ಮಾತು ಕೇಳದ ತೈವಾನ್‌ಗೆ ಚೀನಾ ಸೇನೆಯ ಮದ್ದು ಗುಂಡುಗಳ ಎಚ್ಚರಿಕೆ!
ಬೀಜಿಂಗ್: ಚೀನಾ & ತೈವಾನ್ ನಡುವಿನ ಸಂಬಂಧ ಕ್ಷಣಕ್ಷಣಕ್ಕೂ ಹದಗೆಟ್ಟು, ಉಕ್ರೇನ್ & ರಷ್ಯಾ ಯುದ್ಧದ ರೀತಿಯೇ ಬದಲಾಗುತ್ತಿದೆ. ಅಮೆರಿಕ ಜೊತೆ ತೈವಾನ್ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುವಾಗ ಚೀನಾ ಎಚ್ಚರಿಕೆ ನೀಡಿ, ಈ ಒಪ್ಪಂದ ಮಾಡಿಕೊಳ್ಳಬೇಡಿ ಎಂದಿತ್ತು. ಇದರ ಜೊತೆಗೆ ಚೀನಾ ಸಮೀಪ ಅಮೆರಿಕ ಜಂಟಿ ಸಮರಭ್ಯಾಸ ನಡೆಸಿ ಪರಿಸ್ಥಿತಿ ಕೈಮೀರಿ ಹೋಗಿದೆ.
ಹೌದು, ಪಶ್ಚಿಮ ಫೆಸಿಪಿಕ್ ಭಾಗದಲ್ಲಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ಜಂಟಿಯಾಗಿ ನೌಕಾ ತಾಲೀಮು ನಡೆಸಿದ ಬೆನ್ನಲ್ಲೇ ಚೀನಾ ಕೂಡ ರೊಚ್ಚಿಗೆದ್ದಿದೆ. ಇಂದು ಪೂರ್ವ ಚೀನಾ ಸಮುದ್ರದಿಂದ ತೈವಾನ್‌ನ ಉತ್ತರ ಭಾಗದವರೆಗೆ ಚೀನಾ ಸೇನಾ ಸಮರಾಭ್ಯಾಸ ನಡೆಸಿದೆ. ಇದು ಎರಡೂ ರಾಷ್ಟ್ರದ ನಡುವಿನ ತಿಕ್ಕಾಟವನ್ನ ಇನ್ನಷ್ಟು ಹೆಚ್ಚು ಮಾಡಿದೆ. ಪದೇ ಪದೆ ಇದೇ ರೀತಿ ಎಚ್ಚರಿಕೆ ನೀಡುತ್ತಿರುವ ಚೀನಾ, ತೈವಾನ್‌ಗೆ ನೇರ ಯುದ್ಧಕ್ಕೆ ಆಹ್ವಾನ ನೀಡಿದಂತೆ ಭಾಸವಾಗುತ್ತಿದೆ. ಆದ್ರೆ ತೈವಾನ್ ದಿಢೀರ್ ಚೀನಾ ಎದುರಿಸುವಷ್ಟು ಶಕ್ತಿಯುತವಾಗಿ ಇಲ್ಲ. ಹೀಗಾಗಿ ಅಮೆರಿಕದ ಸಹಾಯ ಬಯಸುತ್ತಿದೆ (Taiwan China).

ಜಂಟಿ ಸಮರಭ್ಯಾಸಕ್ಕೆ ತಕ್ಕ ಉತ್ತರ?
ಇದೀಗ ಚೀನಾ ಸಮರಭ್ಯಾಸ ಅಥವಾ ಮಿಲಿಟರಿ ಡ್ರಿಲ್ ನಡೆಸಿರುವುದು ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ. ಇನ್ನು ಇಲ್ಲಿಂದ ಸ್ವಲ್ಪ ದೂರದಲ್ಲಿ ಇತ್ತೀಚೆಗಷ್ಟೇ ಅಮೆರಿಕ ಯುದ್ಧನೌಕೆ & ಚೀನಾ ಯುದ್ಧನೌಕೆ ಮುಖಾಮುಖಿ ಆಗಿದ್ದವು. ಈಗ ಮತ್ತೆ ಯುದ್ಧನೌಕೆಗಳ ಮೂಲಕ ಭಾರಿ ತಾಲೀಮು ನಡೆಸಿದೆ ಚೀನಾ ಸೇನೆ. ಈ ನಡುವೆ ಫೈರಿಂಗ್ ನಡೆದಿದೆ ಎಂದು ತೈವಾನ್ ಸೇನೆ ಆರೋಪ ಮಾಡುತ್ತಿದೆ. ಫಿಲಿಫೈನ್ಸ್ ಸಮುದ್ರದಲ್ಲಿ ಇತ್ತೀಚೆಗೆ ಅಮೆರಿಕ, ಜಪಾನ್, ಕೆನಡಾ ಮತ್ತು ಫ್ರಾನ್ಸ್ ಜಂಟಿಯಾಗಿ ಸಮರಾಭ್ಯಾಸ ನಡೆಸಿದ್ದವು. ಈ ಘಟನೆಗೆ ಪ್ರತಿಯಾಗಿ ಚೀನಾ ಈ ಸೇನಾ ಸಮರಭ್ಯಾಸ ನಡೆಸಿದೆ ಎನ್ನಲಾಗುತ್ತಿದೆ (Taiwan China War).
ಚೀನಾ ಸಿಟ್ಟಿಗೆ ಕಾರಣ ಏನು?
ತೈವಾನ್ ತನ್ನ ದೇಶದ ಭಾಗ ಎಂದು ಚೀನಾ ಪ್ರತಿಪಾದನೆ ಮಾಡುತ್ತಲೇ ಬಂದಿದೆ. ಅದರಲ್ಲೂ ತೈವಾನ್ ನಾಯಕರು ಅಮೆರಿಕ ಜೊತೆ ಸಂಬಂಧ ಬೆಸೆಯಲು ಹೋದರೆ ಸೇನೆಯನ್ನೇ ನುಗ್ಗಿಸಿ ವಾರ್ನಿಂಗ್ ಕೊಡುತ್ತಿದೆ. ಈ ಹೊತ್ತಲ್ಲಿ ಅಮೆರಿಕ ಕೂಡ ಚೀನಾನ ಇನ್ನಷ್ಟು ರೊಚ್ಚಿಗೆಬ್ಬಿಸಿದ ಆರೋಪ ಇದೆ. ತೈವಾನ್ ಜೊತೆಗೆ ವ್ಯಾಪಾರ ಮಾಡುವಾಗ ಎಚ್ಚರ ಎಂದು 2 ವಾರದ ಹಿಂದೆ ಅಮೆರಿಕಗೆ ಎಚ್ಚರಿಕೆ ನೀಡಿತ್ತು ಚೀನಾ. ಇದಾದ ಬಳಿಕ ತೈವಾನ್ ಮತ್ತು ಚೀನಾ ಸಮೀಪವೇ ಜಂಟಿ ಸಮರಭ್ಯಾಸ ನಡೆಸಲಾಗಿತ್ತು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಚೀನಾದ ಸೇನೆ ಈಗ ಮದ್ದು, ಗುಂಡುಗಳ ಮೂಲಕ ಉತ್ತರ ನೀಡಿದೆ.

4 ಸಾವಿರ ಕೋಟಿ ರೂ. ಶಸ್ತ್ರಾಸ್ತ್ರ ಪೂರೈಕೆ?
ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ವೇಳೆ ತೈವಾನ್‌ಗೆ ಅಮೆರಿಕ 4 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾಗಿದೆ ಎಂಬ ಮಾತು ಓಡಾಡ್ತಿದೆ. ಮತ್ತೊಂದ್ಕಡೆ ತೈವಾನ್ ಸೇನೆಗೆ ಅಗತ್ಯ ಇರುವ ಯುದ್ಧನೌಕೆ ಹಾಗೂ ಯುದ್ಧ ವಿಮಾನಗಳನ್ನೂ ಅಮೆರಿಕ ಸೇನೆ ತೈವಾನ್‌ಗೆ ಪೂರೈಸಲು ಮುಂದಾಗಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಇದೆಲ್ಲವೂ ಚೀನಾ ಕೋಪ ಡಬಲ್ ಮಾಡಿದೆ. ಜೊತೆಗೆ ಅಮೆರಿಕ ವಿರುದ್ಧ ಚೀನಾ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಏನಿದು ಪದೇ ಪದೆ ಕಿರಿಕ್?
ಅಮೆರಿಕ ನಾಯಕರಿಂದ ಪದೇ ಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ತಿಂಗಳು ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನ ಪ್ರಯಾಣಿಸಿ ಸಿಟ್ಟು ತರಿಸಿತ್ತು ಅಮೆರಿಕ. ಬಳಿಕ ಚೀನಾ ತನ್ನ ಶಕ್ತಿ ಏನು ಅಂತಾ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ಇದೀಗ ಚೀನಾ ಮತ್ತೊಮ್ಮೆ ತೈವಾನ್ ಗಡಿಯಲ್ಲಿ ಸೇನಾ ತಾಲೀಮು ನಡೆಸಿ ಅಮೆರಿಕಗೆ ಸವಾಲು ಎಸೆದಿದೆ. ಆದರೆ ಇದಕ್ಕೆ ಅಮೆರಿಕ ಇನ್ನೂ ಯಾವ ಪ್ರತಿಕ್ರಿಯೆ ಕೂಡ ನೀಡಿಲ್ಲ. ಹೀಗಾಗಿ ಅಮೆರಿಕದ ಮುಂದಿನ ನಡೆ ಕೂಡ ಕುತೂಹಲ ಕೆರಳಿಸಿದೆ.












Click it and Unblock the Notifications