ಕೊರೊನಾ ಹೋಯ್ತು.. ಮೆದುಳು ತಿನ್ನುವ ‘ಹುಳು’ ಬಂತು!
ವಾಷಿಂಗ್ಟನ್: ಮನುಷ್ಯ ಮಾಡುವ ಎಡವಟ್ಟು ಒಂದೆರಡಲ್ಲ, ಪ್ರಕೃತಿ ಮೇಲೆ ಭೀಕರ ದೌರ್ಜನ್ಯ ನಡೆಸುತ್ತಾ ಭೂಮಿ ನಾಶಕ್ಕೆ ಮನುಷ್ಯ ಮುನ್ನುಡಿ ಬರೆದಿದ್ದಾನೆ. ಇಂತಿಪ್ಪ ಮನುಷ್ಯನಿಗೆ ಅಂತ್ಯ ಕಾಣಿಸಲು ಪ್ರಕೃತಿಯೂ ಪಣತೊಟ್ಟಿದ್ದು, ಕೊರೊನಾ ಕಂಟಕ ತೊಲಗಿದ ಬಳಿಕ ಮೆದುಳು ತಿನ್ನುವ 'ಹುಳು'ಗಳು ಆರ್ಭಟಿಸುತ್ತಿವೆ. ಈ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು ಎಲ್ಲಿ ಗೊತ್ತಾ? ಇಲ್ಲಿ ತಿಳಿಯೋಣ.
ನಿಮಗೆಲ್ಲಾ ಗೊತ್ತಿರುವಂತೆ 2020ರ ನಂತರ ಬರೋಬ್ಬರಿ 3 ವರ್ಷ ಕಾಲ ಕೊರೊನಾ ಎಂಬ ಕಂಟಕ ಜಗತ್ತನ್ನ ನಡುಗಿಸಿತ್ತು. ಕೋಟ್ಯಂತರ ಜನರಿಗೆ ಸೋಂಕು ತಗುಲಿ, ಹತ್ತಾರು ಲಕ್ಷ ಜನ ಜೀವ ಬಿಟ್ಟರು. ಹೀಗೆ ಕೊರೊನಾ ಆರ್ಭಟ ತೋರಿತ್ತು, ಇನ್ನೊಂದ್ಕಡೆ ಮೆದುಳು ತಿನ್ನುವ 'ಹುಳು'ಗಳ (Brain Eating Amoeba) ಆರ್ಭಟ ಈಗ ಶುರುವಾಗಿದೆ. ಅಮೆರಿಕದಲ್ಲಿ ಮಕ್ಕಳ ಮೇಲೆ ಇದೇ ರೀತಿ ಹಲವು ಸೋಂಕು ಹರಡುತ್ತಿರುವುದು ಆತಂಕ ಸೃಷ್ಟಿ ಮಾಡಿದೆ. ಜೀವವನ್ನೇ ತೆಗೆಯುವ ಮೆದುಳು ತಿನ್ನುವ ಅಮೀಬಾ ಬಗ್ಗೆ ತಿಳಿಯೋಣ ಬನ್ನಿ.

ಮೆದುಳು ಸೇರಿದರೆ ಜೀವ ಹೋಗುತ್ತೆ!
ಅಮೆರಿಕವನ್ನ ಒಂದಿಲ್ಲೊಂದು ಸಮಸ್ಯೆ ಬಿಟ್ಟೂಬಿಡದೆ ಕಾಡುತ್ತಿದೆ. ಅದರಲ್ಲೂ ಕೊರೊನಾ ಅಪ್ಪಳಿಸಿದ ಬಳಿಕ ಅಮೆರಿಕ ಅಕ್ಷರಶಃ ನಲುಗಿ ಹೋಗಿದೆ. ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿದ್ದ ಅಮೆರಿಕದ ಬುಡ ಅಲುಗಾಡಿದೆ. ಈ ಹೊತ್ತಲ್ಲೇ ಅಮೆರಿಕದಲ್ಲಿ ಹೊಸ ಹೊಸ ರೋಗ ಕಾಣಿಸುತ್ತಿವೆ. ಮೆದುಳು ತಿನ್ನುವ ಅಮೀಬಾ ಕಾಟ ಅಮೆರಿಕನ್ನರ ಪಾಲಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. 'ನಾಗ್ಲೆರಿಯಾ ಫೌಲೆರಿ' ಅಥವಾ ಮೆದುಳು ತಿನ್ನುವ ಅಮೀಬಾ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು. ಈ ಅಮೀಬಾ ಎಷ್ಟು ಡೇಂಜರಸ್ ಗೊತ್ತಾ? ಮುಂದೆ ಓದಿ.
1 ವಾರದಲ್ಲಿ ಜೀವವನ್ನೇ ತೆಗೆಯುತ್ತೆ
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ಅದೆಷ್ಟು ಡೇಂಜರಸ್ ಅಂದ್ರೆ, ಸೋಂಕಿಗೆ ಸರಿಯಾದ ಔಷಧ ಲಭ್ಯವಿಲ್ಲ. ಅಕಸ್ಮಾತ್ ನಾಗ್ಲೆರಿಯಾ ಫೌಲೆರಿ ಮನುಷ್ಯನ ಮೆದುಳು ಸೇರಿದರೆ ಆ ಕ್ಷಣದಿಂದಲೇ ಮೆದುಳಿನ ಮೇಲೆ ದಾಳಿ ಮಾಡಿ ತಿನ್ನಲು ಆರಂಭಿಸುತ್ತದೆ ಅಂತೆ. ಕೇವಲ 1 ವಾರದಲ್ಲಿ ಆತನ ಜೀವವನ್ನೇ ತೆಗೆದುಬಿಡುತ್ತದೆ. ಇದ್ಯಾವುದೂ ಸೋಂಕಿತನ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಖತರ್ನಾಕ್ ಈ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿಗಳು. ಹೀಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ನಡುವೆಯೂ ಅಮೆರಿಕದಲ್ಲಿ ಸೋಂಕು ವ್ಯಾಪಿಸುತ್ತಿದೆ.
ಜ್ವರ, ವಾಂತಿ, ತಲೆನೋವು ಲಕ್ಷಣ
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ದೇಹ ಪ್ರವೇಶಿಸಿದರೆ ಮೆಲ್ಲಗೆ ತನ್ನ ಕಾರ್ಯ ಚಟುವಟಿಕೆ ಆರಂಭಿಸುತ್ತದೆ. ಸೂಕ್ಷ್ಮಾಣು ಜೀವಿ ಕೆಲಸ ಆರಂಭಿಸಿದ ಒಂದೆರಡು ದಿನದಲ್ಲಿ ಜ್ವರ ಹಾಗೂ ತಲೆನೋವು ಕಾಡಲು ಆರಂಭವಾಗುತ್ತದೆ. ಹೀಗೆ ಆರಂಭವಾದ ಸೋಂಕಿನ ಲಕ್ಷಣ, ಭಾರಿ ಪ್ರಮಾಣದ ವಾಂತಿಯಾಗುವಂತೆ ಮಾಡುತ್ತೆ. ಮನುಷ್ಯನ ರೋಗನಿರೋಧಕ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿ, ಕಡೆಗೆ 1 ವಾರದ ಒಳಗಾಗಿ ಸೋಂಕಿತ ವ್ಯಕ್ತಿ ಮೃತಪಡುತ್ತಾನೆ. ಅಷ್ಟರೊಳಗೆ ಅಮಿಬಾ ವಂಶಕ್ಕೆ ಸೇರಿದ ಈ 'ನಾಗ್ಲೆರಿಯಾ ಫೌಲೆರಿ' ಸೂಕ್ಷ್ಮಾಣು ಜೀವಿ ಮೆದುಳನ್ನು ತಿಂದು ಮುಗಿಸಿರುತ್ತದೆ.
ಮೂಗಿನ ಒಳಗೆ ನೀರು ಹಾಕಬೇಡಿ!
ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಅಮೆರಿಕದ ಹಲವು ಕೆರೆಗಳಲ್ಲಿ ಕಂಡುಬಂದಿದೆ. ಹೀಗಾಗಿ ಅಮೆರಿಕದಲ್ಲಿ ಅಧಿಕಾರಿಗಳು ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಹಲವು ನಗರಗಳ ಜನರಿಗೆ ನೇರವಾಗಿ ಕೆರೆ ಅಥವಾ ನಲ್ಲಿ ನೀರನ್ನು ಮೂಗಿನ ಒಳಗೆ ಸೇರಿಸಬೇಡಿ ಎಂದಿದ್ದಾರೆ. ಏಕೆಂದರೆ ಮೂಗಿನಲ್ಲಿ ನೀರು ಹೋದರೆ ಇಂತಹ ಮೈಕ್ರೋಬ್‌ಗಳು ಮೆದುಳು ಸೇರುವುದು ತುಂಬಾ ಸುಲಭ. ಹೀಗೆ ಮೆದುಳು ಸೇರುವ ಸೂಕ್ಷ್ಮಾಣು ಜೀವಿ ನಾಗ್ಲೆರಿಯಾ ಫೌಲೆರಿ ತಕ್ಷಣ ಮೆದುಳನ್ನ ತಿನ್ನಲು ಶುರುಮಾಡುತ್ತದೆ. ಕಡೆಗೆ ಸೋಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗದೆ ಆತ ನರಳಿ ಪ್ರಾಣಬಿಡುತ್ತಾನೆ. ಹೀಗಾಗಿ ಮೂಗಿನ ಒಳಗೆ ನೀರು ಸೇರಿಸಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications