Israel: ಇಸ್ರೇಲ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ; ವಿಮಾನ ಸೇವೆ ರದ್ದುಗೊಳಿಸಿದ ಏರ್ ಇಂಡಿಯಾ
ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಮೇಲೆ ಭಾನುವಾರ ಬೆಳಿಗ್ಗೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ಮಾಡಿದ್ದಾರೆ. ಹೌತಿ ಬಂಡುಕೋರರ ದಾಳಿ ಬೆನ್ನಲ್ಲೇ ಏರ್ ಇಂಡಿಯಾ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ಎರಡು ದಿನಗಳ ಕಾಲ ವಿಮಾನ ಸೇವೆಯನ್ನು ರದ್ದುಗೊಳಿಸಿದೆ. ಕ್ಷಿಪಣಿ ದಾಳಿ ಬಳಿಕ ದೆಹಲಿಯಿಂದ ಟೆಲ್ ಅವಿವ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಅಬುದಾಭಿ ಕಡೆಗೆ ತಿರುಗಿಸಲಾಯಿತು.
ಟಿಕೆಟ್‌ಗಳನ್ನು ಹೊಂದಿರುವವರಿಗೆ ವಿನಾಯಿತಿ ಅಥವಾ ಮರು ವೇಳಾಪಟ್ಟಿಯನ್ನು ನೀಡಲಾಗುವುದು ಎಂದು ಏರ್ ಇಂಡಿಯಾ ಭರವಸೆ ನೀಡಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.

ಮೇ 4, 2025 ರಂದು ದೆಹಲಿಯಿಂದ ಟೆಲ್ ಅವೀವ್‌ಗೆ ಹಾರುತ್ತಿದ್ದ AI139 ಸಂಖ್ಯೆಯ ಏರ್ ಇಂಡಿಯಾ ವಿಮಾನವನ್ನು ಭಾನುವಾರ ಬೆಳಿಗ್ಗೆ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ನಂತರ ಅಬುಧಾಬಿಗೆ ತಿರುಗಿಸಲಾಯಿತು. ವಿಮಾನವು ಅಬುಧಾಬಿಯಲ್ಲಿ ಇಳಿದಿದೆ ಮತ್ತು ಶೀಘ್ರದಲ್ಲೇ ದೆಹಲಿಗೆ ವಾಪಸಾಗಲಿದೆ. ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ನಮ್ಮ ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೇ 6, 2025 ರವರೆಗೆ ಸ್ಥಗಿತಗೊಳಿಸಲಾಗುತ್ತದೆ. ನಮ್ಮ ಸಿಬ್ಬಂದಿ ಗ್ರಾಹಕರಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಪರ್ಯಾಯ ವ್ಯವಸ್ಥೆಗಳೊಂದಿಗೆ ಸಹಾಯ ಮಾಡಲಾಗುತ್ತದೆ ಎಂದು ಏರ್ ಇಂಡಿಯಾ ಹೇಳಿಕೆ ನೀಡಿದೆ.
ಪ್ರಯಾಣಿಕರಿಗೆ ಏರ್ ಇಂಡಿಯಾ ಭರವಸೆ
ಮೇ 4ರಿಂದ ಮೇ 6ರವರೆಗೆ ಟಿಕೆಟ್ ಬುಕ್ ಮಾಡಿದ್ದವರಿಗೆ, ಮೇ 6ರ ಬಳಿಕ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಅಥವಾ ಟಿಕೆಟ್ ರದ್ದು ಮಾಡಿದವರಿಗೆ ಪೂರ್ಣ ಹಣ ವಾಪಸ್ ನೀಡಲಾಗುತ್ತದೆ . ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ.
ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ
ಯೆಮೆನ್‌ನಿಂದ ಹಾರಿಸಲಾದ ಕ್ಷಿಪಣಿ ಬೆನ್ ಗುರಿಯನ್ ವಿಮಾನ ನಿಲ್ದಾಣದ ಮುಖ್ಯ ಟರ್ಮಿನಲ್ ಬಳಿ ಬಿದ್ದಿದ್ದು ನಾಲ್ಕು ಜನ ಗಾಯಗೊಂಡಿದ್ದಾರೆ. ಕ್ಷಿಪಣಿ ದಾಳಿ ಬಳಿಕ ಕೆಲ ಸಮಯ ವಿಮಾನ ಹಾರಾಟದಲ್ಲಿ ಅಡಚಣೆ ಉಂಟಾಗಿತ್ತು. ಬಳಿಕ ಎಂದಿನಂತೆ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ, ಬೆನ್ ಗುರಿಯನ್ ವಿಮಾನ ನಿಲ್ದಾಣವು ಇನ್ನು ಮುಂದೆ ವಿಮಾನ ಪ್ರಯಾಣಕ್ಕೆ ಸುರಕ್ಷಿತವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಬಲವಾದ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ನಮಗೆ ಯಾರಾದರೂ ಹೊಡೆದರೆ, ನಾವು ಅವರಿಗೆ ಏಳು ಪಟ್ಟು ಹೆಚ್ಚು ಹೊಡೆಯುತ್ತೇವೆ ಎಂದು ಹೌತಿ ಬಂಡುಕೋರರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.












Click it and Unblock the Notifications