್ರರನ್ನು ಹೊಡೆದು ಉರುಳಿಸುವ ನೆಪದಲ್ಲಿ ಇಸ್ರೇಲ್ ಸೇನೆ ಗಾಜಾ ಪ್ರದೇಶದಲ್ಲಿ ಸಾಮಾನ್ಯ ಜನರು ಮತ್ತು ನಿರಾಶ್ರಿತ ಶಿಬಿರದ ಮೇಲೆ ದಾಳಿ ಮಾಡಿ ಸಾಯಿಸುತ್ತಿದೆ ಎಂಬ ಆರೋಪ ಇದೆ. 35000ಕ್ಕೂ ಹೆಚ್ಚು ಜನರು ಈಗಾಗಲೇ ಜೀವ ಬಿಟ್ಟಿರುವಾಗ, ಗಾಜಾದ ಯುದ್ಧ ನಿಲ್ಲಿಸಿ ಮತ್ತೊಂದು ಯುದ್ಧಕ್ಕೆ ಇಸ್ರೇಲ್ ಸಜ್ಜಾಗಿದೆ ಎಂಬ ಸುದ್ದಿ ಭಾರಿ ಆಕ್ರೋಶ ಮೊಳಗುವಂತೆ ಮಾಡಿದೆ.












Click it and Unblock the Notifications