Air India: ಟಾಯ್ಲೆಟ್ ಬ್ಲಾಕ್; ದೆಹಲಿಗೆ ಹೊರಟಿದ್ದ ವಿಮಾನ ಚಿಕಾಗೋಗೆ ವಾಪಸ್; ಏರ್ ಇಂಡಿಯಾ ಹೇಳಿದ್ದೇನು?
2025ರ ಮಾರ್ಚ್ 5ರಂದು ಚಿಕಾಗೋದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾದ AI126 ವಿಮಾನದಲ್ಲಿ ಶೌಚಾಲಯ ಬ್ಲಾಕ್ ಆದ ಬಳಿಕ ವಿಮಾನವು ವಾಪಸ್ ಚಿಕಾಗೋಗೆ ವಾಪಸ್ ಆಗಿತ್ತು. ಈ ಬಗ್ಗೆ ವಿಮಾನದ ಪ್ರಯಾಣಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಏರ್ ಇಂಡಿಯಾ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಘಟನೆ ಬಗ್ಗೆ ತನಿಖೆ ಮಾಡಿದ್ದು ಪಾಲಿಥಿನ್ ಚೀಲಗಳು, ಚಿಂದಿ ಮತ್ತು ಬಟ್ಟೆಗಳನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಿದ್ದು, ಅವು ಪೈಪ್‌ನಲ್ಲಿ ಸಿಲುಕಿಕೊಂಡ ಕಾರಣ ಸಮಸ್ಯೆಯಾಗಿತ್ತು ಎಂದು ಹೇಳಿದೆ.
ಮಾರ್ಚ್ 05, 2025 ರಂದು ಚಿಕಾಗೋದಿಂದ ದೆಹಲಿಗೆ ಹೊರಟಿದ್ದ AI126 ವಿಮಾನದಲ್ಲಿ ಬ್ಲಾಕ್ ಆದ ಶೌಚಾಲಯಗಳ ಕುರಿತು ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನೋಡಿದ್ದೆವು, ಇದರಿಂದಾಗಿ ವಿಮಾನವು ವಾಪಸ್ ಚಿಕಾಗೋದ ಒ'ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾಯಿತು.

ಘಟನೆ ಬಗ್ಗೆ ಏರ್ ಇಂಡಿಯಾ ತನಿಖೆ ನಡೆಸಿದ್ದು, ನಮ್ಮ ತಂಡಗಳಿಗೆ ಫ್ಲಶ್ ಮಾಡಿರುವ ಪಾಲಿಥಿನ್ ಚೀಲಗಳು, ಚಿಂದಿ ಮತ್ತು ಬಟ್ಟೆಗಳು ಪೈಪ್‌ನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಇದರಿಂದಲೇ ಶೌಚಾಲಯಗಳು ಬ್ಲಾಕ್ ಆಗಿದ್ದು ಬಳಕೆ ಮಾಡಲಾಗದ ಪರಿಸ್ಥಿತಿ ಉಂಟಾಗಿತ್ತು ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನದ ಮಾರ್ಗ ಬದಲಾವಣೆಯಿಂದಾಗಿ ಪ್ರಯಾಣಿಕರಿಗೆ ಅನಾನುಕೂಲವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದೆ. ವಿಮಾನವು 16.48 ಗಂಟೆಗಳಿಗೆ ಸಮಯಕ್ಕೆ ಸರಿಯಾಗಿ ಹೊರಟಿತು ಎಂದು ಏರ್ ಇಂಡಿಯಾ ತಿಳಿಸಿದೆ. ಚಿಕಾಗೋದಿಂದ ದೆಹಲಿಗೆ ಹೊರಟ ಸುಮಾರು ಒಂದು ಗಂಟೆ 45 ನಿಮಿಷಗಳ ನಂತರ, ಬ್ಯುಸಿನೆಸ್ ಮತ್ತು ಎಕಾನಮಿ ಕ್ಲಾಸ್‌ನಲ್ಲಿರುವ ಕೆಲವು ಶೌಚಾಲಯಗಳು ಬಳಸಲು ಯೋಗ್ಯವಾಗಿಲ್ಲ ಎಂದು ಸಿಬ್ಬಂದಿ ವರದಿ ಮಾಡಿದ್ದರು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನದಲ್ಲಿರುವ 12 ಶೌಚಾಲಯಗಳಲ್ಲಿ ಎಂಟು ಶೌಚಾಲಯಗಳು ಬಳಸಲು ಯೋಗ್ಯವಾಗಿಲ್ಲದಂತಾಯಿತು, ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಆ ವೇಳೆಗಾಗಲೇ ವಿಮಾನವು ಅಟ್ಲಾಂಟಿಕ್ ಮೇಲೆ ಹಾರುತ್ತಿತ್ತು, ಯುರೋಪಿನ ಸ್ಥಳಗಳಲ್ಲಿ ಇಳಿಯಲು ಅವಕಾಶವಿತ್ತು, ಆದರೆ, ಹೆಚ್ಚಿನ ಯುರೋಪಿಯನ್ ವಿಮಾನ ನಿಲ್ದಾಣಗಳಲ್ಲಿ ರಾತ್ರಿ ಕಾರ್ಯಾಚರಣೆಗಳ ಮೇಲಿನ ನಿರ್ಬಂಧ ಇದ್ದ ಕಾರಣ ವಿಮಾನವನ್ನು ವಾಪಸ್ ಚಿಕಾಗೋ ಕಡೆಗೆ ತಿರುಗಿಸಲಾಯಿತು ಎಂದು ಮಾಹಿತಿ ನೀಡಿದೆ.
ಪ್ರಯಾಣಿಕರ ಅನುಕೂಲ ಮತ್ತು ಹಿತದೃಷ್ಟಿಯಿಂದಾಗಿ ಚಿಕಾಗೋಗೆ ವಾಪಸ್ ತೆರಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಚಿಕಾಗೋದಲ್ಲಿ ಇಳಿದ ಬಳಿಕ, ಎಲ್ಲಾ ಪ್ರಯಾಣಿಕರಿಗೆ ಹೋಟೆಲ್ ವಸತಿ ಮತ್ತು ದೆಹಲಿಗೆ ಪ್ರಯಾಣ ಮುಂದುವರಿಸಲು ಪರ್ಯಾಯ ವಿಮಾನ ಆಯ್ಕೆಗಳು ಸೇರಿದಂತೆ ತಕ್ಷಣದ ಸಹಾಯವನ್ನು ನೀಡಲಾಗಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.
ನಮ್ಮ ತಂಡಗಳು ಈ ಹಿಂದೆ ಇತರ ವಿಮಾನಗಳಲ್ಲಿ ಶೌಚಾಲಯಗಳಲ್ಲಿ ಫ್ಲಶ್ ಮಾಡಲಾದ ಇತರ ತ್ಯಾಜ್ಯಗಳ ಜೊತೆಗೆ ಒಳ ಉಡುಪುಗಳು ಮತ್ತು ಡೈಪರ್‌ಗಳಂತಹ ವಸ್ತುಗಳು ಕೂಡ ಸಿಕ್ಕಿವೆ. ಪ್ರಯಾಣಿಕರು ಶೌಚಾಲಯಗಳನ್ನು ಅವು ಉದ್ದೇಶಿಸಿರುವ ಉದ್ದೇಶಗಳಿಗಾಗಿ ಮಾತ್ರ ಬಳಸುವಂತೆ ಮನವಿ ಮಾಡಲಾಗಿದೆ.












Click it and Unblock the Notifications